VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 6, 2010

54 ವರ್ಷಗಳ ಬೆಂಗಳೂರು ಕಮಲ ನಗರ - ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿ ಬಿಜೆಪಿ ಆಳ್ವಿಕೆ: ಈ ಗೆಲವಿನ ಸ್ಫೂರ್ತಿಯಿಂದ ಬೆಂಗಳೂರನ್ನು ಒಂದು ಮಾದರಿ ಜಾಗತಿಕ ಮಹಾನಗರವನ್ನಾಗಿಸಲು ಮತ್ತೊಮ್







ಬೆಂಗಳೂರು, ಏ.೫ .ಸಂದೇಶ ಸ್ಪಷ್ಟವಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಪ್ರತಿಪಕ್ಷಗಳ ತೀವ್ರ ವಾಗ್ದಾಳಿಗೆ ತುತ್ತಾಗಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲಕ್ಕೆ ಬೆಂಗಳೂರಿನ ಮತದಾರರು ನಿಂತಿದ್ದಾರೆ.

ಬಿಬಿ‌ಎಂಪಿ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ 112 ಸ್ಥಾನ ನೀಡುವ ಮೂಲಕ ಮೊದಲ ಬಾರಿಗೆ ಬಿಬಿ‌ಎಂಪಿ ಗದ್ದುಗೆಯಲ್ಲಿ ‘ಕಮಲ’ ಅರಳಿಸಿದ್ದಾರೆ. ಆದರೆ, 64 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ‘ಕೈ’ ಸುಟ್ಟುಕೊಂಡಿದ್ದರೆ, 15 ಸ್ಥಾನಗಳನ್ನು ಪಡೆದ ‘ತೆನೆ ಹೊತ್ತ ಮಹಿಳೆ’ಯನ್ನು ನಗರದ ಮತದಾರ ಮತ್ತೊಮ್ಮೆ ದೂರ ಮಾಡಿದ್ದಾನೆ.

ಹೀಗಾಗಿ ರಾಜಧಾನಿ ಬೆಂಗಳೂರಿನಲ್ಲಿ ಬಿರುಬೇಸಿಗೆಯಲ್ಲೂ ಬಿಜೆಪಿ ‘ಕಮಲ’ ಅರಳಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬೆಂಗಳೂರು ಉಸ್ತುವಾರಿ ಸಚಿವರಾದ ಆರ್.ಅಶೋಕ್ ಮತ್ತು ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಮುಖದಲ್ಲಿ ನಗೆ ತರಿಸಿರುವ ಜಯ ಇದಾಗಿದೆ.

ಇದರೊಂದಿಗೆ ಬೆಂಗಳೂರು ಪಾಲಿಕೆಯ 54 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ. ಅಲ್ಲದೆ ಬಿ‌ಎಂಪಿ ಬಿಬಿ‌ಎಂಪಿ ಆದ ನಂತರ ನಡೆದ ಮೊದಲ ಚುನಾವಣೆಯಲ್ಲೇ ಜಯಭೇರಿ ಬಾರಿಸಿದ ಹೆಗ್ಗಳಿಕೆ ಬಿಜೆಪಿ ಮುಡಿಗೇರಿದೆ.

ಈ ಮೂಲಕ ಬಿಜೆಪಿ ನಾಯಕರು ಕನಿಷ್ಠ ಮುಂದೆ ಎದುರಾಗುವ ಚುನಾವಣೆ ಬರುವವರೆಗಾದರೂ ಎದೆ ಉಬ್ಬಿಸಿ ನಡೆಯುವಂತಾಗಿದೆ. ಜತೆಗೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿ‌ಎಸ್ ಬಾಯಿಗೆ ಬೀಗ ಬಿದ್ದಂತಾಗಿದ್ದು, ಮತ್ತೊಮ್ಮೆ ಅಧಿಕಾರದ ರುಚಿ ನೋಡಬೇಕೆಂಬ ಈ ಪಕ್ಷಗಳ ಆಸೆಗೆ ತಣ್ಣೀರೆರಚಿದಂತಾಗಿದೆ.

ಅಭಿವೃದ್ಧಿಗೆ ಪೂರಕ: ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಅಧಿಕಾರಕ್ಕೆ ಬರಬೇಕೆಂಬ ಆಸೆಯೊಂದು ಬಿಜೆಪಿಗೆ ಕೈಗೂಡಿದಂತಾಗಿದೆ. ‘ಬುದ್ಧಿವಂತ’ ಮತದಾರರು ತಮ್ಮ ಬುದ್ಧಿವಂತಿಕೆ ಉಪಯೋಗಿಸಿದ್ದಾರೆ. ಏಕೆಂದರೆ ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರ. ಆದರೆ, ಬಿಬಿ‌ಎಂಪಿಗೆ ಬೇರೆ ಪಕ್ಷವನ್ನು ಆಯ್ಕೆ ಮಾಡಿದರೆ ಸೌಹಾರ್ದಯುತ, ಸಹಕಾರದಿಂದ ಅಭಿವೃದ್ಧಿ ಯೋಜನೆ ಕಾರ್ಯಗತಕ್ಕೆ ಬರುವುದು ಅಸಾಧ್ಯ ಎಂಬುದನ್ನು ಮತದಾರ ಅರಿತಿರುವಂತಿದೆ.

ಬಿಜೆಪಿಯ ಕಮಲ ನಗರದಲ್ಲಿ ಅರಳಲು ಸೋಮಣ್ಣ ಅವರ ಕೊಡುಗೆಯೂ ಉತ್ತಮ ಪ್ರಮಾಣದಲ್ಲೇ ಇದೆ. ವಿಧಾನಸಭೆ ಉಪ ಚುನಾವಣೆಯಲ್ಲಿ ಸೋಲಿನ ನಂತರವೂ ಬೇರು ಮಟ್ಟದಲ್ಲಿ ಕೆಲಸ ಮಾಡಿದ ಸೋಮಣ್ಣ ಅತಿ ಹೆಚ್ಚಿನ ಸ್ಥಾನವನ್ನು ಗೆಲ್ಲಿಸಿಕೊಡುವ ಮೂಲಕ ತಮ್ಮ ಅಸ್ತಿತ್ವವನ್ನು ತೋರಿಸಿದ್ದಾರೆ.

ಸೂತ್ರಧಾರನಿಗೇ ಸೋಲು!: ಆದರೆ, ಶೀಘ್ರ ಚುನಾವಣೆ ನಡೆಸುವಂತೆ ಕೋರ್ಟ್‌ಗಳ ಮೂಲಕ ಆದೇಶಗಳನ್ನು ಕೊಡಿಸುತ್ತಾ ಬಂದು ದಪ್ಪಚರ್ಮದ ಸರ್ಕಾರಕ್ಕೆ ಛಡಿಯೇಟು ನೀಡಿದ್ದ ಮಾಜಿ ಮೇಯರ್ ಪಿ.ಆರ್.ರಮೇಶ್ ಅವರನ್ನೇ ಮತದಾರರು ತಿರಸ್ಕರಿಸಿರುವುದು ಈ ಫಲಿತಾಂಶದ ಅಚ್ಚರಿ. ಗೌಡರ ಬೆಂಬಲಕ್ಕೆ ನಿಲ್ಲದ ನೈಸ್ ಹೋರಾಟ ಮತ್ತೊಂದೆಡೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಆರೋಪಗಳಂತೆ ಬಿಬಿ‌ಎಂಪಿ ಚುನಾವಣೆ ಮೇಲೆ ಕಣ್ಣಿಟ್ಟು ನೈಸ್ ವಿರೋಧಿ ಹೋರಾಟಗಳನ್ನು ನಡೆಸುತ್ತಾ ಬಂದಿದ್ದ ದೇವೇಗೌಡ ಜೆಡಿ‌ಎಸ್ ಪಕ್ಷವನ್ನು ಈ ವ್ಯಾಪ್ತಿಯ ಮತದಾರರು ತಿರಸ್ಕರಸಿದ್ದಾರೆ.

ಕೈ ಸುಟ್ಟುಕೊಂಡ ಕಾಂಗ್ರೆಸ್: ಕಾಂಗ್ರೆಸ್ ಪಕ್ಷ ತನ್ನ ಶಾಸಕರಿರುವ ವಿಧಾನಸಭೆ ಕ್ಷೇತ್ರಗಳಲ್ಲಿ ಕೈ ಸುಟ್ಟುಕೊಂಡಿದೆ. ಬಹುತೇಕ ಕಾಂಗ್ರೆಸ್ ಕ್ಷೇತ್ರಗಳಲ್ಲಿ ಲಗ್ಗೆ ಇಟ್ಟಿರುವ ಬಿಜೆಪಿ ನಗರದ ಬೇರುಮಟ್ಟದಲ್ಲಿ ತನ್ನ ನೆಲೆಯನ್ನು ಮತ್ತಷ್ಟು ಭದ್ರಗೊಳಿಸಿಕೊಂಡಿದೆ.

ಪ್ರತಿಕ್ರಿಯೆಗಳು
ನಮ್ಮ ಪಕ್ಷದ ಮೇಲಿನ ನಂಬಿಕೆ ಜನತೆಮುಂದುವರಿಸಿದ್ದಾರೆ. ಅವರ ನಿರೀಕ್ಷೆ ಹುಸಿಗೊಳಿಸದೆ ಈ ಗೆಲವಿನ ಸ್ಫೂರ್ತಿಯಿಂದ ಬೆಂಗಳೂರು ಮಹಾನಗರವನ್ನು ಒಂದು ಮಾದರಿ ಜಾಗತಿಕ ಮಹಾನಗರವನ್ನಾಗಿಸಲು ನಾವು ಮತ್ತೊಮ್ಮೆ ಪಣತೊಡುತ್ತೇವೆ. -ಬಿ.ಎಸ್.ಯಡಿಯೂರಪ್ಪ
--------------

ಹಣ ಹಾಗೂ ಹೆಂಡದ ಬಲದಿಂದ ಚುನಾವಣೆ ನಡೆಸುವ ಮನಸ್ಥಿತಿಯನ್ನು ಬಿಜೆಪಿ ನಾಯಕತ್ವ ತೋರಿದೆ. ಬಿಜೆಪಿ ಆಡಳಿತ ಸರಿಯಿಲ್ಲ ಎಂದು ದೂರುತ್ತಿದ್ದ ಬೆಂಗಳೂರಿನ ಪ್ರಜ್ಞಾವಂತ ಮತದಾರರು ಮತ ಹಾಕುವ ಉತ್ಸಾಹ ತೋರಲಿಲ್ಲ. -ಆರ್.ವಿ.ದೇಶಪಾಂಡೆ
--------------

ಲೋಕಸಭೆ, ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ನಮಗೆ ಹಿನ್ನಡೆ ಆಗಿಲ್ಲ. ಈ ಫಲಿತಾಂಶದಿಂದ ಜೆಡಿ‌ಎಸ್ ಕಳೆದುಕೊಳ್ಳುವುದು ಏನೂ ಇಲ್ಲ. ಆದರೆ, ಬಿಜೆಪಿಗೆ ಮತ ಕೊಟ್ಟು ಜನರೇ ನಷ್ಟ ಅನುಭವಿಸುತ್ತಾರಲ್ಲಾ ಎಂಬ ವ್ಯಥೆ ಇದೆ. -ಎಚ್.ಡಿ.ಕುಮಾರಸ್ವಾಮಿ

No comments: