ಹೌದು, ಕೋಮುಗಲಭೆಗಳಲ್ಲಿ ಎಲ್ಲರೂ ಬೆಟ್ಟು ಮಾಡಿ ತೋರಿಸುತ್ತಿರುವ ಗುಜರಾತ್ ಎಂಬ ಗಾಂಧಿ ರಾಜ್ಯವನ್ನೂ ಕರ್ನಾಟಕ ಮೀರಿ ನಿಂತಿದೆ. ಕಳೆದ ಐದು ವರ್ಷಗಳಲ್ಲಿ ನಡೆದಿರುವ ಕೋಮುಗಲಭೆಗಳ ಪಟ್ಟಿಯ ಪ್ರಕಾರ ಕರ್ನಾಟಕವು ಬರೋಬ್ಬರಿ 341 ಪ್ರಕರಣಗಳನ್ನು ಕಂಡಿದೆ. ಬಿಜೆಪಿ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳೂ ಕೋಮು ಸೌಹಾರ್ದತೆ ಕಾಪಾಡಿಕೊಂಡಿಲ್ಲವೆನ್ನುವುದು ಅಂಕಿ-ಅಂಶಗಳಿಂದ ಬಹಿರಂಗಗೊಂಡಿದೆ.
ಬಿಜೆಪಿ ಅಧಿಕಾರಕ್ಕೆ ಬಂದ ನಂತರವಂತೂ ಚರ್ಚ್ ಮೇಲಿನ ದಾಳಿಗಳೇ ಅಂಕಿ-ಅಂಶ ಹೆಚ್ಚಳಕ್ಕೆ ಸಹಾಯ ಮಾಡಿವೆ. 2008ರ ಒಂದೇ ವರ್ಷದಲ್ಲಿ 108 ಕೋಮುಗಲಭೆಗಳು ನಡೆದಿವೆ ಎನ್ನುವುದೇ ಇದಕ್ಕೆ ಸಿಗುವ ಪುರಾವೆ.
ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ವಿವಿಧ ಪಕ್ಷಗಳು ಆಡಳಿತ ಚುಕ್ಕಾಣಿ ಹಿಡಿದಿದ್ದು, ಯಾವುದೇ ಸರಕಾರಗಳು ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗಿವೆ. 2004-07ರ ಅವಧಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಪರಸ್ಪರ ಸಮ್ಮಿಶ್ರ ಸರಕಾರಗಳನ್ನು ನಡೆಸಿದ್ದವು. ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದ 2008ರ ಮೇ ತಿಂಗಳ ನಂತರವೂ ಪರಿಸ್ಥಿತಿ ಸುಧಾರಿಸಿಲ್ಲವೆನ್ನುವುದು ಕೇಂದ್ರ ಗೃಹ ಇಲಾಖೆಯ ಅಂಕಿ-ಅಂಶಗಳಿಂದ ರುಜುವಾತಾಗಿದೆ.
ಆ ಮೂಲಕ ಕರ್ನಾಟಕವು ದಕ್ಷಿಣ ಭಾರತದ ಕೋಮುಗಲಭೆಗಳಲ್ಲಿ ತನ್ನದೇ ಮೇಲುಗೈ ಎಂದು ಸಾರಿದೆ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕದ ಹೆಸರಿನಲ್ಲಿ ದಾಖಲಾಗಿರುವ 341 ಕೋಮುಗಲಭೆ ಪ್ರಕರಣಗಳಲ್ಲಿ ಬರೋಬ್ಬರಿ 108 ಪ್ರಕರಣಗಳು 2008ರಲ್ಲಿ ನಡೆದವುಗಳು ಮತ್ತು ಅವುಗಳಲ್ಲಿ ಹೆಚ್ಚಿನವು ಚರ್ಚ್ ದಾಳಿ ಕೇಸುಗಳು.
ಇಡೀ ಭಾರತದ ಲೆಕ್ಕಾಚಾರ ತೆಗೆದುಕೊಂಡಾಗ ಶಿವಸೇನೆಯ ಮುಷ್ಠಿಯಲ್ಲಿ ನಲುಗುತ್ತಿರುವ ಮಹಾರಾಷ್ಟ್ರ 681 ಕೋಮುಗಲಭೆ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳು ಕ್ರಮವಾಗಿ 654 ಮತ್ತು 613 ಪ್ರಕರಣಗಳನ್ನು ಕಳೆದೈದು ವರ್ಷಗಳಲ್ಲಿ ದಾಖಲಿಸಿಕೊಂಡಿವೆ.
ಕೋಮುಗಲಭೆಗೆ ಪ್ರಸಿದ್ಧಿಯಾಗಿದ್ದ ಗುಜರಾತ್‌ನಲ್ಲಿ ಕಳೆದ (ಗೋದ್ರಾ ಹತ್ಯಾಕಾಂಡ ನಡೆದಿರುವುದು 2002ರಲ್ಲಿ, ಆ ನಂತರದ ಅಂಕಿ-ಅಂಶಗಳು ಮಾತ್ರ ಇಲ್ಲಿವೆ) ಐದು ವರ್ಷಗಳಲ್ಲಿ 326 ಕೋಮುಗಲಭೆಗಳು ನಡೆದಿವೆ. ಒರಿಸ್ಸಾದಲ್ಲಿ 243 ಕೋಮು ಪ್ರಕರಣಗಳು ದಾಖಲಾಗಿವೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಚಂಡೀಗಢ, ದಾದ್ರ ಮತ್ತು ನಾಗರ ಹವೇಲಿ, ಲಕ್ಷದ್ವೀಪ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪುದುಚೇರಿ ಮತ್ತು ಸಿಕ್ಕಿಂಗಳಲ್ಲಿ ಕಳೆದೈದು ವರ್ಷಗಳಲ್ಲಿ ಕೋಮು ಗಲಭೆಗಳೇ ನಡೆದಿಲ್ಲ. ಜಮ್ಮು-ಕಾಶ್ಮೀರದಲ್ಲಿ ಏಕೈಕ ಪ್ರಕರಣ ದಾಖಲಾಗಿದೆ.
Jan 6, 2010
Subscribe to:
Post Comments (Atom)
No comments:
Post a Comment