ಮಂಗಳೂರು: ಕೆಲಸ ಬಿಡುತ್ತೇನೆ ಎಂದಿದ್ದಕ್ಕೆ ಕಂಪೆನಿ ಮಾಲಕ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿರುವ ಡಿವೈಎಫ್ಐ ಎಸ್ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.
ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಹೊರರಾಜ್ಯಕ್ಕೆ ಸೇರಿದ ಅಮರನಾಥ್ ಎಂಬವರ ಮಾಲಕತ್ವದ ಅಮರ್ ಮರೈನ್ ಎಂಟರ್ಪ್ರೈಸಸ್ ಇದೆ. ಇದರಲ್ಲಿ ಸುಮಾರು 35 ಮಂದಿ ಕಾರ್ಮಿಕರಿದ್ದು ಅವರನ್ನು 12 ಗಂಟೆ ದುಡಿಸಿ ಕೇವಲ ಎರಡರಿಂದ ಎರಡೂವರೆ ಸಾವಿರ ಸಂಬಳ ನೀಡಲಾಗುತ್ತಿದೆ. ಅಲ್ಲದೆ ಭತ್ಯೆ, ಪ್ರಾವಿಡೆಂಟ್ ಫಂಡ್ ಹಾಗೂ ಇತರ ಸೌಲಭ್ಯಗಳಿಂದಲೂ ವಂಚಿಸಲಾಗಿದೆಯೆಂದು ಆರೋಪಿಸಲಾಗಿದೆ. ಆದರೂ ಯಾವುದೇ ನೌಕರರೂ ಮಾಲಕರ ವಿರುದ್ಧ ಧ್ವನಿ ಎತ್ತಿರಲಿಲ್ಲ.
ಕಳೆದ ಒಂದು ವರ್ಷದಿಂದ ಜೋ ಡಿಸೋಜ ಎಂಬವರೂ ದುಡಿಯುತ್ತಿದ್ದು ಮಾಲಕರ ಶೋಷಣೆಯಿಂದ ಬೇಸತ್ತಿದ್ದರು. ಮೊನ್ನೆ ಕಂಪೆನಿ ವ್ಯವಸ್ಥಾಪಕರ ಬಳಿ ತಾನು ಕೆಲಸ ಬಿಡುವುದಾಗಿ ತಿಳಿಸಿದ್ದು ಬಳಿಕ ಮಾಲಕ ಅಮರ್ನಾಥ್ರಲ್ಲೂ ತಿಳಿಸಿದ್ದರು. ಇದರಿಂದ ಆಕ್ರೋಶಗೊಂಡ ಅಮರನಾಥ ಜೋ ಡಿಸೋಜರಿಗೆ ಬೈದು ಕೈಯಿಂದ ಹಲ್ಲೆ ನಡೆಸಿದ್ದಲ್ಲದೆ, `ನಿನ್ನನ್ನು ನಾನು ಕೊಲ್ಲಲೂ ಹೇಸುವುದಿಲ್ಲ. ನಿನಗೆ ಏನು ಮಾಡಲು ಸಾಧ್ಯವಿದೆ ಅದನ್ನು ಮಾಡು' ಎಂದು ಸಂಬಳ ನೀಡದೆ ದಾದಾಗಿರಿ ನಡೆಸಿದ್ದಾನೆಂದು ಆರೋಪಿಸಲಾಗಿದೆ.
ಇದರಿಂದ ನೊಂದ ಜೋ ಡಿಸೋಜರು ಸ್ಥಳೀಯ ಡಿವೈಎಫ್ಐ ಸಂಘಟನೆಯವರ ಮೂಲಕ ನಿನ್ನೆ ಎಸ್ಪಿ ಕಚೇರಿಗೆ ತೆರಳಿ ಅಮರ್ನಾಥ್ ವಿರುದ್ಧ ದೂರು ದಾಖಲಿಸಿದ್ದಾರೆ. ಮೆರೈನ್ ಕಂಪೆನಿಯಲ್ಲಿ ದುಡಿಯುತ್ತಿರುವ ಎಲ್ಲಾ ನೌಕರರಿಗೂ ಗರಿಷ್ಟ ಸಂಬಳ, ಭದ್ರತೆ ನೀಡುವಂತೆ ಡಿವೈಎಫ್ಐ ಒತ್ತಾಯಿಸಿದ್ದು, ಅಮರನಾಥರ ವಿರುದ್ಧ ಕ್ರಿಮಿನಲ್ ಪ್ರಕರಣದಡಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.
source: jayakirana
Jan 31, 2010
Subscribe to:
Post Comments (Atom)
No comments:
Post a Comment