ದರಗಳ ಏರಿಕೆಯಿಂದಾಗಿ ಒಂದು ವೇಳೆ ಇದೀಗ ಲೋಕಸಭೆ ಚುನಾವಣೆಗಳು ನಡೆದಲ್ಲಿ, ಕಾಂಗ್ರೆಸ್ ಪಕ್ಷ ಧೂಳಿಪಟವಾಗಲಿದೆ ಎನ್ನುವ ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್, ಅಡ್ವಾಣಿ ಪ್ರಧಾನಿಯಾಗುವ ಆಸೆ ಹೊತ್ತುಕೊಂಡು ಕನಸಿನ ಲೋಕದಲ್ಲಿದ್ದಾರೆ ಎಂದು ಕಟುವಾಗಿ ಟೀಕಿಸಿದೆ.
ಅಡ್ವಾಣಿ ಮತ್ತೆ ಕನಸಿನ ಲೋಕದಲ್ಲಿದ್ದಾರೆ. ಪ್ರಧಾನಿಯಾಗುವ ಬಯಕೆಯಲ್ಲಿ ಪ್ರತಿ ವಾರವು ಲೋಕಸಭೆಗೆ ಚುನಾವಣೆ ನಡೆಯಲಿ ಎನ್ನುವುದು ಅವರ ಇಚ್ಚೆಯಾಗಿದೆ. ಪ್ರಧಾನಿಯಾಗುವ ಬತ್ತಿಹೋಗದ ಆಸೆಯನ್ನಿಟ್ಟುಕೊಂಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಅಭೀಷೇಕ್ ಸಿಂಘ್ವಿ ಹೇಳಿದ್ದಾರೆ.
ಇಂದೋರ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅಡ್ವಾಣಿ, ಸಾಮಾನ್ಯ ಜನತೆಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತತ್ವದ ಯುಪಿಎ ಸರಕಾರ, ದರ ಏರಿಕೆ ಮಾಡಿ ತಮ್ಮನ್ನು ವಂಚಿಸಿದೆ ಎನ್ನುವ ಅರಿವು ಜನಸಾಮನ್ಯರಿಗೆ ಬಂದಿದ್ದು, ಒಂದು ವೇಳೆ ಇದೀಗ ಲೋಕಸಭೆಗೆ ಚುನಾವಣೆ ನಡೆದಲ್ಲಿ ಕಾಂಗ್ರೆಸ್ ನೆಲಕಚ್ಚುವುದು ಖಚಿತ ಎಂದು ಕಿಡಿಕಾರಿದ್ದರು.
ಕಾಂಗ್ರೆಸ್ ವಕ್ತಾರ ಸಿಂಘ್ವಿ ಮಾತನಾಡಿ, ಒಂದು ವೇಳೆ ಮತ್ತೆ ಚುನಾವಣೆಗಳು ನಡೆದಲ್ಲಿ ಕೂಡಾ, ಪ್ರಧಾನಿಯಾಗಲು ಸಾಧ್ಯವಿಲ್ಲ ಎನ್ನುವ ವಾಸ್ತವ ಸಂಗತಿಯನ್ನು ಅಡ್ವಾಣಿ ತಿಳಿದುಕೊಂಡಲ್ಲಿ ಸೂಕ್ತ ಎಂದು ನುಡಿದರು.
ಪಾಕ್ ಆಕ್ರಮಿತ ಕಾಶ್ಮಿರದಲ್ಲಿರುವ ಉಗ್ರರಿಗೆ ಶರಣಾಗತಿಗೆ ಸಂಬಂಧಿಸಿದಂತೆ, ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರನ್ನು ಟೀಕಿಸಿದ ಅಡ್ವಾಣಿ ಅವರನ್ನು ತರಾಟೆಗೆ ತೆಗೆದುಕೊಂಡ ಸಿಂಘ್ವಿ, ಹಿಂದೆ ಗೃಹಸಚಿವರಾಗಿ ಕಾರ್ಯನಿರ್ವಹಿಸಿದ ಅಡ್ವಾಣಿ ಅವರಿಂದ ಇಂತಹ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಅಡ್ವಾಣಿ ಗೃಹಸಚಿವರಾಗಿದ್ದ ಅವಧಿಯಲ್ಲಿ, ಭಯೋತ್ಪಾದಕ ತರಬೇತಿಗಾಗಿ ಪಾಕ್ ಆಕ್ರಮಿತ ಕಾಶ್ಮಿರಕ್ಕೆ ತೆರಳಿದ ಯುವಕರಿಗೆ ಶರಣಾಗುವ ನೀತಿಯನ್ನು ರೂಪಿಸಬೇಕು ಎಂದು ಹೇಳಿಕೆ ನೀಡಿದಲ್ಲದೇ, ಕಂದಹಾರ್ ಪ್ರಕರಣದಲ್ಲಿ ಉಗ್ರಗಾಮಿಗಳನ್ನು ಹಸ್ತಾಂತರಿಸಿರುವುದು ಸೇರಿದಂತೆ ಹಲವಾರು ಘಟನೆಗಳ ಬಗ್ಗೆ ಸಾಕ್ಷಿಯಾಗಿರುವ ಅಡ್ವಾಣಿಯಿಂದ,ನೂರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಪಾಠ ಕಲಿಯಬೇಕಾಗಿಲ್ಲ ಎಂದು ಅಭೀಷೇಕ್ ಸಿಂಘ್ವಿ ವ್ಯಂಗವಾಡಿದ್ದಾರೆ.
ಕ್ರಪೆ - ವೆಬ್ ದುನಿಯಾ
Subscribe to:
Post Comments (Atom)
No comments:
Post a Comment