ಬೆಂಗಳೂರು, ಮಾ.೧೨: ನಿನ್ನೆಯಷ್ಟೆ ಸಚಿವ ರೇಣುಕಾಚಾರ್ಯರ ಪಾಳೇಯದ ಬಂಡಾಯದ ಎಚ್ಚರಿಕೆಯಿಂದ ಚೇತರಿಸಿಕೊಳ್ಳುವ ಮೊದಲೇ, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಪಾಳೇಯ ಮುಖ್ಯಮಂತ್ರಿ ವಿರುದ್ಧ ಸೆಟೆದು ನಿಂತಿದೆ.
ಪಕ್ಷದ ಪದಾಧಿಕಾರಿಯೇ ಬಂಡೇದ್ದಿರುವುದರಿಂದ ಮುಖ್ಯಮಂತ್ರಿ ತಬ್ಬಿಬ್ಬಾಗಿದ್ದಾರೆ. ಸಿ.ಟಿ.ರವಿ ನೇರವಾಗಿ ಬಂಡಾಯ ಸಾರದೆ, ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳನ್ನು ಮುಂದೆ ಬಿಟ್ಟಿದ್ದಾರೆ. ಪದಾಧಿಕಾರಿಗಳು ಮುಖ್ಯಮಂತ್ರಿಗೆ ಬೇಡಿಕೆಯ ಪತ್ರ ನೀಡಿದ್ದು, ಅದರಲ್ಲಿ ಮುಖ್ಯಮಂತ್ರಿಯನ್ನು ನೇರವಾಗಿ ತರಾಟೆಗೆ ತೆಗೆದುಕೊಳ್ಳಲಾಗಿದೆ. ಇಡೀ ನಾಡೇ ಪ್ರತಿಭಟಿಸಿದರೂ ಬ್ಲಾಕ್‌ಮೇಲ್ ತಂತ್ರಗಾರಿಕೆಯ ಅನಿಷ್ಟ ಶಾಸಕನನ್ನೂ ದಿನಬೆಳಗಾಗುವುದರೊಳಗೆ ಮಂತ್ರಿ ಮಾಡಲು ಹಿಂಜರಿಯದ ನೀವು ಪಕ್ಷದ ಅಭಿವೃದ್ಧಿಗಾಗಿ ಹಗಲಿರುಳು ರಾಜ್ಯಾದ್ಯಂತ ಸುತ್ತಿ ಪರಿಶ್ರಮಿಸುತ್ತಿರುವ ಜನಪರ ಹೋರಾಟಗಾರ ಶಾಸಕ ಸಿ.ಟಿ.ರವಿಯವರ ಕ್ಷೇತ್ರದ ಅಭಿವೃದ್ಧಿದೂ ಅನುದಾನ ನೀಡಲು ನಿರ್ಲಕ್ಷ ತೋರಿಸುತ್ತಿದ್ದೀರಿ. ಇದರಿಂದ ಮುಂದೆ ಬಿಜೆಪಿಯಲ್ಲಾಗುವ ಪ್ರಮಾದಗಳಿಗೆ ನೀವೆ ಹೊಣೆಗಾರರು ಎಂದು ಎಚ್ಚರಿಸಲಾಗಿದೆ.
ದತ್ತಪೀಠದ ಮೂಲಸೌಕರ್ಯ ಕಲ್ಪಿಸುವ ಕ್ಷೇತ್ರವನ್ನು ಸರ್ವಾಂಗ ಸುಂದರಗೊಳಿಸುವ ಅಭಿವೃದ್ಧಿ ಕಾರ್ಯಕ್ಕೆ ಎರಡು ವರ್ಷದಿಂದ ಬೇಡಿದರೂ ಬಿಡಿಗಾಸು ನೀಡದೇ ಇರುವುದು ಯಾವ ಧರ್ಮ ಎಂದು ಮನವಿ ಪತ್ರದಲ್ಲಿ ಪ್ರಶ್ನಿಸಲಾಗಿದೆ.
ಚುನಾವಣೆ ಸಮಯದಲ್ಲಿ ಚಿಕ್ಕಮಗಳೂರು ಕ್ಷೇತ್ರವನ್ನು ದತ್ತು ತೆಗೆದುಕೊಳ್ಳುವುದಾಗಿ ಸಾರ್ವಜನಿಕರೆದುರು ಘೋಷಿಸಿ, ಅನಂತರ ಈಡೀ ಜಿಲ್ಲೆಯ ನಿಯೋಗ ನಿಮ್ಮ ಬಳಿ ಬಂದು ಬೇಡಿಕೊಂಡರು ಕಿವಿಗೋಡಲಿಲ್ಲ. ಪ್ರಮುಖ ಹೆದ್ಧಾರಿ ಕೆ.ಎಂ.ರಸ್ತೆ ಅಭಿವೃದ್ಧಿಗೆ ಅನುದಾನ ಕೋರಿದಾಗ ಕೇಶಿಫ್‌ನಲ್ಲಿ ಸೇರಿಸುತ್ತೇನೆ ಎಂದು ಸಬೂಬು ಹೇಳಿ ಈ ದಿನದವರೆಗೂ ಸುಳ್ಳು ಹೇಳುತ್ತಿದ್ದೀರಿ. ಕ್ಷೇತ್ರದ ಗ್ರಾಮೀಣ ಅಭಿವೃದ್ಧಿಗೆ ೧೦ ಕೋಟಿ, ಎಂ.ಜಿ.ರಸ್ತೆ ಅಭಿವೃದ್ಧಿಗೆ ೨೮ ಕೋಟಿ ರೂಪಾಯಿ ಕೇಳಿದರೂ ಬಿಡುಗಡೆ ಮಾಡಲಿಲ್ಲ. ಈ ಹಿಂದೆ ಉನ್ನತ ಶಿಕ್ಷಣ ಸಚಿವರು ಘೋಷಿಸಿದಂತೆ ಚಿಕ್ಕಮಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜು ಬರಲೇ ಇಲ್ಲಾ. ಕ್ಷೇತ್ರಕ್ಕೆ ೧೦೦ ಕೊಳವೆಬಾವಿ ಸೌಲಭ್ಯ ಮಂಜೂರಾಗಲಿಲ್ಲ. ೧೦೦ ವರ್ಷ ಹಳೆಯದಾದ ಹಳೇಯ ಶಾಲಾ ಕಟ್ಟಡ ಪುನರ್ ನಿರ್ಮಾಣಕ್ಕೆ ೮ ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ನೀಡಿದ ಭರವಸೆ ಈಡೇರಲಿಲ್ಲ. ಹೊಸ ತೋಟಗಾರಿಕೆ ಕಾಲೇಜುಗಳನ್ನು ಪ್ರಕಟಿಸುವಾಗ ಚಿಕ್ಕಮಗಳೂರಿ ಮಂಜೂರು ಮಾಡಬೇಕೆಂದು ನಿಮಗೆ ನೆನಪಾಗಲಿಲ್ಲವೆ. ಅಥವಾ ನಿರ್ಲಕ್ಷವೂ ಎಂದು ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳು ಪ್ರಶ್ನಿಸಿದ್ದಾರೆ. ೨೦೦೬-೦೭ರ ಬಜೆಟ್‌ನಲ್ಲಿ ನಮ್ಮ ಕ್ಷೇತ್ರಕ್ಕೆ ತುಪ್ಪ ಸವರಿದ ಅಂಬಳೆ ಕೃಷ್ಣಶಾಸ್ತ್ರಿಗಳ ಸ್ಮಾರಕ ಭವನದ ೧ ಕೋಟಿ, ೨೦೦೮-೦೯ನೆ ಬಜೆಟ್‌ನಲ್ಲಿ ಕಾಫಿಟೆಕ್ ಹಾಗೂ ಪುಡ್‌ಟೆಕ್ ಪಾರ್ಕ್‌ಗಳಿಗೆ ೨ ಕೋಟಿ ಕೊಟ್ಟಿದ್ದೂ ಏನಾಯಿತು ಎಂದು ಗೋತ್ತಿಲ್ಲ. ಇದೇ ರೀತಿ ಹಲವಾರು ಪ್ರಶ್ನೆಗಳೊಂದಿಗೆ ಮುಖ್ಯಮಂತ್ರಿಯನ್ನು ಲೇವಡಿ ಮಾಡಲಾಗಿದೆ.
ಇಷ್ಟಕ್ಕೆ ನಿಲ್ಲದೆ ಪದಾಧಿಕಾರಿಗಳ ವಾಗ್ದಾಳಿ ವಿರೋಧ ಪಕ್ಷದಲ್ಲಿದ್ದಾಗ ಚಿಕ್ಕಮಗಳೂರಿಗೆ ಬಂದು ಮಾಲಾಧಾರಿಗಳಾಗಿ ದತ್ತಪೀಠಕ್ಕೆ ಬರುವುದಾಗಿ ಪ್ರಮಾಣ ಮಾಡಿ ಹೇಳಿ, ಈಗ ಅದಕ್ಕೆ ಮುಜುಗರ ಪಡುತ್ತಿರುವ ತಾವು ಟೋಪಿ ಹಾಕಿ ನಮಾಜ್‌ಗೆ ಕೂರುತ್ತಿರಲ್ಲಾ ಇದು ಹಿಂದೂಗಳ ಹೊಟ್ಟೆ ಉರಿಸಲು ಟೊಂಕಕಟ್ಟಿ ನಿಂತಿರುವ ನಿಮ್ಮ ವ್ಯರ್ಥ ಪ್ರಯತ್ನವೇ ಎಂದು ವ್ಯಂಗ್ಯವಾಡಲಾಗಿದೆ.
೨೫ ವರ್ಷಗಳ ಕಾಲ ಸಿ.ಟಿ.ರವಿಯವರ ನೇತೃತ್ವದಲ್ಲಿ ಪಶ್ಚಿಮಘಟ್ಟಗಳ ಉಳಿವಿಗಾಗಿ ಪರಿಸರ ಹಿತಾಸಕ್ತಿಯ ಹೋರಾಟ ಮಾಡಿದ ಕಾರ್ಯಕರ್ತರ ಕಣ್ಣಲ್ಲಿ ನೀರು ಬರುವಂತೆ ಈ ಪರ್ವತ ಶ್ರೇಣಿಯಲ್ಲಿ ಗಣಿಗಾರಿಕೆ ಅನುಮತಿ ನೀಡುವ ಹವಣಿಕೆ ನಡೆಯುತ್ತಿದೆಯಲ್ಲಾ ಈ ಅನ್ಯಾಯದ ನಿರ್ಧಾರಕ್ಕೆ ಈ ನಮ್ಮ ಬಿಜೆಪಿ ಸರಕಾರವೇ ಬೇಕಿತ್ತಾ. ಇನ್ನೂ ನಾವು ಹೇಗೆ ತಲೆ ಎತ್ತಿ ತಿರುಗುವುದು ಎಂದು ಪಕ್ಷದ ಲೆಡರ್‌ಹೆಡ್‌ನಲ್ಲಿ ನೀಡುತ್ತಿರುವ ಪತ್ರದಲ್ಲಿ ಪ್ರಶ್ನಿಸಲಾಗಿದೆ.
ತಮ್ಮ ಮನಃಸಾಕ್ಷಿಯನ್ನೂ ಕೆದಕಿ ಸಮಾದಾನದಿಂದ ಯೋಚಿಸುವ ಸಹನೆ ನಿಮಗಿದ್ದರೆ ಕ್ಷಣಾರ್ಧದಲ್ಲಿಯೇ ಇದೆಲ್ಲವೂ ಸತ್ಯ ಎಂಬ ಅರಿವು ನಿಮಗುಂಟಾಗುತ್ತದೆ. ಬೂಟಾಟಿಕೆಯ ಪರಿಚಯವಿಲ್ಲದ ಕಂಡದ್ದನ್ನೂ ಕಂಡಂತೆ ನೇರವಾಗಿ ಹೇಳುವ ಕೆಚ್ಚೆದೆಯ ಗುಣ ನಾವು ಕಲಿತಿರುವುದೇ ನಿಮ್ಮಿಂದ. ಅದರ ಫಲವೇ ಈ ನ್ಯಾಯಯುತ ಪ್ರತಿಭಟನೆ ಎಂದು ತಿರುಗೇಟು ನೀಡಲಾಗಿದೆ.
ಇನ್ನು ಮೇಲಾದರೂ ಪಕ್ಷದ ಸಂಘಟನೆಗೆ ಪ್ರಮಾಣಿಕವಾಗಿ ಶ್ರಮಿಸಿರುವ ಸಿ.ಟಿ.ರವಿಯವರ ಕಾರ್ಯಕರ್ತರ ಪಡೆಯನ್ನು ತುಳಿಯುವ ಧೋರಣೆ ಕೈಬಿಟ್ಟು, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿ. ಪಕ್ಷಕ್ಕಾಗಿ ಪ್ರಾಣ ನೀಡಲು ಸಿದ್ಧರಿರುವ ಕಾರ್ಯಕರ್ತರ ಮಾನ ಉಳಿಸುವುದು ನಿಮ್ಮ ಜವಾಬ್ದಾರಿ. ಮಂತ್ರಿಗಿರಿಗಾಗಿ ಲಾಬಿ ಮಾಡುವ ಶಾಸಕರಿಗಿಂತ ಕ್ಷೇತ್ರದ ಅಭಿವೃದ್ಧಿ ಮತ್ತು ಪಕ್ಷದ ಬೆಳವಣಿಗೆಗೆ ಶ್ರಮಿಸುವ ರವಿಯವರ ಆತ್ಮಸ್ಥೆರ್ಯ ಕುಂದಿಸುವ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ.
ಮನವಿ ಪತ್ರದೊಂದಿಗೆ ಕ್ಷೇತ್ರದ ಬಿಜೆಪಿಯ ಅಧ್ಯಕ್ಷರು, ನಗರಸಭೆ ಅಧ್ಯಕ್ಷರು, ನಗರಾಭಿವೃದ್ಧಿ ಅಧ್ಯಕ್ಷರು, ಬಿಜೆಪಿ ಮಹಿಳಾ ಸಮಿತಿ, ರೈತ ಮೋರ್ಚಾ, ಯುವ ಮೋರ್ಚಾ, ಎಸ್.ಸಿ. ಎಸ್‌ಟಿ ಘಟಕ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರು, ಖಜಾಂಚಿ, ವಕ್ತಾರರು, ಜಿಲ್ಲಾ ಪಂಚಾಯತ್ ಸದಸ್ಯರು ಪಕ್ಷದ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಸಿ.ಟಿ.ರವಿಯವರಿಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಒತ್ತಡ ಹೇರಲಾಗಿದೆ ಎಂದು ತಿಳಿಸಲಾಗಿದೆ.
Subscribe to:
Post Comments (Atom)
No comments:
Post a Comment