VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 7, 2010

ಫೆ.19 ರಿಂದ ನಡೆಯಲಿರುವ 76ನೆ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿ ಗೀತಾ ನಾಗಭೂಷಣ; ಸಮ್ಮೇಳನಾಧ್ಯಕ್ಷತೆ ಗರಿ ಆಯ್ಕೆ ಸಂತಸ ತಂದಿದೆ: ಡಾ|ಗೀತಾ


ಬೆಂಗಳೂರು, ಜ.೬: ಗುಲ್ಬರ್ಗಾದಲ್ಲಿ ಫೆ.೧೯ರಿಂದ ನಡೆಯಲಿರುವ ೭೬ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಿರಿಯ ಸಾಹಿತಿ ಗೀತಾ ನಾಗಭೂಷಣ ಅವರು ಆಯ್ಕೆಯಾಗಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬುಧವಾರ ನಡೆದ ಪರಿಷತ್ತಿನ ಕಾರ್ಯಕಾರಿಣಿ ಸಭೆಯಲ್ಲಿ ಗುಲ್ಬರ್ಗಾ ಮೂಲದವರೆ ಆದ ಗೀತಾ ನಾಗಭೂಷಣರನ್ನು ಸರ್ವಾನು ಮತದಿಂದ ಸಮ್ಮೇಳನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

ಇದುವರೆಗೆ ನಡೆದ ೭೫ ಕನ್ನಡ ಸಾಹಿತ್ಯ ಸಮ್ಮೇಳನಗಳ ಪೈಕಿ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದವರಲ್ಲಿ ಗೀತಾ ನಾಗಭೂಷಣ್ ೪ನೆಯವರಾಗಿದ್ದಾರೆ. ೧೯೭೪ನೆ ಸಾಲಿನ ಮೇ.೩೧ರಂದು ಮಂಡ್ಯದಲ್ಲಿ ನಡೆದ ೪೮ನೆ ಸಮ್ಮೇಳನಕ್ಕೆ ಜಯದೇವಿತಾಯಿ ಲಿಗಾಡೆ, ೨೦೦೦ನೆ ಸಾಲಿನ ಜೂ.೨೪ರಂದು ಬಾಗಲಕೋಟೆಯಲ್ಲಿ ನಡೆದ ೬೧ನೆ ಸಮ್ಮೇಳನಕ್ಕೆ ಶಾಂತಾದೇವಿ ಮಾಳವಾಡ ಹಾಗೂ ೨೦೦೩ನೆ ಸಾಲಿನ ಡಿ.೧೮ರಂದು ಮೂಡುಬಿದಿರೆಯಲ್ಲಿ ನಡೆದ ೭೧ನೆ ಸಮ್ಮೇಳನಕ್ಕೆ ಕಮಲಾ ಹಂಪನಾ ಆಯ್ಕೆಯಾಗಿದ್ದರು.

ಫೆ.೧೯ರಿಂದ ಫೆ.೨೧ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿರುವ ಗೀತಾ ನಾಗಭೂಷಣ್, ೧೯೪೨ನೆ ಸಾಲಿನ ಮಾ.೨೫ರಂದು ಗುಲ್ಬರ್ಗಾ ಜಿಲ್ಲೆಯ ಸಾವಳಗಿ ಗ್ರಾಮದಲ್ಲಿ ಜನಿಸಿದ್ದಾರೆ. ಶಾಂತಪ್ಪ ಹಾಗೂ ಶರಣಮ್ಮರ ಪುತ್ರಿಯಾಗಿರುವ ಇವರು, ಎಂಎ, ಬಿ.ಎಡ್ ಪದದರರು. ನಿವೃತ್ತ ಪ್ರಾಂಶುಪಾಲರಾಗಿರುವ ಇವರು ಗುಲ್ಬರ್ಗಾದ ನೆಹರು ಗಂಜದಲ್ಲಿರುವ ಶ್ರೀ ನಗರೇಶ್ವರ ಸಂಯುಕ್ತ ಕಿರಿಯ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.

೨೧ ಕಾದಂಬರಿ, ೧ ಸಂಶೋಧನೆ, ಸಂಪಾದನೆ, ೨ ಕಥಾ ಸಂಕಲನ ಸೇರಿದಂತೆ ಒಟ್ಟು ೩೨ ಕೃತಿಗಳನ್ನು ಗೀತಾ ನಾಗಭೂಷಣ್ ಬರೆದಿದ್ದಾರೆ. ಇವರ ‘ಹಸಿಮಾಂಸ ಮತ್ತು ಹದ್ದುಗಳು’ ಎಂಬ ಕೃತಿ ಮರಾಠಿ ಭಾಷೆಗೆ ಅನುವಾದಗೊಂಡಿದೆ. ಅಲ್ಲದೆ ತೆಲುಗು, ತಮಿಳು ಭಾಷೆಗಳಲ್ಲಿ ಕಥೆಗಳು ಅನುವಾದಗೊಂಡಿವೆ.

ಗೀತಾ ನಾಗಭೂಷಣ್‌ರ ಸುಮಾರು ೫೦ ಕಥೆಗಳು, ೧೫ ನಾಟಕಗಳು ಗುಲ್ಬರ್ಗಾ, ಧಾರವಾಡ, ಮೈಸೂರು, ಬೆಂಗಳೂರು ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾಗಿದೆ. ನಾಟಕಗಳಾದ ‘ಜೋಗಿಣಿ’, ‘ಅವ್ವ’, ಕಥಾ ನಾಟಕ ‘ಸತ್ತ ಹೆಣ್ಣಿನ ಸುತ್ತ’, ಧಾರವಾಹಿ ‘ಜೀವನ ಚಕ್ರ’, ‘ನೀಲಗಂಗಾ’ ದೂರದರ್ಶನದಲ್ಲಿ ಪ್ರಸಾರವಾಗಿವೆ.

‘ಹಸಿಮಾಂಸ ಮತ್ತು ಹದ್ದುಗಳು’ ಎಂಬ ಗೀತಾ ನಾಗಭೂಷಣ್‌ರ ಕಾದಂಬರಿ ಆಧರಿಸಿ ‘ಹೆಣ್ಣಿನ ಕೂಗು’ ಎಂಬ ಹೆಸರಿನಿಂದ ಚಲನಚಿತ್ರವಾಗಿ ಜನರ ಮೆಚ್ಚುಗೆ ಪಡೆದಿದೆ. ಈ ಚಿತ್ರವನ್ನು ದೊರೆ ಭಗವಾನ್ ನಿರ್ದೇಶನ ಮಾಡಿದ್ದರು. ಇದಲ್ಲದೆ ಇವರ ‘ಬದಲಾಗುವ ಬಣ್ಣಗಳು’, ‘ಅವಾಂತರ’ ಮತ್ತು ‘ನೀಲಗಂಗಾ’ ಕಾದಂಬರಿಗಳು ಸಿನಿಮಾಗಾಗಿ ಹಕ್ಕುಗಳನ್ನು ಪಡೆದುಕೊಂಡಿದೆ.

ಗೀತಾ ನಾಗಭೂಷಣ್‌ರ ‘ಕಲ್ಲರಳಿ ಹೂವಾಗಿ’ ಸಣ್ಣ ಕತೆ ೧೯೮೦ರಿಂದ ೧೯೯೨ರವರೆಗೆ ೮ನೆ ತರಗತಿಗೆ, ‘ಅವ್ವ ಮತ್ತು ಇತರ ಕಥೆಗಳು(ಕಥಾ ಸಂಕಲನ)’೧೯೯೫ನೆ ಸಾಲಿನಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಥಮ ವರ್ಷದ ಬಿಕಾಂಗೆ, ‘ಧುಮ್ಮಸು(ಕಾದಂಬರಿ)’ ೧೯೯೬ನೆ ಸಾಲಿನಿಂದ ಧಾರವಾಡ ವಿಶ್ವವಿದ್ಯಲಯದ ಪ್ರಥಮ ವರ್ಷದ ಬಿಕಾಂಗೆ, ‘ಬದುಕು’ ಕಾದಂಬರಿ ೨೦೦೨ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಅಂತಿಮ ಎಂಎ ತರಗತಿಗಳಿಗೆ ಪಠ್ಯಪುಸ್ತಕಗಳಾಗಿವೆ.

ಸಂದ ಪ್ರಶಸ್ತಿಗಳು: ಗೀತಾ ನಾಗಭೂಷಣ್ ತಮ್ಮ ‘ಬದುಕು’ ಕಾದಂಬರಿಗೆ ೨೦೦೪ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ, ೧೯೯೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ, ಕರ್ನಾಟಕ ರಾಜ್ಯೋತ್ಸವ, ೨೦೦೨ರಲ್ಲಿ ಕರ್ನಾಟಕ ಸರಕಾರದ ದಾನ ಚಿಂತಾಮಣಿ, ೨೦೦೪ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಾಡೋಜ, ೧೯೮೩ರಲ್ಲಿ ‘ಆಘಾತ’ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿಗಳಿಗೆ ಭಾಜೀನರಾಗಿದ್ದಾರೆ.

೨೦೦೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪದ್ಮಶ್ರೀ ಬಿ.ಸರೋಜಾದೇವಿ ಸಾಹಿತ್ಯ ಪ್ರಶಸ್ತಿ, ‘ದಂಗೆ’ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜಾರಾಂ ದತ್ತಿ, ೨೦೦೫ರಲ್ಲಿ ಬೆಂಗಳೂರಿನ ಕರ್ನಾಟಕ ಲೇಖಕಿಯರ ಸಂಘದ ‘ಅನುಪಮ’ ಸೇರಿದಂತೆ ಅನೇಕ ಪ್ರಶಸ್ತಿ ಹಾಗೂ ಬಹುಮಾನಗಳನ್ನು ಗೀತಾ ನಾಗಭೂಷಣ್ ಪಡೆದಿದ್ದಾರೆ. ಅಲ್ಲದೆ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರದ ಗೌರವಕ್ಕೂ ಪಾತ್ರರಾಗಿದ್ದಾರೆ.

ಸರಳವಾಗಿ ಆಚರಿಸಲು ನಿರ್ಧಾರ: ಸಮ್ಮೇಳನ ನಡೆಸಲು ದಿನಾಂಕ ಹಾಗೂ ಅಧ್ಯಕ್ಷರ ಆಯ್ಕೆ ಕುರಿತಂತೆ ಚರ್ಚಿಸಲು ಸಾಹಿತ್ಯ ಪರಿಷತ್ತಿನ ಕಾರ್ಯಕಾರಣಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪರಿಷತ್ತಿನ ಅಧ್ಯಕ್ಷ ಆರ್.ಕೆ.ನಲ್ಲೂರು ಪ್ರಸಾದ್, ೭೬ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ನೆರೆ ಹಾವಳಿಯಿಂದ ಉತ್ತರ ಕರ್ನಾಟಕದ ಜನತೆ ಸಂಕಷ್ಟದಲ್ಲಿರುವುದನ್ನು ಮನಗಂಡಿದ್ದು, ಈ ಬಾರಿಯ ಸಮ್ಮೇಳನದಲ್ಲಿ ಎಲ್ಲರಿಗೂ ಸರಳ ರೀತಿಯ ಬೋಜನ ವ್ಯವಸ್ಥೆ ಮಾಡುವುದ ಸೇರಿದಂತೆ ವೆಚ್ಚಗಳಿಗೆ ಕಡಿವಾಣ ಹಾಕಬೇಕೆಂದು ತೀರ್ಮಾನಿಸಲಾಗಿದೆ ಎಂದು ನಲ್ಲೂರು ಪ್ರಸಾದ್ ತಿಳಿಸಿದರು.

ಪ್ರತಿ ವರ್ಷ ಸಮ್ಮೇಳನವನ್ನು ಆಡಂಬರ, ಸಂಭ್ರಮದಿಂದ ನಡೆಸಲಾಗುತ್ತಿತ್ತು. ಸಮ್ಮೇಳನಾಧ್ಯಕ್ಷರನ್ನು ನಗರದಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಗುತ್ತಿತ್ತು. ಇವೆಲ್ಲವನ್ನು ರದ್ದುಪಡಿಸಲಾಗಿದ್ದು, ಸಮ್ಮೇಳನಾಧ್ಯಕ್ಷರನ್ನು ವೇದಿಕೆಯ ಸ್ವಲ್ವ ದೂರದಿಂದ ಗೌರವಯುತವಾಗಿ ಬರಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಒಟ್ಟಾರೆ ಸಮ್ಮೇಳನ ಸಂಭ್ರಮದಿಂದ ನಡೆಸದೆ, ನೆರೆ ಸಂತ್ರಸ್ತರಿಗೆ ಸಾಂತ್ವಾನ ಹೇಳುವ ರೀತಿ ನಡೆಸಲು ನಿರ್ಧರಿಸಲಾಗಿದೆ ಎಂದು ನಲ್ಲೂರು ಪ್ರಸಾದ್ ಹೇಳಿದರು.

ಪ್ರಸಕ್ತ ಸಾಲಿನ ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಜೊತೆಗೆ ಪ್ರಕೃತಿ ವಿಕೋಪ, ಜನತೆಯ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಆಧರಿತ ವಿಚಾರ ಸಂಕಿರಣಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಸಮ್ಮೇಳನದಲ್ಲಿ ನಡೆಸಲಾಗುವ ಎಲ್ಲ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ಧಪಡಿಸಲು ವಿಮರ್ಶಕ ಎಸ್.ಜಿ.ಸಿದ್ಧರಾಮಯ್ಯ ಒಳಗೊಂಡ ವಿಧ್ವಾಂಸರ ಸಮಿತಿಯನ್ನು ನೇಮಿಸಲಾಗಿದೆ ಎಂದು ನಲ್ಲೂರು ಪ್ರಸಾದ್ ತಿಳಿಸಿದರು.

ಕಾರ್ಯಕಾರಣಿ ಸಭೆಯಲ್ಲಿ ಸಮ್ಮೇಳನಾಧ್ಯಕ್ಷರ ಸ್ಥಾನಕ್ಕೆ ಡಾ.ಎಂ.ಚಿದಾನಂದ ಮೂರ್ತಿ, ಪ್ರೊ.ಜಿ.ವೆಂಕಟಸುಬ್ಬಯ್ಯ, ಗೀತಾ ನಾಗಭೂಷಣ್, ಡಾ.ಎಂ.ಎಂ.ಕಲಬುರ್ಗಿ, ಡಾ.ಲತಾ ರಾಜಶೇಖರ್, ವೈದೇಹಿ ಹೆಸರುಗಳು ಸೂಚಿತವಾಗಿದ್ದವು. ನಂತರ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಹಿರಿಯ ಸಾಹಿತಿ ಹಾಗೂ ಲೇಖಕಿ ಗೀತಾ ನಾಗಭೂಷಣ ಅವರನ್ನು ಸರ್ವಸಮ್ಮತದಿಂದ ಆಯ್ಕೆ ಮಾಡಲಾಯಿತು ಎಂದು ನಲ್ಲೂರು ಪ್ರಸಾದ್ ವಿವರಿಸಿದರು.

ಸಮ್ಮೇಳನಾಧ್ಯಕ್ಷತೆ ಗರಿ ಆಯ್ಕೆ ಸಂತಸ ತಂದಿದೆ: ಡಾ|ಗೀತಾ

ಕಲಬುರ್ಗಿ, ಜ. ೬: ಹಿಂದುಳಿದ ಹೈ-ಕ ಪ್ರಮುಖ ಜಿಲ್ಲೆಯಾಗಿ ಸಾರಸ್ವತ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕಲಬುರ್ಗಿ ಜಿಲ್ಲೆಗೆ ಪ್ರಥಮ ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವ ಲಭಿಸಿದ್ದು, ಸಂತಸ ತಂದಿದೆ. ತಮ್ಮ ಆಯ್ಕೆ ಅನಿರೀಕ್ಷಿತ ಎಂದು ಗದಗದಲ್ಲಿ ನಡೆಯಲಿರುವ ೭೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷೆ ಯಾಗಿರುವ ಡಾ|ಗೀತಾ ನಾಗಭೂಷಣ ಹೇಳಿದರು.

ದೂರವಾಣಿ ಮೂಲಕ ಮಾತನಾಡಿದ ಅವರು, ಸಮ್ಮೇಳನಾ ಧ್ಯಕ್ಷೆಯಾಗಿ ಆಯ್ಕೆ ಯಾಗುವನೆಂಬ ನಿರೀಕ್ಷೆಯಿರಲಿಲ್ಲ. ಅಭಿಮಾನಿ ಯೊಬ್ಬರು ಈ ವಿಷಯ ದೂರವಾಣಿ ಯಲ್ಲಿ ತಿಳಿಸಿದಾಗ ತುಂಬಾ ಸಂತಸ ವಾಯಿತು. ತಮಗೆ ಸಿಕ್ಕ ಗೌರವ ಕಲಬುರ್ಗಿ ಜಿಲ್ಲೆಯ ಎಲ್ಲ ಲೇಖಕ, ಲೇಖಕಿಯರಿಗೆ ಸಿಕ್ಕ ಗೌರವವಾಗಿದೆ ಎಂದು ವಿನಯದಿಂದ ಅವರು ಹೇಳಿದರು.

ಕಲಬುರ್ಗಿ ಆಡು ಭಾಷೆಯಲ್ಲಿ ಕಾದಂಬರಿ, ಕಥೆಗಳನ್ನು ಬರೆದಿರುವ ಗೀತಾ ನಾಗಭೂಷಣ ಅವರು ಕೃತಿಗಳಲ್ಲಿ ಬಡ, ಮಧ್ಯಮ ವರ್ಗ, ತುಳಿತಕ್ಕೊಳಗಾದ ಜನರ ಬವಣೆ ಗಳನ್ನು ಚಿತ್ರಿಸಿದ್ದಾರೆ. ಅವರ ಕಥೆ, ಕಾದಂಬರಿಗಳಲ್ಲಿ ಮಹಿಳೆಯ ಮೇಲಿನ ದೌರ್ಜನ್ಯ ಹಾಗೂ ಬದುಕಿ ಗಾಗಿ ಆಕೆ ಪಡುವ ಪಾಡು ಚಿತ್ರಿಸ ಲಾಗಿದೆ. ೩೨ ಕೃತಿಗಳನ್ನು ರಚಿಸಿರುವ ಗೀತಾ ನಾಗಭೂಷಣರಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ೨೦೦೪ರಲ್ಲಿ ಬದುಕು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ನಗರದ ನಗರೇಶ್ವರ ಕಾಲೇಜ್, ಪ್ರೌಢಶಾಲೆಗಳಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಗೀತಾ ನಾಗಭೂಷಣ ಅವರು ಮಹಿಳೆಯರ ಪರ ಧ್ವನಿ ಎತ್ತಿದ ರಾಜ್ಯದ ಸಾಹಿತಿಗಳಲ್ಲಿ ಪ್ರಮುಖರು.

ಕಲಬುರ್ಗಿ ಜಿಲ್ಲೆಯ ೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾ ಗಿದ್ದ ಗೀತಾ ನಾಗಭೂಷಣ ಅವರು ರಾಜ್ಯ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಯಾಗಿ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಹಸಿಮಾಂಸ ಮತ್ತು ಹದ್ದುಗಳು ಸೇರಿದಂತೆ ಅನೇಕ ಕಥಾ ಸಂಕಲನಗಳನ್ನು ಹೊರತಂದಿದ್ದಾರೆ.

ಕಲಬುರ್ಗಿ ವಿಭಾಗದ ಡಾ| ಶಾಂತರಸ, ಡಾ|ಸಿದ್ದಯ್ಯ ಪುರಾಣಿಕ ರಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವ ಲಭಿಸಿತ್ತು. ಆದರೆ ಕಲಬುರ್ಗಿ ಜಿಲ್ಲೆಗೆ ಈ ಗೌರವ ಲಭಿಸಿರಲಿಲ್ಲ. ಪ್ರಥಮ ಬಾರಿಗೆ ಈ ಗೌರವ ದಕ್ಕಿದ್ದು, ಅದರಲ್ಲೂ ಮಹಿಳಾ ಸಾಹಿತಿಗೆ ದಕ್ಕಿದ್ದು, ಇಲ್ಲಿನ ಸಾಹಿತ್ಯ ವಲಯದಲ್ಲಿ ಹಾಗೂ ಸಾರ್ವಜನಿಕ ರಂಗದಲ್ಲಿ ಸಂತಸ ತಂದಿದೆ.

ಸಂತಸ:

೭೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೀತಾ ನಾಗಭೂಷಣ ಅವರು ಆಯ್ಕೆ ಯಾದ ಸುದ್ದಿ ಪ್ರಕಟವಾಗುತ್ತಿದ್ದಂತೆ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಕಚೇರಿ ಕನ್ನಡ ಭವನದ ಎದುರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂತಸ ಹಂಚಿಕೊಳ್ಳಲಾಯಿತು.

ಈ ವೇಳೆ ದೌಲತರಾಯ ಪಾಟೀಲ, ಪ್ರೇಮಚಂದ್ರ ಚವ್ಹಾಣ ಸೇರಿದಂತೆ ಜಿಲ್ಲಾ ಉದಯೋನ್ಮುಖ ಬರಹಗಾರರ ಬಳಗದ ಸದಸ್ಯರು ಭಾಗವಹಿಸಿದ್ದರು.
ಕೃಪೆ :ಉದಯವಾಣಿ

No comments: