VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 22, 2010

ಕನ್ನಡ ಉಳಿದಿರುವುದು ಐಟಿ-ಬಿಟಿಯಿಂದಲ್ಲ: ಗೀತಾ ನಾಗಭೂಷಣ

ಸರ್ಕಾರ ಭೂಮಾಫಿಯಾಕ್ಕೆ ಬೆಂಬಲ ನೀಡುತ್ತಿದ್ದು, ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರೇ ನೆಲೆ ಕಳೆದುಕೊಳ್ಳುವಂತಹ ಸ್ಥಿತಿ ಬಂದೊದಗಿದರೆ ಇದರಿಂದ ಕನ್ನಡ ಭಾಷೆಗೆ ಅಪಾಯ ನಿಶ್ಚಿತ ಎಂದು 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷೆ ಡಾ.ಗೀತಾನಾಗಭೂಷಣ ಅವರು ಮುನ್ನೆಚ್ಚರಿಕೆ ನೀಡಿದರು.

ಕುಮಾರವ್ಯಾಸನ ನೆಲೆವೀಡಾದ ಗದಗದಲ್ಲಿ ಮೂರು ದಿನಗಳ ಕಾಲ ನಡೆದ ಅಕ್ಷರ ಜಾತ್ರೆಯ ಕೊನೆಯ ದಿನವಾದ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಕನ್ನಡ ಉಳಿದಿರುವುದು ಗ್ರಾಮೀಣ ಪ್ರದೇಶದಲ್ಲಿಯೇ ಹೊರತು, ಐಟಿ-ಬಿಟಿ ಉದ್ಯಮದಿಂದಲ್ಲ ಎಂದರು.

ಸರ್ಕಾರಕ್ಕೆ ರೈತರ, ಗ್ರಾಮೀಣ ಜನರ ಬಗ್ಗೆ ನಿಜವಾದ ಕಳಕಳಿ ಇದ್ದರೆ, ಗ್ರಾಮೀಣ ಹಾಗೂ ಶೋಷಿತರ ಬದುಕಿಗೆ ಧಕ್ಕೆಯಾಗದಂತಹ ಯೋಜನೆ ರೂಪಿಸಿ ಎಂದು ಅವರು ಈ ಸಂದರ್ಭದಲ್ಲಿ ಸಲಹೆ ನೀಡಿದರು. ಪ್ರವಾಹದಿಂದಾಗಿ ಉತ್ತರ ಕರ್ನಾಟಕ ಭಾಗದ ಜನರ ಬದುಕು ದಿಕ್ಕೆಟ್ಟು ಹೋಗಿದೆ. ಬದುಕುವ ನಿಟ್ಟಿನಲ್ಲಿ ಇಲ್ಲಿನ ಜನ ತಮ್ಮ ಹೊಲ, ಜಾಗಗಳನ್ನು ಮಾರಿ ವಲಸೆ ಹೋಗುತ್ತಿದ್ದಾರೆ.

ಮತ್ತೊಂದೆಡೆ ಭೂಮಾಫಿಯಾಗಳು ಇವರ ಭೂಮಿಯನ್ನು ಕಡಿಮೆ ಬೆಲೆಗೆ ಖರೀದಿಸಿ ರಿಯಲ್ ಎಸ್ಟೇಟ್ ದಂಧೆಗೆ ಬಳಸಿಕೊಳ್ಳುತ್ತಿದ್ದಾರೆ. ಹೀಗಾದರೆ ಗ್ರಾಮೀಣ ಪ್ರದೇಶದ ಜನ ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಬೆಂಗಳೂರಿನ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ಅಧಿಕಾರ ಚಲಾಯಿಸುವ ಜನಪ್ರತಿನಿಧಿಗಳಿಗೆ, ಸುಡು, ಸುಡು ಬಿಸಿಲಿನ ನಡುವೆ ತಗಡಿನ ಶೆಡ್ಡುಗಳಲ್ಲಿ ವಾಸ ಮಾಡುವ ಜನರ ಕಷ್ಟ ನಿಮಗೆ ತಿಳಿಯಲಾರದು, ನಿಮಗೂ ಆ ಕಷ್ಟ ಗೊತ್ತಾಗಬೇಕಾದರೆ ಒಂದು ದಿನ ತಗಡಿನ ಶೆಡ್‌ನಲ್ಲಿ ವಾಸ ಮಾಡಿ ಎಂದು ಗೀತಾನಾಗಭೂಷಣ ಮುಖ್ಯಮಂತ್ರಿಗಳಿಗೆ ಸವಾಲು ಹಾಕಿದರು.ಮೂರು ದಿನಗಳ ಕಾಲ ಅಚ್ಚುಕಟ್ಟಾಗಿ ಕನ್ನಡದ ಸಾಹಿತ್ಯ ಜಾತ್ರೆ ನಡೆಯಲು ಸಹಕರಿಸಿದ ಎಲ್ಲರಿಗೂ ಈ ಸಂದರ್ಭದಲ್ಲಿ ಅಧ್ಯಕ್ಷರು ಕೃತಜ್ಞತೆ ಅರ್ಪಿಸಿದರು.

ಚಿಂತಕ ಡಾ.ಸಿ.ಪಿ.ಕೃಷ್ಣಕುಮಾರ್ ಸಮಾರೋಪ ಭಾಷಣ ಮಾಡಿದರು. ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, ಕಸಾಪ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್, ಮಾಜಿ ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಹಾಜರ್: ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭಕ್ಕೆ ಗೈರು ಹಾಜರಾಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಕನ್ನಡ-ನಾಡು ನುಡಿ ರಕ್ಷಣೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಭರವಸೆ ನೀಡಿದರು. ಅಲ್ಲದೇ ಈ ಹಿಂದಿನ ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳ ಅನುಷ್ಠಾನಕ್ಕಾಗಿ ಶೀಘ್ರವೇ ಕ್ರಮಗೊಳ್ಳುವುದಾಗಿ ಹೇಳಿದರು.

ವಿಶೇಷ ನಿರ್ಧಾರ: ಪ್ರತಿವರ್ಷ ನಡೆಯುವ ಸಾಹಿತ್ಯ ಸಮ್ಮೇಳನದ ಕೊನೆಯಲ್ಲಿ ನಿರ್ಣಯಗಳನ್ನು ಕೈಗೊಳ್ಳುವುದು ಸರ್ವೆ ಸಾಮಾನ್ಯ, ಆದರೆ ಈ ಬಾರಿ ಮಾತ್ರ ಯಾವುದೇ ನಿರ್ಣಯ ಕೈಗೊಳ್ಳದಿರುವುದು ವಿಶೇಷತೆಯಾಗಿದೆ.

ಇದುವರೆಗೆ ನಡೆದ ಸಮ್ಮೇಳನಗಳಲ್ಲಿ ಕೈಗೊಳ್ಳಲಾದ ನಿರ್ಣಯಗಳನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸುವ ಒಂದೇ ಒಂದು ನಿರ್ಣಯವನ್ನು ಭಾನುವಾರ ನಡೆದ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಕೈಗೊಳ್ಳಲಾಯಿತು.

ಕ್ರಪೆ - ವೆಬ್ ದುನಿಯಾ

No comments: