VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 21, 2010

ನುಡಿ ಹಬ್ಬಕ್ಕೆ ತೆರೆ-ಗಡಿ,ಭಾಷೆ ವಿಚಾರದಲ್ಲಿ ರಾಜಿ ಇಲ್ಲ:ಸಿಎಂ


ನಾಡು, ನುಡಿ, ಭಾಷೆ ಹಾಗೂ ಗಡಿ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಈ ವಿಚಾರಗಳಿಗೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯ ಸಮ್ಮೇಳನ ಕೈಗೊಳ್ಳುವ ನಿರ್ಣಯಗಳ ಜಾರಿಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿವುದರೊಂದಿಗೆ ಭಾನುವಾರ ಕನ್ನಡ ನುಡಿ ಜಾತ್ರೆಗೆ ತೆರೆ ಬಿದ್ದಿದೆ.

ಇಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದ್ದರೂ, ಅದರ ಅನುಷ್ಠಾನ ನಿರೀಕ್ಷಿತ ಮಟ್ಟದಲ್ಲಾಗುತ್ತಿಲ್ಲ. ಈ ಅನ್ಯಾಯ ಸರಿಪಡಿಸುವಂತೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರುತ್ತಲೇ ಇದೆ ಎಂದರು.

ಕನ್ನಡ ಸಾರಸ್ವತ ಲೋಕದ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು,ಸರ್ಕಾರದ ಹೋರಾಟಕ್ಕೆ ಕೈ ಜೋಡಿಸಿದರೆ, ಹೋರಾಟಕ್ಕೆ ಮತ್ತಷ್ಟು ಬಲ ಬರಲಿದೆಯೆಂದು ಅವರು ಕರೆ ನೀಡಿದರು.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ.ಗೀತಾ ನಾಗಭೂಷಣ ಅವರು ಸಾಮಾಜಿಕ ಪಿಡುಗುಗಳ ಬಗ್ಗೆ ಅತೀವ ಕಳಕಳಿ ವ್ಯಕ್ತಪಡಿಸಿರುವುದನ್ನು ಪ್ರಸ್ತಾಪಿಸಿದ ಅವರು ಇಂತಹ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು. ಗೀತಾ ನಾಗಭೂಷಣ ಅವರು ದಿಟ್ಟತನದಿಂದ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ನೋವು ತಮಗೆ ಅರ್ಥವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.


ಸಮ್ಮೇಳನದಲ್ಲಿ ತೆಗೆದುಕೊಂಡಿದ್ದು ಒಂದು ಸಾಲಿನ ನಿರ್ಣಯ!


ಗದಗ, ಫೆ. 21 : ಕಳೆದ ಮೂರು ದಿನಗಳಿಂದ ನಡೆಯುತ್ತಿರುವ 76ನೇ ಅಖಿಲ ಭಾರತ ಸಾಹಿತ್ಯ ಜಾತ್ರೆಗೆ ಅದ್ಧೂರಿ ತೆರೆ ಬಿದ್ದಿತು. ಆದರೆ, ಕನ್ನಡ ಸಾಹಿತ್ಯ ಪರಿಷತ್ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು, ಈ ಸಲದ ಸಾಹಿತ್ಯ ಸಮ್ಮೇಳನದಲ್ಲಿ ಒಂದು ಸಾಲಿನ ನಿರ್ಣಯವನ್ನು ಕೈಗೊಳ್ಳಲಾಯಿತು. ಈವರೆಗೂ ಆಗಿರುವ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡಿರುವ ನಿರ್ಣಯಗಳನ್ನು ಈಡೇರಿಸುವಂತೆ ಸರಕಾರದ ಮೇಲೆ ಒತ್ತಡ ಹೇರಿದ್ದು ಈ ಬಾರಿಯ ವಿಶೇಷವಾಗಿತ್ತು.

ಆದರೆ, ಈ ಸಂದರ್ಭದಲ್ಲಿ ಮುಂಡರಗಿ ತಾಲ್ಲೂಕಿನ ಮಾಜಿ ಶಾಸಕ ಎಸ್ ಎಸ್ ಪಾಟೀಲ್, ಗದಗಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಸಾರ್ಥಕತೆ ಕಾಣಬೇಕಾದರೆ, ಈ ಭಾಗದಲ್ಲಿ ಆಗಿರುವ ನೆರೆ ಸಂತ್ರಸ್ಥರಿಗೆ ಸೂಕ್ತ ಹಾಗೂ ಶಾಶ್ವತ ಪರಿಹಾರ ನೀಡಬೇಕು ಎಂಬ ತೆಗೆದುಕೊಳ್ಳುವುದು ಅತ್ಯಂತ ಸೂಕ್ತ ಎಂದು ಅವರು ವಾದಿಸಿದರು. ಒಂದು ಸಾಲಿನ ನಿರ್ಣಯದ ಜೊತೆಗೆ ಪಾಟೀಲ್ ಅವರ ಮನವಿಯಂತೆ ಎರಡನೇ ನಿರ್ಣಯವಾಗಿ ನೆರೆ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂಬ ನಿರ್ಣಯವನ್ನು ಕೈಗೊಳ್ಳಲಾಯಿತು.

ಗದಗಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಗದಗಿಗೆ ಆಗಮಿಸಿದ ಗೀತಾ ನಾಗಭೂಷಣ ಅವರು ತವರಿಗೆ ಬಂದಿರುವ ಸಂಭ್ರಮವನ್ನು ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಸಮ್ಮೇಳನದ ಸ್ವಾಗತ ಸಮಿತಿ ಇದೇ ಮೊದಲ ಬಾರಿಗೆ ಬೃಹತ್ ಮೊತ್ತ ನೀಡುವ ಮೂಲಕ ಹೊಸ ನಾಂದಿಯನ್ನು ಹಾಡಿತು. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಗದಗ ಶಾಸಕ ಶ್ರೀಶೈಲಪ್ಪ ಬಿದರೂರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಗೀತಾ ನಾಗಭೂಷಣ ಅವರಿಗೆ 11,11,1111 ರುಪಾಯಿಗಳನ್ನು ನೀಡಿ ಗೌರವಿಸಿದರು. ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಿಗೆ ಭಾರಿ ಮೊತ್ತ ನೀಡಿದ ಸಾಹಿತ್ಯ ಸಮ್ಮೇಳನ ಎಂಬ ಹೆಗ್ಗಳಿಕೆಗೆ ಗದಗ ಸಾಹಿತ್ಯ ಸಮ್ಮೇಳನ ಪಾತ್ರವಾಯಿತು.

ಪ್ರತಿಧ್ವನಿಸಿದ ನೈಸ್ ವಿವಾದ

ನೈಸ್ ಯೋಜನೆಗೆ ಹೆಚ್ಚುವರಿ ಭೂಮಿ ನೀಡಲ್ಲ. ಕೆಲವರು ಅನಗತ್ಯವಾಗಿ ಅಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಸರಕಾರ ರೈತರ ಪರ ಕೆಲಸ ಮಾಡುತ್ತಿದ್ದು, ನೈಸ್ ಯೋಜನೆಯಲ್ಲಿ ರೈತರ ಭೂಮಿ ವಶಪಡಿಸಿಕೊಂಡಿದ್ದರೆ, ಅದನ್ನು ವಾಪಸ್ ನೀಡುವ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಗದಗಿಗೆ ಆಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕ್ರಪೆ - ವೆಬ್ ದುನಿಯಾ & ದಟ್ಸ್ ಕನ್ನಡ

No comments: