ಲಾಲ್ ಚೌಕ್‌ನಲ್ಲಿನ ಪಂಜಾಬ್ ಹೊಟೇಲ್‌ನಲ್ಲಿ ಅಡಗಿಕೊಂಡಿದ್ದ ಇಬ್ಬರೂ ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸುವ ಮೂಲಕ ಕಳೆದ 22 ಗಂಟೆಗಳಿಂದ ಅವಿರತವಾಗಿ ನಡೆಯುತ್ತಿದ್ದ ಗುಂಡಿನ ಚಕಮಕಿ ಗುರುವಾರ ಅಂತ್ಯಗೊಂಡಿದೆ.
ಇಂದು ಬೆಳಿಗ್ಗೆ 10.30ರ ಸುಮಾರಿಗೆ ಇಬ್ಬರೂ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಕೊಂದು ಹಾಕಿವೆ. ಜಮಾತ್ ಉಲ್ ಮುಜಾಹಿದಿನ್ ಭಯೋತ್ಪಾದಕ ಸಂಘಟನೆಗೆ ಇವರಿಬ್ಬರೂ ಸೇರಿದವರು ಎಂದು ಹೇಳಲಾಗಿದ್ದು, ಕಾರ್ಯಾಚರಣೆಯನ್ನು ಅಧಿಕೃತವಾಗಿ ಮುಗಿಸಲಾಗಿದೆ ಎಂದು ಭದ್ರತಾ ಪಡೆ ಮುಖ್ಯಸ್ಥರು ಪ್ರಕಟಿಸಿದ್ದಾರೆ.
ಇದರೊಂದಿಗೆ ನಿನ್ನೆ ಆರಂಭವಾಗಿದ್ದ ಉಗ್ರರ ವಿರುದ್ಧದ ಹೋರಾಟದಲ್ಲಿ ಮೂವರು ಪಾಕಿಸ್ತಾನಿ ಫಿದಾಯಿನ್‌ಗಳನ್ನು ಕೊಂದು ಹಾಕಿದಂತಾಗಿದೆ. ನಿನ್ನೆ ಕಾರ್ಯಾಚರಣೆ ಸಂದರ್ಭದಲ್ಲಿ ಉಗ್ರನೊಬ್ಬನನ್ನು ಕೊಂದು ಹಾಕಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಚಾಲಕ ಮೊಹಮ್ಮದ್ ಯೂಸುಫ್ ಎಂಬವರು ಉಗ್ರರ ಗುಂಡಿಗೆ ಬಲಿಯಾಗಿದ್ದರು.
ಕಾರ್ಯಾಚರಣೆ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಗಾಯಗೊಂಡಿದ್ದು, ಒಟ್ಟಾರೆ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಎನ್‌ಕೌಂಟರ್ ಮೂಲಕ ಉಗ್ರರನ್ನು ಕೊಂದು ಹಾಕಿದ ಬಳಿಕ ಇದೀಗ ಕಟ್ಟಡವನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಸಂಪೂರ್ಣ ಘಟನೆಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಪೊಲೀಸ್ ಅಧಿಕಾರಿಗಳು ಆರೋಪಿಸಿದ್ದಾರೆ. ಈ ದಾಳಿಯ ಕುರಿತು ನಮಗೆ ಮೊದಲೇ ಮಾಹಿತಿಯಿದ್ದ ಕಾರಣ ಸಂಭಾವ್ಯ ಭಾರೀ ಅನಾಹುತವನ್ನು ತಪ್ಪಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸರಿಗೆ ಮೊದಲೇ ಮುನ್ಸೂಚನೆ ಸಿಕ್ಕಿದ ಕಾರಣ ಆ ಪ್ರದೇಶದ ನಾಗರಿಕರನ್ನು ತೆರವುಗೊಳಿಸುವ ಕಾರ್ಯಕ್ಕೆ ಮೊದಲು ಚಾಲನೆ ನೀಡಲಾಗಿತ್ತು. ಬಳಿಕ ಉಗ್ರರ ವಿರುದ್ಧದ ಕಾರ್ಯಾಚರಣೆ ನಡೆಸಲಾಯಿತು.
Source - thatskannada
Subscribe to:
Post Comments (Atom)
No comments:
Post a Comment