VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 14, 2010

ಸುಪ್ರೀಂಕೋರ್ಟ್ ಮಹತ್ವದ ತೀರ್ಪು : ದಶಕಗಳ ಕಾಲದ ವಿವಾದಕ್ಕೆ ತೆರೆ.. ಹುಬ್ಬಳ್ಳಿ ಪಾಲಿಕೆಗೆ ಈದ್ಗಾ ಮೈದಾನ

ಹುಬ್ಬಳ್ಳಿಯ ಈದ್ಗಾ ಮೈದಾನದ ಒಡೆತನ ಅಲ್ಲಿನ ಮಹಾನಗರಪಾಲಿಕೆಗೆ ಸೇರುತ್ತದೆ ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.


ನವದೆಹಲಿ: ಹುಬ್ಬಳ್ಳಿಯ ಈದ್ಗಾ ಮೈದಾನದ ಒಡೆತನ ಅಲ್ಲಿನ ಮಹಾನಗರಪಾಲಿಕೆಗೆ ಸೇರುತ್ತದೆ ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ. ಇದರಿಂದಾಗಿ ಹಿಂದೂ- ಮುಸ್ಲಿಂ ಸಮುದಾಯದ ನಡುವಿನ ದಶಕಗಳ ವಿವಾದಕ್ಕೆ ತೆರೆ ಬಿದ್ದಿದೆ.

ಈವರೆಗೆ ಮೈದಾನದ ಒಡೆತನವನ್ನು ಪ್ರತಿಪಾದಿಸುತ್ತಾ ಬಂದಿದ್ದ ನಗರದ ಅಂಜುಮನ್- ಎ- ಇಸ್ಲಾಂ ಸಂಸ್ಥೆ, ಇದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕ ಹೈಕೋರ್ಟ್ 1992ರಲ್ಲಿ ನೀಡಿದ್ದ ಆದೇಶದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ‘ಹೈಕೋರ್ಟ್ ಆದೇಶದ ವಿರುದ್ಧ ಮಧ್ಯ ಪ್ರವೇಶಿಸಲು ನಾವು ಬಯಸುವುದಿಲ್ಲ’ ಎಂದು ನ್ಯಾಯಾಧೀಶರಾದ ದಲ್‌ವೀರ್ ಭಂಡಾರಿ ಮತ್ತು ಎ.ಕೆ.ಪಟ್ನಾಯಕ್ ಅವರನ್ನು ಒಳಗೊಂಡ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಅಂಜುಮನ್ ವಕೀಲ ರಾಜೇಶ್ ಮಹಾಲೆ ಅವರು ‘ಇದರಿಂದ ಒಂದು ಬಣ ಪ್ರತಿಭಟನೆಗೆ ಮುಂದಾಗುವ ಸಾಧ್ಯತೆ ಇದೆ’ ಎಂದು ಹೇಳಿದಾಗ, ‘ಕೋಮು ಸೌಹಾರ್ದ ಕಾಪಾಡಿ, ಅವರು ಧಾರ್ಮಿಕ ಚಟುವಟಿಕೆ ಮತ್ತು ಪ್ರಾರ್ಥನೆಯನ್ನು ಮುಂದುವರಿಸಲಿ’ ಎಂದು ಪೀಠ ತಿಳಿಸಿತು.

ಇದಕ್ಕೆ ಮುನ್ನ ವಾದ ಮಂಡಿಸಿದ ಮಹಾಲೆ, ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಹಾಗೂ ಇತರ ಧಾರ್ಮಿಕ ಚಟುವಟಿಕೆಗಳನ್ನು ನಡೆಸುವ ಸಲುವಾಗಿ 1930ರಲ್ಲಿ ಅಂದಿನ ಬ್ರಿಟಿಷ್ ಅಧಿಕಾರಿಗಳು ಅಂಜುಮನ್ ಸಂಸ್ಥೆಗೆ ಒಂದು ರೂಪಾಯಿ ಆಧಾರದ ಮೇಲೆ 999 ವರ್ಷದ ಗುತ್ತಿಗೆ ಪರವಾನಗಿ ನೀಡಿದ್ದರು ಎಂದು ಕೋರ್ಟ್‌ಗೆ ಮಾಹಿತಿ ಇತ್ತರು. ಮೈದಾನದಲ್ಲಿ ಯಾವುದೇ ನಿರ್ಮಾಣಕ್ಕೂ ಅಂಜುಮನ್ ಮುಂದಾಗುವುದಿಲ್ಲ, ಅಲ್ಲಿನ ಒಂದು ಎಕರೆ ವ್ಯಾಪ್ತಿಯಲ್ಲಿ ರೂಢಿಗತ ಹಕ್ಕುಗಳಿಗೆ ಪೂರಕವಾಗಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುತ್ತದೆ ಎಂದರು.

ಮೈದಾನದಲ್ಲಿ ಉದ್ಯಾನ ನಿರ್ಮಿಸಲು ಸಂಸ್ಥೆಗೆ ಅನುಮತಿ ನೀಡಬೇಕೆಂಬ ಅಂಜುಮನ್ ಪರ ಮತ್ತೊಬ್ಬ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರ ಮನವಿಯನ್ನೂ ಪೀಠ ಪುರಸ್ಕರಿಸಲಿಲ್ಲ.ಕರ್ನಾಟಕ ಸರ್ಕಾರದ ಪರವಾಗಿ ವಕೀಲರಾದ ಬಸವಪ್ರಭು ಪಾಟೀಲ್, ಅನಿತಾ ಶೆಣೈ ಹಾಗೂ ಹುಬ್ಬಳ್ಳಿ- ಧಾರವಾಡ ಮಹಾನಗರಪಾಲಿಕೆ ವತಿಯಿಂದ ಇ.ಸಿ.ವಿದ್ಯಾಸಾಗರ್ ಹಾಜರಿದ್ದರು.

ಸಂಧಾನಕ್ಕೆ ಹಿನ್ನಡೆ: ಈ ಹಿಂದೆ ಮಹಾನಗರಪಾಲಿಕೆಯ ಮಧ್ಯಸ್ಥಿಕೆಯಲ್ಲಿ ವಿವಾದ ಇತ್ಯರ್ಥ ಪಡಿಸಿಕೊಳ್ಳಲು ಕರ್ನಾಟಕದ ಅಧಿಕಾರಿಗಳು, ಪಾಲಿಕೆ ಹಾಗೂ ಹಿಂದೂ- ಮುಸ್ಲಿಂ ನಾಯಕರಿಗೆ ಸುಪ್ರೀಂಕೋರ್ಟ್ 2009ರ ಜುಲೈ 6ರಂದು ಅಂತಿಮ ಅವಕಾಶ ನೀಡಿತ್ತು. ಅದರ ಅನ್ವಯ ಪಾಲಿಕೆ ನಡೆಸಿದ ಮೂರು ಸಭೆಗಳಲ್ಲೂ ಸಂಧಾನ ಯತ್ನ ವಿಫಲವಾಗಿತ್ತು. ವರ್ಷದಲ್ಲಿ ಎರಡು ದಿನ ಮೈದಾನವನ್ನು ಪ್ರಾರ್ಥನೆಗೆ ಬಳಸಿಕೊಳ್ಳಲು ಉಭಯ ಬಣಗಳೂ ಒಪ್ಪಿಕೊಂಡಿದ್ದವಾದರೂ ಅದರ ಒಡೆತನ ಹಾಗೂ ನಿರ್ವಹಣೆಗೆ ಸಂಬಂಧಿಸಿದ ವಿವಾದ ಮಾತ್ರ ಬಗೆಹರಿಯಲಿಲ್ಲ. ಇದನ್ನು ಪಾಲಿಕೆಯ ಆಯುಕ್ತರು ಕೋರ್ಟ್‌ಗೆ ನೀಡಿದ ವರದಿಯಲ್ಲಿ ವಿವರಿಸಿದ್ದರು.

ಭೂಮಿಯನ್ನು ತಮ್ಮ ಒಡೆತನಕ್ಕೆ ನೀಡುವಂತೆ ಮನವಿ ಮಾಡಿದ್ದ ಕರ್ನಾಟಕ ವಕ್ಫ್ ಮಂಡಳಿ ಮತ್ತು ಅಂಜುಮನ್ ಸಂಸ್ಥೆ, ಮೈದಾನದ ಸುತ್ತ ಕಾಂಪೌಂಡ್ ನಿರ್ಮಾಣಕ್ಕೆ ಸಿದ್ಧವಾಗಿದ್ದವು. ಆದರೆ ಹೈಕೋರ್ಟ್ ಆದೇಶ ಇದಕ್ಕೆ ಅವಕಾಶ ನೀಡಿರಲಿಲ್ಲ. ಮುಸ್ಲಿಂ ಸಮುದಾಯ ಕಳೆದ 200 ವರ್ಷಗಳಿಂದಲೂ ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾ ಬಂದಿದೆ ಎಂದು ಸಂಸ್ಥೆ ಹೇಳಿತ್ತು. 1930ರಲ್ಲಿ ಸಂಸ್ಥೆ ಮೈದಾನವನ್ನು ಪಾಲಿಕೆಯಿಂದ 999 ವರ್ಷಗಳ ಗುತ್ತಿಗೆಗೆ ಪಡೆದಿದೆ ಎಂದು ಹೈಕೋರ್ಟ್ ತಿಳಿಸಿತ್ತು.

Prajavani

No comments: