
ಹೋಲಿಕೆ ಇಷ್ಟಪಡುವುದಿಲ್ಲ’
ಡಾನ್ ಬ್ರಾಡ್ಮನ್ ಅವರೊಂದಿಗೆ ಹೋಲಿಕೆ ಮಾಡುವುದನ್ನು ತಾವು ಇಷ್ಟಪಡುವುದಿಲ್ಲ, ಎಲ್ಲಾ ಕ್ರಿಕೆಟಿಗರ ಮೇಲೆ ತಮಗೆ ಸಮಾನ ಗೌರವ ಇದೆ ಎಂದು ಸಚಿನ್ ತೆಂಡೂಲ್ಕರ್ ಮಂಗಳವಾರ ಅಭಿಪ್ರಾಯಪಟ್ಟರು.
ಮುಂಬೈ (ಪಿಟಿಐ): ನಾಸೀರ್ ಹುಸ್ಸೇನ್ ಸೇರಿದಂತೆ ಅನೇಕ ಹಿರಿಯ ಕ್ರಿಕೆಟಿಗರು ಸಚಿನ್, ಡಾನ್ ಬ್ರಾಡ್ಮನ್ ಅವರಿಗಿಂತಾ ಉತ್ತಮ ಕ್ರಿಕೆಟಿಗ ಎಂದು ಬಣ್ಣಿಸಿರುವ ಹಿನ್ನೆಲೆಯಲ್ಲಿ ಮುಂಬೈಕರ್ ಈ ರೀತಿಯ ಪ್ರತಿಕ್ರಿಯಿಸಿದರು.
ಗ್ವಾಲಿಯರ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಐತಿಹಾಸಿಕ ಇನಿಂಗ್ಸ್ ಆಡಿದ ಮಾಸ್ಟರ್ ಬ್ಲಾಸ್ಟರ್, 39 ವರ್ಷಗಳ ಏಕದಿನ ಪಂದ್ಯದ ಇತಿಹಾಸದಲ್ಲಿ 200 ರನ್‌ಗಳಿಸಿದ ಏಕೈಕ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಸಚಿನ್ ಅವರ ಸಾಧನೆಯನ್ನು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸೀರ್ ಹುಸ್ಸೇನ್ ಅವರು ‘ಸಚಿನ್ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಆಟಗಾರ, ಡಾನ್ ಬ್ರಾಡ್ಮನ್‌ಗಿಂತಾ ಹೆಚ್ಚು’ ಎಂದು ಬಣ್ಣಿಸಿದ್ದರು.
ಹೋಲಿಕೆಯಲ್ಲಿ ತಮಗೆ ನಂಬಿಕೆ ಇಲ್ಲ, ಆಡುತ್ತಿರುವ ಹಾಗೂ ಹಿಂದೆ ಆಡಿರುವ ಎಲ್ಲರನ್ನು ತಾವು ಗೌರವಿಸುವುದಾಗಿ ಹೇಳಿದ ಸಚಿನ್, ದೇಶಕ್ಕಾಗಿ ಆಡುವುದಕ್ಕೆ ಸಂತೋಷ ಪಡುತ್ತೇನೆ, ಅದರಲ್ಲಿಯೂ ತಾವು ಉತ್ತಮವಾಗಿ ಆಡಿ ತಂಡ ಗೆದ್ದಾಗ ಉಂಟಾಗುವ ಆನಂದವನ್ನು ವರ್ಣಿಸುವುದಕ್ಕೆ ಪದಗಳೇ ಇಲ್ಲ ಎಂದರು.
200 ರನ್‌ಗಳ ಇನಿಂಗ್ಸ್ ಕುರಿತು ಪ್ರತಿಕ್ರಿಯಿಸಿದ ಮುಂಬೈಕರ್, ಇನಿಂಗ್ಸ್ ಆರಂಭಿಸಿದಾಗ ಖಂಡಿತವಾಗಿಯೂ ದಾಖಲೆ ನಿರ್ಮಿಸುತ್ತೇನೆ ಎಂದು ತಿಳಿದಿರಲಿಲ್ಲ. ಇದು ನನ್ನ ವೈಯಕ್ತಿಕ ದಾಖಲೆಯಲ್ಲ, ಭಾರತದ ದಾಖಲೆ ಎಂದು ಹೇಳಿದರು.
ಸಚಿನ್ ಅವರ ಸಾಧನೆಯನ್ನು ಕೊಂಡಾಡಿದ ಮಾಜಿ ನಾಯಕರಾದ ಅಜಿತ್ ವಾಡೇಕರ್, ಕಪಿಲ್ ದೇವ್ ಹಾಗೂ ದಿಲೀಪ್ ವೆಂಗಸರ್ಕಾರ್ ಅವರು ಮಾಸ್ಟರ್ ಬ್ಲಾಸ್ಟರ್‌ಗೆ ಭಾರತ ರತ್ನ ಗೌರವವನ್ನು ಕೊಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದರು.
‘ಭಾರತ ರತ್ನ ಪದವಿ ಪಡೆಯುವುದೇ ದೊಡ್ಡ ಗೌರವ, ಈ ಪಟ್ಟಿಯಲ್ಲಿ ಸೇರಿಕೊಳ್ಳುವುದಕ್ಕೆ ಯಾರಿಗೆ ಇಷ್ಟ ಇಲ್ಲ ಹೇಳಿ? ಎಂದು ಪ್ರಶ್ನಿಸಿದ ಅವರು, ಆದರೆ ನನ್ನ ಮೊದಲ ಆಧ್ಯತೆ ಕ್ರಿಕೆಟ್’ ಎಂದು ಹೇಳಿದರು.
No comments:
Post a Comment