ಕನ್ನಡ ನಾಡಿನ ಆಟಗಾರರು ತಮ್ಮ ಒಡಲಲ್ಲಿ ಕಟ್ಟಿಕೊಂಡು ಬಂದಿರುವ ಕನಸಿನ ಗೋಪುರ ಕುಸಿಯುವ ಹಂತದಲ್ಲಿದೆ. ಕಾರಣ ತಮ್ಮ ಗುಹೆಯಲ್ಲಿ ತಾವೇ ಗುಂಡಿ ತೋಡಿಕೊಂಡು ಜಾರಿ ಬೀಳುವಂತೆ ಕಾಣುತ್ತಿದ್ದಾರೆ.
ಮೈಸೂರು: ಚಾಂಪಿಯನ್ ಮುಂಬೈ ವೇಗಿಗಳ ಎದುರು ರಾಜ್ಯದ ಅನನುಭವಿ ಬ್ಯಾಟ್ಸ್‌ಮನ್‌ಗಳು ತರಗೆಲೆಗಳಂತೆ ಉದುರಿ ಹೋಗಿದ್ದೇ ಅದಕ್ಕೆ ಸಾಕ್ಷಿ. ಆದರೆ ಮತ್ತೆ ತಿರುಗೇಟು ನೀಡಿರುವುದರಿಂದ ಪ್ರತಿಷ್ಠಿತ ರಣಜಿ ಫೈನಲ್ ರೋಚಕ ಘಟ್ಟ ತಲುಪಿದೆ.
ಹಾಗಾಗಿಯೇ ಗಂಗೋತ್ರಿ ಗ್ಲೇಡ್ಸ್ ಅಂಗಳದಲ್ಲಿ ಮಂಗಳವಾರವಿಡೀ ಒಮ್ಮೆ ಆತಂಕ, ಮತ್ತೊಮ್ಮೆ ಪುಳಕ, ಮಗದೊಮ್ಮೆ ನಡುಕದ ವಾತಾವರಣ ನಿರ್ಮಾಣವಾಗಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೆ ವಿಕೆಟ್‌ಗಳದ್ದೇ ಸುರಿಮಳೆ! ಒಟ್ಟು 14 ವಿಕೆಟ್ ಪತನಗೊಂಡವು.
ಮೂರನೇ ದಿನದಂತ್ಯಕ್ಕೆ ರಾಜ್ಯ ತಂಡದವರು ಮತ್ತೆ ತಿರುಗೇಟು ನೀಡುವಲ್ಲಿ ಸಫಲರಾದರೂ ಮುಂಬೈ ಮೇಲುಗೈ ಸಾಧಿಸಿದೆ. ಕಾರಣ ಮೊದಲ ಇನಿಂಗ್ಸ್‌ನಲ್ಲಿ ಲಭಿಸಿದ ಅಮೂಲ್ಯ 103 ರನ್‌ಗಳ ಲೀಡ್. ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 49.3 ಓವರ್‌ಗಳಲ್ಲಿ 130 ರನ್‌ಗಳಿಗೆ ಸರ್ವಪತನಗೊಂಡಿತು. ವೇಗಿ ಆವಿಷ್ಕಾರ್ ಸಾಳ್ವಿ (31ಕ್ಕೆ5) ಅವರ ಬೌಲಿಂಗ್ ದಾಳಿಗೆ ಕಂಗೆಟ್ಟು ಹೋದರು.
ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಮುಂಬೈ ಎರಡನೇ ದಿನದ ಆಟದ ಅಂತ್ಯಕ್ಕೆ 38 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 108 ರನ್ ಪೇರಿಸಿ ಆತಂಕಕ್ಕೆ ಸಿಲುಕಿದೆ. ಆದರೂ ಒಟ್ಟು 211 ರನ್‌ಗಳ ಮುನ್ನಡೆ ಮತ್ತೊಂದು ಪ್ರಶಸ್ತಿ ಗೆಲ್ಲುವ ಈ ತಂಡದ ಕನಸನ್ನು ಅರಳಿಸಿದೆ. ಇನ್ನೂ ಮೂರು ದಿನಗಳ ಆಟ ಬಾಕಿ ಉಳಿದಿದ್ದು ರಾಬಿನ್ ಉತ್ತಪ್ಪ ಪಡೆಯ ಮುಂದೆ ಈ ಋತುವಿನಲ್ಲಿಯೇ ಮೊದಲ ಬಾರಿಗೆ ದೊಡ್ಡ ಸವಾಲು ಎದುರಾಗಿದೆ. ಗೆಲುವಿನ ತವಕದಲ್ಲಿ ಸೋಲಿನ ಆತಂಕಕ್ಕೆ ಸಿಲುಕಿದ್ದಾರೆ.
ಪಂದ್ಯದ ಆರಂಭದ ದಿನ ಮುಂಬೈ ಕೂಡ 106 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಆದರೆ ಕೊನೆಯ ಸರದಿಯ ನಾಲ್ಕು ಮಂದಿ 127 ರನ್ ಸೇರಿಸಿದ್ದರು. ಎದುರಾಳಿಯ ತಾಕತ್ತನ್ನು ನಿರ್ಲಕ್ಷಿಸಿದ್ದರ ಫಲವಿದು! ಬಳಿಕ ರಾಜ್ಯ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸುವ ಮೂಲಕ ತಾವೇಕೇ ದೇಶಿ ಕ್ರಿಕೆಟ್‌ನ ದೊರೆ ಎಂಬುದನ್ನು ಮುಂಬೈ ತಂಡದವರು ಸಾಬೀತುಪಡಿಸಿದರು.
ಮಿಥುನ್ ತಿರುಗೇಟು: ಎರಡನೇ ಇನಿಂಗ್ಸ್ನಲ್ಲಿ ‘ಪೀಣ್ಯಾ ಎಕ್ಸ್‌ಪ್ರೆಸ್’ ಅಭಿಮನ್ಯು ಮಿಥುನ್ (39ಕ್ಕೆ4) ಪ್ರಭಾವಿ ದಾಳಿ ನಡೆಸಿ ಮುಂಬೈಗೆ ತಿರುಗೇಟು ನೀಡಿದರು. ಅವರ ದಾಳಿಗೆ ಸಿಲುಕಿದ ಜಾಫರ್ ಪಡೆ ಒಮ್ಮೆಲೇ ನಡುಗಿ ಹೋಯಿತು. ತಮ್ಮ ಮೊದಲ 3 ಓವರ್‌ಗಳಲ್ಲಿ ಅವರು 4 ಕಬಳಿಸಿದರು. ಹಾಗಾಗಿ ಒಂದು ಹಂತದಲ್ಲಿ ಕೇವಲ 51 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು.
ಆಗ ಅಭಿಷೇಕ್ ನಾಯರ್ (ಬ್ಯಾಟಿಂಗ್ 32; 103 ಎಸೆತ, 3 ಬೌಂಡರಿ) ಹಾಗೂ ಧವಳ್ ಕುಲಕರ್ಣಿ (ಬ್ಯಾಟಿಂಗ್ 35; 60 ಎಸೆತ, 8 ಬೌಂಡರಿ) ತಂಡಕ್ಕೆ ಆಸರೆಯಾದರು. ಇವರಿಬ್ಬರು ಮುರಿಯದ 6ನೇ ವಿಕೆಟ್‌ಗೆ 57 ರನ್ ಸೇರಿಸಿದ್ದಾರೆ. ಮಿಥುನ್ 45 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಬಳಿಕ ವಿನಯ್ (44) ಇದ್ದಾರೆ.
ವೇಗಿಗಳ ದರ್ಬಾರ್: ಗ್ಲೇಡ್ಸ್‌ನಲ್ಲಿ ಎರಡನೇ ದಿನ ಕೂಡ ವೇಗಿಗಳದ್ದೇ ಕಾರುಬಾರು. ಅನುಭವಿ ವೇಗಿ ಸಾಳ್ವಿಯ ಮುಂದೆ ತವರಿನ ಪಿಚ್‌ನಲ್ಲಿ ಕನ್ನಡ ನಾಡಿನ ಬ್ಯಾಟ್ಸ್‌ಮನ್‌ಗಳ ಆಟ ನಡೆಯಲಿಲ್ಲ. ಈ ರಣಜಿ ಋತುವಿನಲ್ಲಿ ಕರ್ನಾಟಕದವರು ಒಮ್ಮೆಯೂ ಇನಿಂಗ್ಸ್ ಹಿನ್ನಡೆ ಅನುಭವಿಸಿರಲಿಲ್ಲ. ಆದರೆ ಅಂತಿಮ ಹೋರಾಟದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಯುವ ಬ್ಯಾಟ್ಸ್‌ಮನ್‌ಗಳಿಗೆ ಫೈನಲ್‌ನ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ.
ಸಾಳ್ವಿಗೆ ಸಲಾಂ: 7-5-11-3. ಇದು ಸಾಳ್ವಿಯ ಮೊದಲ ಸ್ಪೆಲ್‌ನ ವಿವರಣೆ. ಸತತ 5 ಓವರ್ ಮೇಡಿನ್ ಮಾಡಿದರು. ಅವರು ಮೊದಲ ರನ್ ನೀಡಿದ್ದೇ ತಮ್ಮ ಆರನೇ ಓವರ್‌ನಲ್ಲಿ. ನಾಲ್ಕು ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ಸಾಳ್ವಿ ಒಂದೇ ಓವರ್‌ನಲ್ಲಿ 2 ವಿಕೆಟ್ ಪಡೆದು ಕರ್ನಾಟಕಕ್ಕೆ ದೊಡ್ಡ ಪೆಟ್ಟು ನೀಡಿದರು. ಈ ಋತುವಿನಲ್ಲಿ ರಾಜ್ಯದ ಪರ ಹೆಚ್ಚು ರನ್ ಗಳಿಸಿರುವ ಮನೀಷ್ ಪಾಂಡೆ (738), ಪವನ್ ಹಾಗೂ ಗಣೇಶ್ ಸತೀಶ್ ಅವರನ್ನು ಅಲ್ಪ ಮೊತ್ತಕ್ಕೆ ಹಿಂದಿರುಗಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಬ್ಯಾಟ್ಸ್ಮನ್ ರಾಹುಲ್ ದ್ರಾವಿಡ್ ಅವರ ಅನುಪಸ್ಥಿತಿ ಕಾಡಿತು. ಜೊತೆಗೆ ಬ್ಯಾಟಿಂಗ್‌ನಲ್ಲಿ ತಾಂತ್ರಿಕ ನೈಪುಣ್ಯತೆಯ ಕೊರತೆ ಎದ್ದು ಕಂಡಿತು. ಕೆ.ಬಿ.ಪವನ್ (33; 85 ಎಸೆತ, 6 ಬೌಂಡರಿ) ಹೊರತುಪಡಿಸಿ ಉಳಿದವರಾರೂ ಒಂದಿಷ್ಟು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಪವನ್ ಹಾಗೂ ಸತೀಶ್ ನಡುವೆ ಮೂರನೇ ವಿಕೆಟ್‌ಗೆ ಬಂದ 27 ರನ್‌ಗಳೇ ಕರ್ನಾಟಕ ಪರ ಅತ್ಯುತ್ತಮ ಜೊತೆಯಾಟ.
Prajavani
Subscribe to:
Post Comments (Atom)
No comments:
Post a Comment