VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 6, 2010

‘ಉಳ್ಳಾಲದ ಉರೂಸ್’ ದೇಶಕ್ಕೆ ಮಾದರಿ: ಭಾರದ್ವಾಜ್









ಮಂಗಳೂರು, ಎ.೫: ಉಳ್ಳಾಲದಂತಹ ಸಣ್ಣ ಊರಿನಲ್ಲಿ ನಡೆಯುತ್ತಿರುವ ಐತಿಹಾಸಿಕ ಉರೂಸ್ ರಾಷ್ಟ್ರಕ್ಕೆ ಮಾದರಿಯಾದ ಸಂದೇಶ ನೀಡಿದೆ ಎಂದು ಕರ್ನಾಟಕ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಶ್ಲಾಘಿಸಿದರು.

ಉರೂಸ್ ಅಂಗವಾಗಿ ಸೋಮವಾರ ಉಳ್ಳಾಲ ಸೈಯದ್ ಮದನಿ ದರ್ಗಾದಲ್ಲಿ ಹಮ್ಮಿಕೊಂಡ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಮುಖಂಡರ ಸೌಹಾರ್ದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಉಳ್ಳಾಲದಂತಹ ಪ್ರದೇಶದಲ್ಲಿ ವಿವಿಧ ಜಾತಿ, ಧರ್ಮ, ಭಾಷೆಯ ಜನರು ಒಂದಾಗಿ ಉರೂಸ್ ಸಮಾರಂಭದಲ್ಲಿ ಭಾಗವಹಿಸುತ್ತಿರುವುದೇ ಇಲ್ಲಿಯ ಶಕ್ತಿಯನ್ನು ಸಾರುತ್ತದೆ. ಅದು ಈ ದೇಶದ ಸಂವಿಧಾನ ಪ್ರತಿಪಾದಿಸುವ ಏಕತೆಯ ಸಂದೇಶವೂ ಆಗಿದೆ ಎಂದು ಭಾರದ್ವಾಜ್ ನುಡಿದರು.

ಸಂವಿಧಾನದ ಪ್ರಥಮ ಸಾಲಿನಲ್ಲಿ ಹೇಳುವಂತೆ ನಾವೆಲ್ಲ ಭಾರತೀಯರು, ಈ ದೇಶದ ಪ್ರಜೆಗಳು ಯಾವುದೇ ಧರ್ಮೀಯರು ತಮ್ಮ ಧರ್ಮವನ್ನು ಸ್ವತಂತ್ರರಾಗಿ ಆಚರಿಸಲು ಅವಕಾಶ ನೀಡಿದೆ. ಎಲ್ಲ ಧರ್ಮಗಳನ್ನು ಸಮಾನವಾಗಿ ಸಂವಿಧಾನ ಪರಿಗಣಿಸಿದೆ.

ಉಳ್ಳಾಲದಲ್ಲಿ ವಿವಿಧ ಧರ್ಮಗಳ ಮುಖಂಡರು ಸೇರಿ ಉರೂಸ್ ಸಮಾರಂಭವನ್ನು ನಡೆಸುತ್ತಿರುವುದು ಒಂದು ಉತ್ತಮ ಬೆಳವಣಿಗೆ ಎಂದವರು ನುಡಿದರು.

ಸಂವಿಧಾನವು ಅಲ್ಪಸಂಖ್ಯಾತರು, ಬಹುಸಂಖ್ಯಾ ತರು ಈ ದೇಶದಲ್ಲಿ ಸ್ವತಂತ್ರರಾಗಿ ಬದುಕುವ ಹಕ್ಕನ್ನು ನೀಡಿದೆ. ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ. ಕಾನೂನಿಗೆ ಎಲ್ಲರೂ ಗೌರವ ನೀಡಿದಾಗ ಶಾಂತಿ ಸೌಹಾರ್ದತೆ ನೆಲೆಸುತ್ತದೆ ಎಂದು ಭಾರದ್ವಾಜ್ ತಿಳಿಸಿದರು.

ಜಗತ್ತಿನ ಎಲ್ಲ ಧರ್ಮಗಳು ಶಾಂತಿ ಸೌಹಾರ್ದತೆಗೆ ಒತ್ತು ನೀಡಿದೆ. ಆದರೆ ಅದನ್ನು ಹೇಳಿದ ರೀತಿಗಳು ಮಾತ್ರ ಬೇರೆ. ನಮ್ಮ ನಡುವಿನ ಅಂಧಕಾರವನ್ನು ಹೋಗಲಾಡಿಸಲು ಶಿಕ್ಷಣ ಅಗತ್ಯ. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿರುವ ಉಳ್ಳಾಲ ದರ್ಗಾದ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಭಾರದ್ವಾಜ್ ಪ್ರಶಂಸಿದ್ದಾರೆ.

ಸಮಾರಂಭದಲ್ಲಿ ಮಂಗಳೂರು ಬಿಶಪ್ ಅಲೋಶಿಯಸ್ ಪಾವ್ಲ್ ಡಿಸೋಜ, ಕೊಲ್ಯ ಶ್ರೀರಮಾನಂದ ಸ್ವಾಮೀಜಿ, ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್, ಶಾಸಕರಾದ ಗೋಪಾಲ ಭಂಡಾರಿ, ಅಭಯಚಂದ್ರ ಜೈನ್, ಯು.ಟಿ.ಖಾದರ್, ಪ್ರಫುಲ್ಲತಾ ಭಾರದ್ವಾಜ್, ಬ್ಲೋಸಂ ಫೆರ್ನಾಂಡಿಸ್, ನಾಯಕರಾದ ಎಂ.ಎ.ಗಫೂರ್, ಕೋಡಿಜಾಲ್ ಇಬ್ರಾಹೀಂ, ಸದಾಶಿವ ಉಳ್ಳಾಲ, ಬೊಂಡಾಲ ಜಗನ್ನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು .

ದರ್ಗಾ ಸಮಿತಿಯ ಅಧಕ್ಷ ಯು.ಕೆ.ಮೋನು ಕಣಚೂರು ಸ್ವಾಗತಿಸಿದರು. ದರ್ಗಾ ಸಮಿತಿಯ ರಶೀದ್ ಕಾರ್ಯಕ್ರಮ ನಿರೂಪಿಸಿದರು. ಚೆರುಕುಂಞಿ ತಂಙಳ್ ದುವಾ ನೆರವೇರಿಸಿದರು.

ಉಳ್ಳಾಲ ಐತಿಹಾಸಿಕ ಪುಣ್ಯಕ್ಷೇತ್ರ, ಜನರನ್ನು ಒಂದುಗೂಡಿಸುವ ಕೇಂದ್ರವಾಗಿದೆ
-ಗೋಪಾಲ ಭಂಡಾರಿ, ಕಾರ್ಕಳ ಶಾಸಕ

ಉಳ್ಳಾಲ ಸೌಹಾರ್ದ ಕೇಂದ್ರ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ
-ಯು.ಟಿ.ಖಾದರ್, ಮಂಗಳೂರು ಶಾಸಕ

ಎಲ್ಲ ಧರ್ಮೀಯರು ಉರೂಸ್ ಸಮಾರಂಭದಲ್ಲಿ ಭಾಗವಹಿಸುವುದೇ ಉಳ್ಳಾಲ ಉರೂಸ್‌ನ ವೈಶಿಷ್ಟ - -ಆಸ್ಕರ್ ಫೆರ್ನಾಂಡಿಸ್, ಮಾಜಿ ಕೇಂದ್ರ ಸಚಿವ

ಭ್ರಾತೃತ್ವ ನಮ್ಮೊಡನೆ ಸದಾ ನೆಲೆಸಲಿ. ಉಳ್ಳಾಲ ದರ್ಗಾದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆ ಶ್ಲಾಘನೀಯ
-ಅಲೋಶಿಯಸ್ ಪಾವ್ಲ್ ಡಿಸೋಜ, ಮಂಗಳೂರು ಬಿಶಪ್

ಉಳ್ಳಾಲ ಸಾಮರಸ್ಯದ ಕೇಂದ್ರವಾಗಿ ಬೆಳೆದಿದೆ

-ಕೊಲ್ಯ ಶ್ರೀರಮಾನಂದ ಸ್ವಾಮೀಜಿ

No comments: