ಕಳಂಕಿತ ಆರೋಪ ಹೊತ್ತಿರುವ ಸಚಿವ ರೇಣುಕಾಚಾರ್ಯ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿ ಮಾಜಿ ಪ್ರೇಯಸಿ ನರ್ಸ್ ಜಯಲಕ್ಷ್ಮಿ ಹೊನ್ನಾಳಿಯಲ್ಲಿ ಗುರುವಾರ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿರುವ ಪರಿಣಾಮ ನರ್ಸ್ ಪ್ರತಿಭಟನೆಗೆ ತಡೆ ಬಿದ್ದಂತಾಗಿದೆ.
ರೇಣುಕಾಚಾರ್ಯ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿ ಇತ್ತೀಚೆಗಷ್ಟೇ ಮಹಿಳಾ ಸಂಘಟನೆ ಬೆಂಬಲದೊಂದಿಗೆ ಜಯಲಕ್ಷ್ಮಿ ನಗರದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯಪಾಲರಿಗೂ ದೂರು ನೀಡಿದ್ದರು. ಅಲ್ಲದೇ ಸಚಿವರ ಸ್ವಕ್ಷೇತ್ರವಾಗಿರುವ ಹೊನ್ನಾಳಿಯಲ್ಲಿಯೂ ಜ.7ರಂದು ತೀವ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದರು.
ಆದರೆ ಜಯಲಕ್ಷ್ಮಿ ಅವರು ಪ್ರತಿಭಟನೆ ನಡೆಸುವುದಾಗಿ ಹೇಳಿಕೆ ನೀಡುತ್ತಿದ್ದಂತೆಯೇ ಹೊನ್ನಾಳಿಯಲ್ಲಿನ ಮಹಿಳಾ ಸಂಘಟನೆಗಳು ನರ್ಸ್ ವಿರುದ್ಧವೇ ತಿರುಗಿ ಬಿದ್ದು ತಾವು ನರ್ಸ್ ವಿರುದ್ಧವೇ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇಕ್ಕಟ್ಟಿಗೆ ಸಿಲುಕಿತ್ತು. ಆ ಕಾರಣಕ್ಕಾಗಿ ಇಂದು ಹೊನ್ನಾಳಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಹಿಳೆಯನ್ನು ಎದುರಿಸಲಾಗದ ಹೇಡಿ ರೇಣುಕಾಚಾರ್ಯ: ಹೊನ್ನಾಳಿಯಲ್ಲಿ ನಿಷೇಧಾಜ್ಞೆ ಜಾರಿಯಾದ ಹಿನ್ನೆಲೆಯಲ್ಲಿ ಇಂದು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಕೈ ಬಿಡಲಾಗಿದೆ ಎಂದು ತಿಳಿಸಿರುವ ಜಯಲಕ್ಷ್ಮಿ, ಮಹಿಳೆಯನ್ನು ಎದುರಿಸಲಾಗದ ಮಂತ್ರಿ ರೇಣುಕಾಚಾರ್ಯ ನಿಷೇಧಾಜ್ಞೆ ಹೇರುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಇಂತಹ ನಿಷೇಧಾಜ್ಞೆ ಎಷ್ಟು ದಿನ ಹೇರಲು ಸಾಧ್ಯ ಎಂದು ಪ್ರಶ್ನಿಸಿರುವ ಅವರು, ಈ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ರೇಣುಕಾಚಾರ್ಯ ಅವರು ಹೊನ್ನಾಳಿಯಲ್ಲಿ ನಿಷೇಧಾಜ್ಞೆ ಹೇರುವ ಮೂಲಕ ತಮ್ಮ ಸಚಿವಗಿರಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆಂದು ಆರೋಪಿಸಿದರು.
Source - Webdunia
Jan 7, 2010
Subscribe to:
Post Comments (Atom)
No comments:
Post a Comment