
ಪೋರ್ಟ್-ಅ-ಪ್ರಿನ್ಸ್(ಪಿಟಿಐ): ಕೆರಿಬಿಯನ್ ದ್ವೀಪ ಸಮೂಹದ ಹೈಟಿಯಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭಾರಿ ಪ್ರಮಾಣದ ಭೂಕಂಪದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಸತ್ತಿರುವ ಶಂಕೆ ಇದೆ.
ರಾಷ್ಟ್ರಪತಿ ಭವನ, ವಿಶ್ವಸಂಸ್ಥೆ ಶಾಂತಿ ಪಾಲನಾ ನಿಯೋಗದ ಪ್ರಧಾನ ಕಚೇರಿ, ಐಷಾರಾಮಿ ಹೋಟೆಲ್‌ಗಳು, ಪಟ್ಟಣಗಳ ಕಟ್ಟಡಗಳು, ಗುಡ್ಡಗಾಡಿನ ಜೋಪಡಿ ಎಲ್ಲವೂ ನೆಲಸಮವಾಗಿವೆ. ‘ಹೈಟಿಯ ಅಧ್ಯಕ್ಷ ರೀನೆ ಪ್ರೆವಲ್ ಮತ್ತು ಅವರ ಪತ್ನಿ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿದ್ದಾರೆ ಎಂದು ಮೆಕ್ಸಿಕೊ ರಾಯಭಾರಿ ರಾಬರ್ಟ್ ಮ್ಯಾನುಯೆಲ್ ಹೇಳಿದ್ದಾರೆ. ಆದರೆ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಅವರು ನೀಡಿಲ್ಲ.

ಕಂಪನದ ಪ್ರಮಾಣ ರಿಕ್ಷರ್ ಮಾಪಕದಲ್ಲಿ 7ರಷ್ಟಿತ್ತು. ಶಾಂತಿಪಾಲನಾ ಪಡೆಯ ಮುಖ್ಯಸ್ಥ ಹೆಡಿ ಅನ್ನಾಬಿ ಅವರೂ ಸಾವಿಗೀಡಾಗಿರಬಹುದು ಎಂದು ಎಂದು ಫ್ರಾನ್ಸ್ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಪ್ರಧಾನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 250 ಸಿಬ್ಬಂದಿ ಪೈಕಿ ಹೆಚ್ಚಿನವರು ಭಾರತೀಯರು ಎನ್ನಲಾಗಿದ್ದು, ಇವರ ಪರಿಸ್ಥಿತಿ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಶಾಂತಿ ಪಾಲನಾ ಕರ್ತವ್ಯಕ್ಕೆ ತೆರಳಿದ್ದ ಜೋರ್ಡಾನ್‌ನ ಮೂವರು ಮತ್ತು ಬ್ರೆಜಿಲ್‌ನ ನಾಲ್ವರು ಮತ್ತು ಚೀನಾದ ಎಂಟು ಯೋಧರು ಮೃತರಾಗಿರುವುದು ಮಾತ್ರ ಖಚಿತಪಟ್ಟಿದೆ.
ಹೈಟಿಯಲ್ಲಿರುವ ಭಾರತದ ಕಾನ್ಸುಲ್ ಜನರಲ್ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಕ್ಯೂಬಾದಲ್ಲಿರುವ ಭಾರತದ ಉಪರಾಯಭಾರಿ ಮೇರಿ ಆಂಡ್ರ್ಯೂ ಹವಾನಾದಿಂದ ದೂರವಾಣಿ ಮೂಲಕ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಭೂಕಂಪದ ಕೇಂದ್ರ ಬಿಂದುವಿಗೆ ಹತ್ತಿರದಲ್ಲಿದ್ದ ಕಾರಣ ರಾಜಧಾನಿ ಪೋರ್ಟ್ ಆ ಪ್ರಿನ್ಸ್‌ದ ಎಲ್ಲಾ ಭಾಗಗಳಲ್ಲೂ ಕಟ್ಟಡಗಳು ಧರೆಗೆ ಉರುಳಿವೆ. ಮೊಂಟಾನಾ ಎಂಬ ಹೋಟೆಲ್‌ನಲ್ಲಿ ಉಳಿದಿದ್ದ 200 ವಿದೇಶಿ ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ಫ್ರಾನ್ಸ್ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಭೀತಿ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ, ಸಚಿವಾಲಯಗಳು, ಶಾಲೆ, ಮನೆ, ವಾಣಿಜ್ಯ ಸಮುಚ್ಚಯಗಳು ಮತ್ತು ಮಾರುಕಟ್ಟೆಗಳೂ ನೆಲಸಮವಾಗಿವೆ. ಅವಶೇಷಗಳಡಿಯಲ್ಲಿ ಹಲವು ಶವಗಳು ಸಿಲುಕಿದ್ದು. ಪ್ರತಿ ಕ್ಷಣಕ್ಕೂ ಸಾವು- ನೋವು- ನಷ್ಟದ ಪ್ರಮಾಣ ಹೆಚ್ಚುತ್ತಲೇ ಇರುವ ವರದಿಗಳು ಬರುತ್ತಿವೆ.
ಕಳೆದ ಒಂದು ಶತಮಾನದಲ್ಲೇ ಇಂತಹ ಭೂಕಂಪ ಇಲ್ಲಿ ಸಂಭವಿಸಿರಲಿಲ್ಲ ಎಂದು ಹೇಳಲಾಗಿದೆ.
.ದಿ . ಇನ್ನೂ 1770ರ ನಂತರ ಇಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪ ಇದು ಎಂದು ಅಮೆರಿಕ ಜಿಯಾಲಾಜಿಕಲ್ ಸರ್ವೆ ತಿಳಿಸಿದೆ. ಹೈಟಿಯಲ್ಲಿರುವ ಅವೆುರಿಕದ ರಾಯಭಾರಿ ರೇಮಂಡ್ ಅಲ್‌ಸೈಡ್ ಜೋಸೆಫ್, ಇದೊಂದು ಭಾರಿ ಅವಘಡ ಎಂದಿದ್ದಾರೆ.
ಪರಿಹಾರ ಕಾರ್ಯ: ಭೂಕಂಪಕ್ಕೆ ತತ್ತರಿಸಿರುವ ಹೈಟಿಗೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ತಕ್ಷಣವೇ ನೆರವು ಪ್ರಕಟಿಸಿದೆ. ಫ್ರಾನ್ಸ್, ಬ್ರಿಟನ್, ಕೆನಡಾ, ಲ್ಯಾಟಿನ್ ಅಮೆರಿಕಾದ ರಾಷ್ಟ್ರಗಳು ಸೇರಿದಂತೆ ಇನ್ನೂ ಹಲವು ರಾಷ್ಟ್ರಗಳು ಮುಂದೆ ಬಂದು ಪರಿಹಾರ ಕಾರ್ಯದಲ್ಲಿ ನೆರವಾಗಿವೆ.
ಪೊಲೀಸ್, ವಿಶ್ವಸಂಸ್ಥೆ ಮತ್ತು ರೆಡ್ ಕ್ರಾಸ್ ವಾಹನಗಳು ಗಾಯವಾದವರನ್ನು ಆಸ್ಪತ್ರೆಗಳಿಗೆ ಸೇರಿಸುವಲ್ಲಿ ನಿರತವಾಗಿವೆ. ಆದರೆ ಭೂಕಂಪದ ನಂತರ ರಸ್ತೆಗಳು ಬಾಯಿಬಿಟ್ಟು ಮಾರ್ಗಗಳೇ ಮಾಯವಾಗಿರುವುದರಿಂದ ವಾಹನಗಳ ಸಂಚಾರ ಬಲು ಕಷ್ಟವಾಗಿದೆ.
ಪರಿಹಾರ ಕಾರ್ಯ ಕೈಗೊಳ್ಳುವ ಸಂಬಂಧ ವಿಶ್ವಸಂಸ್ಥೆ ಮುಖ್ಯಸ್ಥ ಬಾನ್ ಕಿ ಮೂನ್ ಹಿರಿಯ ಸಲಹೆಗಾರರ ಜತೆ ಸಭೆ ನಡೆಸಿದ್ದಾರೆ.
Prajavani
No comments:
Post a Comment