


ಪಂಚಾಯತ್ ಮುಂದೆ ಚಿತೆ!?
ಮಂಗಳೂರು: ಇದ್ದ ಸ್ಮಶಾನವನ್ನು ವಿಮಾನ ನಿಲ್ದಾಣದ ರಸ್ತೆಗೊಪ್ಪಿಸಿ ನಿರ್ಲಕ್ಷ್ಯತನ ಮೆರೆದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಗೊಂಡ ದಲಿತರು ಮೃತದೇಹವನ್ನು ಪಂಚಾ ಯತ್ ಎದುರೇ ಸುಡಲು ಮುಂದಾದ ಪ್ರಸಂಗ ವೊಂದು ನಿನ್ನೆ ಮಳವೂರಿನಲ್ಲಿ ನಡೆದಿದೆ.
ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೇ ನಂಬ್ರ 111/1 ಪಿ1-ಪಿ 2ರಲ್ಲಿ ಒಂದು ಎಕ್ರೆ ಜಾಗದಲ್ಲಿ ಸಾರ್ವಜನಿಕ ಹಿಂದೂ ಸ್ಮಶಾನವಿತ್ತು. ವಿಮಾನ ನಿಲ್ದಾಣಕ್ಕೆ ಝಿಗ್‌ಝಾಗ್ ರಸ್ತೆ ನಿರ್ಮಾಣದ ವೇಳೆ ಸ್ಮಶಾನವನ್ನು ನೆಲಸಮಗೊಳಿಸಿ ಜಾಗವನ್ನು ರಸ್ತೆಗಾಗಿ ಬಿಟ್ಟುಕೊಡಲಾಗಿತ್ತು. ಈ ಸಂದರ್ಭದಲ್ಲಿ ಬೇರೆ ಜಾಗದಲ್ಲಿ ಸ್ಮಶಾನ ನಿರ್ಮಿಸುವುದಾಗಿ ನೀಡಲಾಗಿದ್ದ ಭರವಸೆ ಇದುವರೆಗೂ ಈಡೇರಿರಲಿಲ್ಲ. ಆದರೆ ಜಾಗ ಇದ್ದವರು ಅವರವರ ಜಾಗದಲ್ಲೇ ಹೆಣ ಸುಡುತ್ತಿದ್ದ ಕಾರಣ ಸ್ಮಶಾನ ನಿರ್ಮಿಸುವ ಕುರಿತು ಜನಪ್ರತಿನಿಧಿಗಳು ಆಸಕ್ತಿ ವಹಿಸಲೇ ಇಲ್ಲ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣ ವಾಗಿತ್ತು.
ನಿನ್ನೆ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಗುಲಾಬಿ (45) ಎಂಬ ದಲಿತ ಮಹಿಳೆ ಯೊಬ್ಬರು ಮೃತಪಟ್ಟಿದ್ದರು. ಇವರು ಕಡು ಬಡವರಾಗಿದ್ದು ಸ್ವಂತ ಜಾಗವನ್ನು ಹೊಂದಿರಲಿಲ್ಲ. ಅವರ ಮೃತದೇಹದ ಅಂತ್ಯಕ್ರಿಯೆ ನಡೆಸಲು ಸ್ಥಳವಿಲ್ಲದಿದ್ದುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು.
ನೆರೆಯ ಗ್ರಾಮವಾದ ಕೆಂಜಾರುವಿನಲ್ಲಿ ಸ್ಮಶಾನವಿದ್ದು ಇದು ಕೇವಲ ಒಂದು ಕಿಲೋ ಮೀಟರ್ ದೂರವಿದ್ದರೂ ಸ್ಥಳೀಯರು ಮೃತದೇಹವನ್ನು ಅಲ್ಲಿಗೊಯ್ಯಲು ಮನಸ್ಸು ಮಾಡದೆ ಜನಪ್ರತಿನಿಧಿಗಳಿಗೆ ಬುದ್ಧಿ ಕಲಿಸಲು ಯೋಚಿಸಿ ನೇರವಾಗಿ ಮಳವೂರು ಪಂಚಾಯತ್‌ಗೆ ತಂದು ಆವರಣದಲ್ಲೇ ದಹನ ಮಾಡಲು ನಿರ್ಧರಿಸಿ ಹೊಂಡ ತೋಡಲು ಆರಂಭಿಸಿದರು.
ಇದರಿಂದ ಮುಜುಗರಕ್ಕೊಳಗಾದ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳು ಜನರನ್ನು ತಡೆಯಲು ಮುಂದಾದರು. ಈ ಸಂದರ್ಭದಲ್ಲಿ ಎರಡೂ ಕಡೆಯವರ ಮಧ್ಯೆ ಮಾತಿನ ಸಮರ ನಡೆಯಿತು. ಶೀಘ್ರವೇ ನೂತನ ಸ್ಮಶಾನ ನಿರ್ಮಿಸುವ ಭರವಸೆಗೆ ಜನರು ಬಗ್ಗಲೇ ಇಲ್ಲ.
ವಿಷಯ ಅರಿತ ಮಂಗಳೂರು ತಾಲೂಕು ತಹಶೀಲ್ದಾರ್ ರವಿಚಂದ್ರ ಸ್ಥಳಕ್ಕೆ ಆಗಮಿಸಿದರು. ಈಗಾಗಲೇ ಮಳವೂರು ಪಂಚಾಯತ್ ಅಧೀನದಲ್ಲಿ ಸರಕಾರಿ ಜಾಗವಿಲ್ಲ. ಇದ್ದ ಒಂದು ಎಕ್ರೆ ಜಾಗದಲ್ಲಿ ದಲಿತರೇ ಮನೆ ನಿರ್ಮಿಸಿ ವಾಸಿಸುತ್ತಿದ್ದಾರೆ. ಬರುವ ತಿಂಗಳು 10ನೇ ತಾರೀಕಿನೊಳಗೆ ಸರಕಾರಿ ಜಾಗ ಹುಡುಕಿ ತಾತ್ಕಾಲಿಕವಾಗಿ ಸ್ಮಶಾನ ನಿರ್ಮಿಸಿ ಬಳಿಕ ಸ್ವಲ್ಪ ಸಮಯದಲ್ಲೇ ಶಾಶ್ವತ ಸ್ಮಶಾನ ನಿರ್ಮಿಸುವ ಭರವಸೆ ನೀಡಿದರು.
ಇಷ್ಟೇ ಅಲ್ಲದೆ ಗುಲಾಬಿಯವರ ಮೃತದೇಹವನ್ನು ದಹನ ಮಾಡಿ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ನಾಗೇಶ್ ಪ್ರಭು ಎಂಬವನ್ನು ಸಂಪರ್ಕಿಸಿ ಅವರ ಖಾಸಗಿ ಜಾಗದಲ್ಲಿ ಮೃತದೇಹವನ್ನು ದಹನ ಮಾಡಲು ಅವಕಾಶ ಕೋರಿ ವ್ಯವಸ್ಥೆಯನ್ನು ಮಾಡಿಕೊಟ್ಟು ಸಮಸ್ಯೆಯನ್ನು ಬಗೆಹರಿಸಿದರು. ಬೆಳಿಗ್ಗೆ ಮೃತ್ಯುವಶರಾಗಿದ್ದ ಗುಲಾಬಿ ಅವರ ಮೃತದೇಹದ ಅಂತ್ಯಕ್ರಿಯೆ ಸ್ಮಶಾನದ ವಿವಾದದಿಂದಾಗಿ ಖಾಸಗಿ ಜಾಗದಲ್ಲಿ ಮಧ್ಯಾಹ್ನದ ವೇಳೆ ನಡೆಯಿತು.
ಮಾತು ತಪ್ಪಿದರೆ ಹೋರಾಟ
ಮಳವೂರು ಗಾ. ಪಂ. ವ್ಯಾಪ್ತಿಯಲ್ಲಿದ್ದ ಸ್ಮಶಾನವನ್ನು ವಿಮಾನ ನಿಲ್ದಾಣಕ್ಕೆ ಒಪ್ಪಿಸಿ ಪಂಚಾಯತ್ ನೂತನ ಸ್ಮಶಾನ ನಿರ್ಮಿಸದೆ ನಿರ್ಲಕ್ಷ್ಯ ತೋರಿದೆೆ. ಇದರಿಂದ ಬಡವರು ತೊಂದರೆ ಅನುಭವಿಸುವಂತಾಗಿದೆ. ಕೆಲವೇ ದಿನಗಳಲ್ಲಿ ಶಾಶ್ವತ ಸ್ಮಶಾನ ನಿರ್ಮಿಸುವುದಾಗಿ ತಹಶೀಲ್ದಾರ್ ಭರವಸೆ ನೀಡಿದ್ದಾರೆ. ಒಂದು ವೇಳೆ ಅವರು ಮಾತು ತಪ್ಪಿದರೆ ಜಿಲ್ಲಾಧಿಕಾರಿ ಕಚೇರಿ ಬಳಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಹಾಗೂ ಮೃತದೇಹವನ್ನು ಪಂಚಾಯತ್ ಆವರಣದಲ್ಲೇ ದಹನ ಮಾಡಲಾಗುವುದೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸದಸ್ಯ ಕೆ. ರುಕ್ಕಯ್ಯ ಅಮೀನ್ ಎಚ್ಚರಿಸಿದ್ದಾರೆ.
ಜಯಕಿರಣ ಎಚ್ಚರಿಸಿತ್ತು
ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ಮಶಾನದ ಸಮಸ್ಯೆಯ ಬಗ್ಗೆ ಜಯಕಿರಣ ಈ ಹಿಂದೆಯೇ ಬೆಳಕು ಚೆಲ್ಲಿತ್ತು. ಆದರೂ ಆಡಳಿತ ಯಂತ್ರದವರು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ದಲಿತರು ನಿನ್ನೆ ಪ್ರತಿಭಟಿಸಬೇಕಾಯಿತು.
-jayakirana
No comments:
Post a Comment