ವಿವಾಹಿತರ ಪ್ರೇಮ ಪುರಾಣ: ಮದುವೆ ಮಾಡಿಸಲು ಬಜರಂಗದಳ ನಕಾರ
ಮಂಗಳೂರು: ಮೂರು ಮಕ್ಕಳ ತಾಯಿ ಮುಸ್ಲಿಂ ಮಹಿಳೆ ಹಾಗೂ ಇಬ್ಬರು ಮಕ್ಕಳ ತಂದೆ ಹಿಂದೂ ಪುರುಷನ ಪ್ರೇಮ ಪ್ರಕರಣವು ವಿವಾಹದ ಹಂತಕ್ಕೆ ತಲುಪಿದ್ದು ಇವರ ಮನದಾಸೆಗೆ ಬಜರಂಗದಳ ತಣ್ಣೀರೆರಚಿದ ಪ್ರಕರಣ ಬೆಳಕಿಗೆ ಬಂದಿದೆ.
ತಲಪಾಡಿಯ ನಿವಾಸಿ ಉಳ್ಳಾಲದ ಸಿಟಿ ಬಸ್ಸೊಂದರಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ಕಿಶೋರ್ ಹಾಗೂ ಉಳ್ಳಾಲ ಕೋಡಿ ನಿವಾಸಿ ಹಸೀನಾ ಎಂಬವರ ಮಧ್ಯೆ ಆರು ವರ್ಷಗಳಿಂದ ಪರಿಚಯವಿದ್ದು ಬಳಿಕ ಅದು ಪ್ರೇಮಕ್ಕೆ ತಿರುಗಿತ್ತು. ಆದರೆ ಸಮಾಜದ ವಿರೋಧಕ್ಕೆ ಹೆದರಿದ್ದ ಜೋಡಿ ತಮ್ಮ ಪ್ರೇಮ ಪ್ರಕರಣವನ್ನು ಯಾರ ಬಳಿಯೂ ಬಾಯ್ಬಿಟ್ಟಿರಲಿಲ್ಲ. ಆರು ವರ್ಷಗಳ ಹಿಂದೆಯೇ ಇಬ್ಬರಿ ಗೂ ಅವರವರ ಧರ್ಮದ ಪ್ರಕಾರ ವಿವಾಹವಾಗಿತ್ತು. ಈ ಮಧ್ಯೆ ಕಿಶೋರ್‌ಗೆ ಇಬ್ಬರು ಮಕ್ಕಳಿದ್ದರೆ, ಮಹಿಳೆಗೆ ಮೂವರು ಮಕ್ಕಳು ಇದ್ದಾರೆ. ಆದರೂ ಇವರಿಬ್ಬರ ನಡುವೆ ಪ್ರೇಮ ಪ್ರಕರಣ ಗುಪ್ತವಾಗಿಯೇ ಸಾಗಿತ್ತು. ಕಳೆದ ಶನಿವಾರ ಹಸೀನಾ ಮನೆ ಬಿಟ್ಟು ಪರಾರಿಯಾಗಿದ್ದು ಆಕೆಯ ಗಂಡ ಠಾಣೆಗೆ ದೂರನ್ನು ನೀಡಿದ್ದರು. ಆದರೆ ಆಕೆ ಇದುವರೆಗೂ ಪತ್ತೆಯಾಗಿಲ್ಲ. ಆಕೆ ಪರಾರಿಯಾದ ಬಳಿಕ ಕಿಶೋರ್‌ನ ಜೊತೆ ಇದ್ದಳೆಂದೂ, ಇಬ್ಬರೂ ಮದುವೆಯಾಗಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ತಮ್ಮ ಆಸೆಗೆ ಬಜರಂಗದಳ ಬೆಂಬಲ ನೀಡಬಹುದೆಂದು ಅರಿತ ಕಿಶೋರ್ ನೇರವಾಗಿ ಬಜರಂಗದಳ ಮುಖಂಡರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾನೆ.
ಇದರಿಂದ ಕೆಂಡಾಮಂಡಲವಾದ ಬಜರಂಗದಳದ ಮುಖಂಡರು, ನೀವಿಬ್ಬರೂ ಈಗಾಗಲೇ ವಿವಾಹಿತರಾಗಿದ್ದು ಮಕ್ಕಳನ್ನೂ ಹೊಂದಿದ್ದೀರಿ. ಹೀಗಿರುವಾಗ ನಿಮ್ಮ ಮದುವೆಗೆ ಸಂಘಟನೆಯ ಬೆಂಬಲವಿಲ್ಲ. ಇರುವ ಸಂಸಾರವನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗಿ ಎಂದು ಖಡಾಖಂಡಿತವಾಗಿ ಹೇಳಿ ವಾಪಸ್ ಕಳುಹಿಸಿದ್ದಾರೆಂದು ತಿಳಿದುಬಂದಿದೆ. ಬಜರಂಗದಳದ ಮುಖಂಡರ ಮಾತಿನಿಂದ ಹತಾಶನಾಗಿರುವ ಕಿಶೋರ್ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಮರಳಿದ್ದರೆ, ಅತ್ತ ನಾಪತ್ತೆಯಾಗಿರುವ ಹಸೀನಾಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
-jayakirana
Feb 25, 2010
Subscribe to:
Post Comments (Atom)
No comments:
Post a Comment