
ಮಾಜಿ ಸಚಿವ ಚೆನ್ನಿಗಪ್ಪನವರ ಪುತ್ರರಾದ ಗೌರಿಶಂಕರ್ ಚಿತ್ರ ನಿರ್ಮಾಣಕ್ಕೆ ಇಳಿದು, ಈ ಕ್ಷೇತ್ರದಲ್ಲಿ ತಮ್ಮ ಹಣೆಬರಹ ಹೇಗಿದೆ ಎಂದು ಪರೀಕ್ಷಿಸಿಕೊಳ್ಳಲು ಸಿದ್ಧರಾಗಿದ್ದಾರೆ.
ಬಿಳಿಯುಡುಗೆ, ಬಿಳಿ ಚಪ್ಪಲಿಗಳನ್ನು ತೊಟ್ಟವರು ಅಲ್ಲಿ ಎದ್ದುಕಾಣುತ್ತಿದ್ದರು. ಅದಕ್ಕೆ ಕಾರಣವಿಷ್ಟೆ- ‘ಹಣೆಬರಹ’ ಚಿತ್ರದ ನಿರ್ಮಾಪಕ ಡಿ.ಸಿ.ಗೌರಿಶಂಕರ್.
ಕಂಠೀರವ ಸ್ಟುಡಿಯೋ ಅಂಗಳದ ತುಂಬಾ ಜನವಿತ್ತು. ಗೌರಿಶಂಕರ್ ಕೆನ್ನೆ ಮೇಲಿನ ಮಚ್ಚೆ ನಗುತ್ತಿತ್ತು. ಮಾಜಿ ಸಚಿವ ಚೆನ್ನಿಗಪ್ಪನವರ ಪುತ್ರರಾದ ಗೌರಿಶಂಕರ್ ಚಿತ್ರ ನಿರ್ಮಾಣಕ್ಕೆ ಇಳಿದು, ಈ ಕ್ಷೇತ್ರದಲ್ಲಿ ತಮ್ಮ ಹಣೆಬರಹ ಹೇಗಿದೆ ಎಂದು ಪರೀಕ್ಷಿಸಿಕೊಳ್ಳಲು ಸಿದ್ಧರಾಗಿದ್ದಾರೆ.
ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆಗಿರುವ ಗೌರಿಶಂಕರ್‌ಗೆ ಸಿನಿಮಾ ಆಸಕ್ತಿ ಮೊಳೆತದ್ದೇ
ವಿಚಿತ್ರ. ಅವರ ಮನೆಯಲ್ಲಿ ‘ಪಕ್ಕ ಚುಕ್ಕ’ ಚಿತ್ರೀಕರಣ ನಡೆಯಿತಂತೆ. ಆಗ ಹುಟ್ಟಿದ ಅವರ ಸಿನಿಮಾಸಕ್ತಿ ಈಗ ನಿರ್ಮಾಣಕ್ಕೆ ಇಳಿಯಲು ಪ್ರೇರಣೆ.
‘ಹಣೆಬರಹ’ದ ನಿರ್ದೇಶಕ ದಿನೇಶ್ ಪುಲ. ಫಿಲ್ಮ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಪದವಿ ಪಡೆದಿರುವ ಪುಲ ಹೇಳಿದ ಕಥೆ ಗೌರಿಶಂಕರ್ ಅವರಿಗೆ ಹಿಡಿಸಿದೆ. ಕಂಠೀರವ ಸ್ಟುಡಿಯೋ ತನ್ನ ಆಡುಂಬೊಲವಿದ್ದಂತೆ. ಸಿನಿಮಾದ ಎಲ್ಲವನ್ನೂ ಕಲಿತಿದ್ದು ಅಲ್ಲೇ ಎಂದು ಪಟಪಟನೆ ಮಾತಾಡುವ ಪುಲ ತಮ್ಮ ಹಣೆಬರಹವನ್ನೂ ಪರೀಕ್ಷಿಸಿಕೊಳ್ಳಲು ಹೊರಟಿದ್ದಾರೆ. ಇದನ್ನು ಅವರು ತಮ್ಮದೇ ಶೈಲಿಯಲ್ಲಿ ಹೇಳಿಕೊಂಡು ನಕ್ಕರು. 45 ದಿನಗಳಲ್ಲಿ ಚಿತ್ರೀಕರಣ ಮುಗಿಸುವುದು ಅವರ ಗುರಿ. ಆರು ಜಿಲ್ಲೆಗಳ ವಿವಿಧ ಭಾಗಗಳನ್ನು ಸೆರೆಹಿಡಿಯಲು ಅವರು ತೀರ್ಮಾನಿಸಿದ್ದಾರೆ.
ಸಮರ್ಥ್ ಗೌಡ ಚಿತ್ರದ ನಾಯಕ. ಸಾಕಷ್ಟು ನಿರ್ಮಾಪಕರನ್ನು ಎಡತಾಕಿದ ನಂತರ ಅವರಿಗೆ ಈ ಚಿತ್ರದ ಅವಕಾಶ ಲಭಿಸಿದೆ. ನಟನೆಯನ್ನು ಸವಾಲಾಗಿ ಸ್ವೀಕರಿಸಿರುವ ಅವರು ಪಾತ್ರಕ್ಕೆ ನ್ಯಾಯ ಒದಗಿಸಲು ಕಷ್ಟಪಡುವುದಾಗಿ ಹೇಳಿದರು.
ಚಿತ್ರದ ನಾಯಕಿ ನಿಖಿತಾ. ‘ಎಕೆ 56’ ಚಿತ್ರದಿಂದ ಹೊರನಡೆದ ನಂತರ ಅವರು ಮತ್ತೆ ಕ್ಯಾಮರಾಗೆ ಮುಖ ಮಾಡುತ್ತಿರುವ ಚಿತ್ರವಿದು. ಇದುವರೆಗೆ ಬಬ್ಲಿ ಪಾತ್ರಗಳಲ್ಲೇ ಹೆಚ್ಚು ನಟಿಸಿರುವ ನಿಖಿತಾಗೆ ಈ ಚಿತ್ರದಲ್ಲಿ ಹೊಸತಿನ ದರ್ಶನವಾಗಿದೆ. ಕಥೆ ಕೇಳಿದ್ದೇ ತಮ್ಮ ಪಾತ್ರದ ವ್ಯಾಪ್ತಿ ಚೆನ್ನಾಗಿದೆ ಎನ್ನಿಸಿದೆ. ‘ಕಥೆಯಲ್ಲಿ ಏನೋ ಹೊಸತನವಿದೆ. ನನ್ನ ಪಾತ್ರ ಇದುವರೆಗೆ ನಾನು ನಟಿಸಿರುವ ಚಿತ್ರಗಳಿಗಿಂತ ಸಾಕಷ್ಟು ಭಿನ್ನವಾಗಿದೆ. ಅದಕ್ಕೇ ನಟಿಸಲು ಒಪ್ಪಿಕೊಂಡೆ’ ಎಂದರು ನಿಖಿತಾ.
ಈ ಚಿತ್ರದ ಮೂಲಕ ಯುವಕ ಕನಕ ದರ್ಶನ್ ಸ್ವತಂತ್ರ ಛಾಯಾಗ್ರಾಹಕರಾಗುತ್ತಿದ್ದಾರೆ. ‘ಮಹಾರಾಜ’ ಚಿತ್ರದಲ್ಲಿ ಅವರು ಸಹಾಯಕರಾಗಿ ಕೆಲಸ ಮಾಡಿದ್ದರು. ತಾವೇ ಸ್ವತಂತ್ರ ಸಿನಿಮಟೊಗ್ರಫರ್ ಆದರೆ ನಿಖಿತಾ ಜೊತೆ ಕೆಲಸ ಮಾಡುವ ಬಯಕೆ ಇದೆ ಎಂದು ಅವರು ಆಗಲೇ ಹೇಳಿದ್ದರಂತೆ. ಆ ಮಾತು ಈಗ ಸಾಕಾರಗೊಂಡಿದೆ ಎಂದು ದರ್ಶನ್ ಹಸನ್ಮುಖಿಯಾದರು.
ಜಿ.ಆರ್.ಶಂಕರ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ತಾವರೆಕೆರೆ ಕುಮಾರ್ ಸಂಭಾಷಣೆ ಬರೆದಿದ್ದಾರೆ. ಎಲ್ಲರ ಪರವಾಗಿ ಮಾತಾಡುವ ಉತ್ಸಾಹ ನಿರ್ದೇಶಕರೊಬ್ಬರಿಗೇ ಇದ್ದುದು ಅಚ್ಚರಿಯ ಸಂಗತಿ.
source: prajavani
No comments:
Post a Comment