ಶ್ರೀಕೃಷ್ಣದೇವರಾಯನ ಪಟ್ಟಾಭಿಷೇಕದ ನೆನಪಿಗೆ ಕೋಟ್ಯಂತರ ರೂ. ಸುರಿಯುವ ಸರ್ಕಾರದ ಪ್ರತಿನಿಧಿಗಳು, ಸಾಹಿತ್ಯ-ಸಂಸ್ಕೃತಿ ಸಮ್ಮೇಳನವನ್ನು ಮಾತ್ರ ಸರಳವಾಗಿ ಆಚರಿಸುವುದು ಎಷ್ಟು ಸರಿ? ಇದು ಇಂದಿನಿಂದ ಆರಂಭಗೊಂಡ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಡಾ. ಗೀತಾ ನಾಗಭೂಷಣ ಅವರ ಪ್ರಶ್ನೆ.
ಗದಗದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ಸಂದರ್ಭದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮುಕ್ತವಾಗಿ ಮಾತನಾಡಿದ ಅವರು, ಹಂಪಿಯಲ್ಲಿ ನಡೆದ ಶ್ರೀ ಕೃಷ್ಣದೇವರಾಯರ 500ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವಕ್ಕೆ ಸರ್ಕಾರ 75 ಕೋಟಿ ರೂ. ವ್ಯಯಿಸಿದೆ. ಆದರೆ ನೆರೆ-ಬರ ನೆಪ ಹೇಳಿ ಸಾಹಿತ್ಯ ಸಮ್ಮೇಳನವನ್ನು ಸರಳವಾಗಿ ಆಚರಿಸಿ ಎಂದಿರುವುದು ಮಾತ್ರ ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರವೂ ತನ್ನ ಕಾರ್ಯಕ್ರಮಗಳಲ್ಲಿ ಸರಳತೆಯನ್ನು ಉಳಿಸಿಕೊಂಡರೆ ಹೆಚ್ಚು ಸೂಕ್ತ. ಅದರಲ್ಲಿ ಪ್ರಾಮಾಣಿಕತೆ ತೀರಾ ಅವಶ್ಯ ಎಂದು ಅವರು ಸಲಹೆ ನೀಡಿದ್ದಾರೆ.
ಸಾಹಿತ್ಯ ಸಮ್ಮೇಳನಕ್ಕೆ ಗೈರು ಹಾಜರಾಗುತ್ತಿರುವ ಸಾಹಿತಿಗಳ ಸಂಸ್ಕೃತಿಗೆ ತೀವ್ರ ಆತಂಕ ವ್ಯಕ್ತಪಡಿಸಿದ ಅವರು, ಇದೇ ಪರಂಪರೆ ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಇದನ್ನು ಸಾಹಿತ್ಯ ಸಮ್ಮೇಳನವೆಂದು ಏಕೆ ಕರೆಯಬೇಕು? ಆದ್ದರಿಂದ ಗದಗ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ತೇರು ಎಳೆಯಲು ಎಲ್ಲರೂ ಸಹಕರಿಸಬೇಕೆಂದು ಕೋರಿದರು.
ಇದೇ ವೇಳೆ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ನಿಲ್ಲುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಚುನಾವಣೆ, ರಾಜಕೀಯ ಯಾವುದೂ ಬೇಡ ಎಂದು ಸ್ಪಷ್ಟವಾಗಿ ನಿರಾಕರಿಸಿದರು.
ಕ್ರಪೆ - ವೆಬ್ ದುನಿಯಾ
Subscribe to:
Post Comments (Atom)
No comments:
Post a Comment