
ಭಜ್ಜಿಗೆ ಮದುವೆ; ವಧು ಬಾಲಿವುಡ್ ನಟಿ ಗೀತಾ ಬಾಸ್ರಾ?
ಕ್ರಿಕೆಟ್ ಸ್ಟಾರ್ ಹರಭಜನ್ ಸಿಂಗ್ ಸದ್ಯದಲ್ಲೇ ಬಾಲಿವುಡ್ ನಟಿ ಗೀತಾ ಬಾಸ್ರಾರನ್ನು ವಿವಾಹವಾಗಲಿದ್ದಾರೆಂದು ಮೂಲಗಳು ತಿಳಿಸಿವೆ. ಈ ಸಂಬಂಧ ಎರಡು ಕುಟುಂಬದವರ ಮಧ್ಯೆ ಮಾತುಕತೆಯು ನಡೆದಿದೆಯೆನ್ನಲಾಗಿದೆ.
ಭಜ್ಜಿ-ಗೀತಾ ಸಂಬಂಧದ ಬಗ್ಗೆ ಈ ಹಿಂದೆಯೂ ಹಲವು ಗಾಸಿಪ್‌ಗಳು ಹರಡಿತ್ತು. ಆದರೆ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್‌ಗಳೆಂದು ಬಾಲಿವುಡ್ ನಟಿ ಸಮಜಾಯಿಸಿ ನೀಡುತ್ತಿದ್ದಳು.
ಆದರೆ ಈ ಬಾರಿ ಒಂದು ಹೆಜ್ಜೆ ಮುಂದೆ ಇಟ್ಟಿರುವ ಭಜ್ಜಿ, ಗೀತಾಳನ್ನು ಮನೆಗೆ ಕರೆದುಕೊಂಡು ಹೋಗಿ ಕುಟುಂಬದವರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಜಲಂಧರ್‌ನಲ್ಲಿ ಸಹೋದರಿ ಸಂದೀಪ್ ಕೌರಸ್ ಮದುವೆ ಸಮಾರಂಭಕ್ಕೂ ಆಹ್ವಾನಿಸಿದ್ದರಂತೆ!. ಈ ಮೂಲಕ ಭಾವಿ ವಧುವನ್ನು ಹರಭಜನ್ ಸಿಂಗ್ ಕುಟುಂಬದ ಹಿರಿಯವರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.
ಅದೇ ವೇಳೆ ಫೆಬ್ರವರಿ 20ರ ಮದುವೆ ಸಮಾರಂಭಕ್ಕೆ ತೆರಳಿರುವುದು ನಿಜ ಎಂದು ನಟಿ ಗೀತಾ ಬಾಸ್ರಾ ತಿಳಿಸಿದ್ದಾರೆ. ಆದರೆ ಅದು ನೀವು ಅಂದುಕೊಂಡಿರುವ ಹಾಗೆಯೇ ಅಲ್ಲ. ಅನೇಕ ಆತಿಥಿಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದು, ನಾನು ಕೂಡಾ ಭಾಗವಹಿಸಿದ್ದೆ ಎಂದು ಹೇಳಿದ್ದಾರೆ.
ಈ ಮಧ್ಯೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ತಾನ ರಾಯಲ್ಸ್ ನಡುವೆ ನಡೆದಿದ್ದ ಪಂದ್ಯ ವೀಕ್ಷಿಸಲು ಗೀತಾ ತೆರಳಿದ್ದರೆಂದು ವರದಿಯಾಗಿದೆ. ಐಪಿಎಲ್‌ನಲ್ಲಿ ಹರಭಜನ್ ಭಾಗವಹಿಸುತ್ತಿರುವ ಮುಂಬೈ ತಂಡವನ್ನು ಹುರಿದುಂಬಿಸಲು ಗೀತಾ ತೆರಳಿದ್ದಾರೆ ಎಂಬುದು ಸ್ಪಷ್ಟಗೊಂಡಿದೆ.
ಆದರೆ ಇಲ್ಲಿಯೂ ನುಣುಚಿಕೊಂಡಿರುವ ಗೀತಾ, ಮುಂಬೈ ಇಂಡಿಯನ್ಸ್ ಮಾಲಕಿ ನಿತಾ ಅಂಬಾನಿ ಆಹ್ವಾನದ ಮೆರೆಗೆ ನಾನು ಪಂದ್ಯ ವೀಕ್ಷಿಸಲು ತೆರಳಿದ್ದೆ ಎಂದು ಹೇಳಿದ್ದಾರೆ. ಮಾತು ಮುಂದುವರಿಸಿದ ಅವರು ಒಂದು ವೇಳೆ ಮುಂಬೈಯನ್ನು ಬೆಂಬಲಿಸಿದರೆ ಏನಾಗುತ್ತದೆ? ನಾನು ಕೂಡಾ ಮುಂಬೈನವಳು ಎಂದು ಉತ್ತರ ನೀಡಿದ್ದಾರೆ. ಹರಭಜನ್ ನನ್ನ ಅತ್ಯುತ್ತಮ ಗೆಳೆಯನಾಗಿದ್ದು, ಸದ್ಯ ನನ್ನ ವೃತ್ತಿಜೀವನದತ್ತ ಗಮನ ಹರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಐಪಿಎಲ್ ನೂತನ ತಂಡಗಳ ಹರಾಜಿನ ಮೊತ್ತ 3,235.53 ಕೋಟಿ!
ಇದು ಅಚ್ಚರಿಯ ವಿಷಯವೇ ಹೌದು. ಐಪಿಎಲ್ ಮೊದಲ ಹರಾಜಿನಲ್ಲಿ ಎಂಟು ಫ್ರಾಂಚೈಸಿ ತಂಡಗಳು ಒಟ್ಟು 2,840 ಕೋಟಿ ರೂಪಾಯಿಗಳಿಗೆ ಮಾರಾಟಗೊಂಡಿದ್ದವು. ಆದರೆ ಈ ಬಾರಿ ಕೇವಲ ಎರಡು ನೂತನ ತಂಡಗಳಿಗಾಗಿ ಹರಾಜುಗೊಂಡ ಒಟ್ಟು ಮೊತ್ತ 3,235.53 ಕೋಟಿ ರೂಪಾಯಿ!
ಇದರಲ್ಲಿ ಸಹರಾ ಸಮೂಹವು ಪುಣೆ ತಂಡವನ್ನು 1,702 ಹಾಗೂ ರೆಂಡೆವೋಸ್ ಲಿಮಿಟೆಡ್ ವರ್ಲ್ಡ್ ಸೋರ್ಟ್ಸ್ ಲಿಮಿಟೆಡ್ ಕೊಚ್ಚಿ ತಂಡವನ್ನು 1,533 ಕೋಟಿ ರೂಪಾಯಿಗಳಿಗೆ ಖರೀದಿಸಿವೆ.
ಐಪಿಎಲ್‌ನ ಈ ಎರಡು ನೂತನ ತಂಡಗಳು ಭಾರೀ ಮೊತ್ತಕ್ಕೆ ಹರಾಜುಗೊಳ್ಳಲಿದೆಯೆಂಬುದನ್ನು ಸ್ವತಃ ಮುಖ್ಯಸ್ಥ ಲಲಿತ್ ಮೋದಿ ಕೂಡಾ ಅಂದುಕೊಂಡಿರಲಿಲ್ಲ. ಆದರೆ ಸಹರಾ ಹಾಗೂ ರೆಂಡೆವೋಸ್ ಬಿಡ್ಡರುಗಳು ಪುಣೆ ಹಾಗೂ ಕೊಚ್ಚಿ ತಂಡವನ್ನು ಖರೀದಿಸುವ ಮೂಲಕ ಮುಂದಿನ ಹತ್ತು ವರ್ಷಗಳಿಗೆ ತಂಡದ ಹಕ್ಕನ್ನು ತನ್ನದಾಗಿಸಿಕೊಂಡಿದೆ.
ಇಷ್ಟು ದೊಡ್ಡ ಮೊತ್ತಕ್ಕೆ ತಂಡ ಹರಾಜು ಆಗಬಹುದು ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಇದು ನನ್ನಲ್ಲಿ ಅಚ್ಚರಿಯನ್ನುಂಟು ಮಾಡಿದೆ. ತಂಡಗಳು 300ರಿಂದ 320 ದಶಲಕ್ಷ ಡಾಲರ್‌ಗೆ ಮಾರಾಟವಾಗಬಹುದೆಂಬುದು ನನ್ನ ನಿರೀಕ್ಷೆಯಾಗಿತ್ತು. ಆದರೆ ನಾನು ನಿರೀಕ್ಷೆ ಮಾಡಿದಕ್ಕಿಂತಲೂ 40ರಿಂದ 50 ದಶಲಕ್ಷ ಅಧಿಕ ಮೊತ್ತಕ್ಕೆ ತಂಡಗಳು ಹರಾಜುಗೊಂಡಿದೆ ಎಂದು ಮೋದಿ ವಿವರಿಸಿದರು.
ಲಾಭ ಗಿಟ್ಟಿಸಲಿವೆ...
ಅದೇ ವೇಳೆ ಫ್ರಾಂಚೈಸಿಗಳು ತಾವು ಹೂಡಿರುವ ಮೊತ್ತವನ್ನು ಮರಳಿ ಪಡೆಯುವುದರಲ್ಲಿ ಯಾವುದೇ ಸಂಶಯ ಬೇಡ ಎಂದು ಹೇಳಿರುವ ಮೋದಿ, ತಂಡಗಳು ಲಾಭ ಗಿಟ್ಟಿಸಲಿವೆಯೆಂಬ ಭರವಸೆ ನೀಡಿದರು.
ಹಣ ಹೂಡಿಲ್ಲ...
ಮತ್ತೊಂದೆಡೆ ಕೇರಳದ ಪರ ತಂಡ ಖರೀದಿಸಿರುವುದಲ್ಲಿ ಪ್ರಮುಖ ಪಾತ್ರ ವಹಿಸಿರುವ ವಿದೇಶಾಂಗ ರಾಜ್ಯ ಸಚಿವ ಶಶಿ ತರೂರ್, ಕೊಚ್ಚಿ ತಂಡದಲ್ಲಿ ತಾನು ಹಣ ಹೂಡಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಕೊಚ್ಚಿ ತಂಡ ಖರೀದಿಯಲ್ಲಿ ತರೂರ್ ಪ್ರಮುಖ ಪಾತ್ರ ನಿರ್ವಹಿಸಿದ್ದರು ಎಂದು ಮೋದಿ ಸ್ಪಷ್ಟಪಡಿಸಿದ್ದರು.
ಮೋಹನ್‌ಲಾಲ್, ಪ್ರಿಯದರ್ಶನ್ ಫುಲ್ ಖುಷ್...
ಅದೇ ವೇಳೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೊಚ್ಚಿ ತಂಡ ಕಾಣಿಸಿಕೊಂಡಿರುವುದಕ್ಕೆ ಮಲಯಾಳಂ ಸೂಪರ್ ಸ್ಟಾರ್ ನಟ ಮೋಹನ್‌ಲಾಲ್ ಹಾಗೂ ಬಾಲಿವುಡ್ ನಿರ್ದೇಶಕ ಪ್ರಿಯದರ್ಶನ್ ಅತೀವ ಸಂತೋಷ ವ್ಯಕ್ತಪಡಿಸಿದ್ದಾರೆ.
ಇಂದೊಂದು ದೊಡ್ಡ ವಿಷಯ. ನಾವೆಲ್ಲರೂ ಜೊತೆಯಾಗಿ ಕೊಚ್ಚಿ ತಂಡಕ್ಕಾಗಿ ದುಡಿಯಲಿದ್ದೇವೆ ಎಂದು ಲಾಲ್ ನುಡಿದರು.
ಈ ಹಿಂದೆ ಕೊಚ್ಚಿ ತಂಡ ಖರೀದಿಗಾಗಿ ಬಿಡ್ ಸಲ್ಲಿಸಿದ್ದ ಪ್ರಿಯದರ್ಶನ್-ಲಾಲ್ ಅಂತಿಮ ಹಂತದಲ್ಲಿ ಹಿಂದೆ ಸರಿದಿದ್ದರು. ಐಪಿಎಲ್ ಬಿಡ್ಡಿಂಗ್ ನಿಯಮಗಳಲ್ಲಿ ಕೆಲವು ಬದಲಾವಣೆ ತಂದಿರುವುದು ಇದಕ್ಕೆ ಕಾರಣವೆಂದು ಹೇಳಲಾಗಿತ್ತು.
ಐಪಿಎಲ್‌ಗೆ ನೂತನ ಫ್ರಾಂಚೈಸಿ ಸೇರ್ಪಡೆ; ಗಿಲ್ಲಿ ಶ್ಲಾಘನೆ
ತಂಡಗಳ ಸಂಖ್ಯೆಯನ್ನು ಎಂಟರಿಂದ ಹತ್ತಕ್ಕೆ ವಿಸ್ತರಿಸಿದ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಕರ ಕ್ರಮವನ್ನು ಡೆಕ್ಕನ್ ಚಾರ್ಜರ್ಸ್ ನಾಯಕ ಆಡಂ ಗಿಲ್‌ಕ್ರಿಸ್ಟ್ ಶ್ಲಾಘಿಸಿದ್ದಾರೆ.
ಐಪಿಎಲ್ ತಂಡಗಳನ್ನು ಹೆಚ್ಚಿಸಿರುವುದು ಉತ್ತಮ ಕ್ರಮ. ಇದರಿಂದ ಉತ್ತಮ ಫಲಿತಾಂಶ ಹೊರಬರಲಿದೆ ಎಂದವರು ಹೇಳಿದರು.
ಅದೇ ವೇಳೆ ತಂಡಗಳನ್ನು ವಿಸ್ತರಿಸುವ ಯೋಜನೆಯ ಹಿಂದೆ ಕ್ರಿಕೆಟ್‌ನ ಮೇಲೆ ಭಾರತಕ್ಕಿರುವ ಪ್ರೀತಿಯೇ ಪ್ರಮುಖ ಕಾರಣ ಎಂದವರು ಅಭಿಪ್ರಾಯಪಟ್ಟರು.
ಎಲ್ಲರ ಪಾತ್ರ ಮಹತ್ವದ್ದು...
ಅದೇ ವೇಳೆ ಸತತ ಮೂರನೇ ಜಯದ ಪ್ರತಿಕ್ರಿಯೆ ನೀಡಿದ ಗಿಲ್ಲಿ, ಭಾರತದ ಯುವ ಆಟಗಾರರು ಸೇರಿದಂತೆ ತಂಡದ ಎಲ್ಲ ಸದಸ್ಯರು ಅತ್ಯುತ್ತಮ ನಿರ್ವಹಣೆ ನೀಡುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.
ವಿವಿಧ ದೇಶದಿಂದ ಬಂದಿರುವ ನಾವೆಲ್ಲರೂ ಡ್ರೆಸಿಂಗ್ ರೂಂನಲ್ಲಿ ಒಂದು ತಂಡವಾಗಿ ದುಡಿಯುತ್ತೇವೆ ಎಂದವರು ಹೇಳಿದರು.
ಗಂಭೀರ್ ಅಲಭ್ಯತೆ ದೊಡ್ಡ ಹೊಡೆತ...
ಅದೇ ವೇಳೆ ತಂಡದ ಸೋಲಿಗೆ ಆರಂಭಿಕ ಗೌತಮ್ ಗಂಭೀರ್ ಅಲಭ್ಯತೆಯು ದೊಡ್ಡ ಹೊಡೆತವನ್ನೇ ನೀಡಿದೆ ಎಂದು ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಉಸ್ತುವಾರಿ ನಾಯಕ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ವಿಶ್ವಕಪ್‌ಗಾಗಿನ ಕಪ್ತಾನನ ಆಯ್ಕೆ: ಪಿಸಿಬಿ
ಮುಂಬರುವ ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ಗಾಗಿ ಕಪ್ತಾನನ ಆಯ್ಕೆ ಇದೀಗ ನಡೆಸಲಾಗುವುದು ಎಂದು ಹೇಳಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಇಜಾಜ್ ಭಟ್, ಖಾಯಂ ನಾಯಕನನ್ನು ಆಮೇಲೆ ಆರಿಸಲಾಗುವುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಕಪ್‌ಗಾಗಿರುವ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದ್ದರೂ ನಾಯಕನ ಆಯ್ಕೆ ಮಾಡದಿದ್ದರ ಹಿನ್ನೆಲೆಯಲ್ಲಿ ಹಲವು ಕಡೆಗಳಿಂದ ವ್ಯಾಪಕ ಟೀಕೆಗಳು ಕೇಳಿಬಂದಿತ್ತು.
ಕೆಲವು ದಿನಗಳೊಳೆಗೆ ವಿಶ್ವಕಪ್‌ಗಾಗಿನ ನಾಯಕನನ್ನು ಆರಿಸಲಾಗುವುದು. ನಂತರ ಖಾಯಂ ನಾಯಕನ ಆಯ್ಕೆ ಮಾಡಲಾಗುವುದು ಎಂದು ಭಟ್ ಹೇಳಿದರು.
ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಎಪ್ರಿಲ್ 30ರಂದು ಆರಂಭವಾಗಲಿದೆ.
ಪಿಸಿಬಿಗೆ ಭವಿಷ್ಯದ ಬಗ್ಗೆ ಉತ್ತಮ ದೃಷ್ಟಿಕೋಣವಿದ್ದು, ಆದ್ದರಿಂದಲೇ ಆಟಗಾರರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಭಟ್ ಹೇಳಿದರು.
ಅದೇ ವೇಳೆ ತನ್ನನ್ನು ವಜಾಗೊಳಿಸಿರುವುದಕ್ಕೆ ಮಂಡಳಿ ಸ್ಪಷ್ಟನೆ ನೀಡಿಲ್ಲವೆಂಬ ವೇಗಿ ರಾಣಾ ನವೇದ್‌ರ ಆರೋಪವನ್ನು ಭಟ್ ನಿರಾಕರಿಸಿದರು. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಆಟಗಾರರಿಗೆ ಪತ್ರ ರವಾನಿಸಲಾಗಿದೆ ಎಂದವರು ಹೇಳಿದರು.
ಕೊಚ್ಚಿ ಪರ ಆಡುವುದನ್ನು ಇಷ್ಟಪಡುವೆನು; ಶ್ರೀಶಾಂತ್
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಕೊಚ್ಚಿ ತಂಡ ಸೇರ್ಪಡೆಗೊಂಡಿರುವುದಕ್ಕೆ ಅತೀವ ಸಂತೋಷ ವ್ಯಕ್ತಪಡಿಸಿರುವ ಕೇರಳ ವೇಗಿ ಶಾಂತಕುಮಾರನ್ ಶ್ರೀಶಾಂತ್, ತಾನು ಕೊಚ್ಚಿ ಪರ ಆಡುವುದನ್ನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಕೇರಳ ಪರ ಆಡುವುದಕ್ಕೆ ನಾನು ಒಲವು ತೋರಲಿದ್ದೇನೆ. ಯಾಕೆಂದರೆ ತವರಿನ ತಂಡದ ಪರ ಆಡುವುದಕ್ಕಿಂತ ಬೇರೊಂದು ಇಲ್ಲ. ಆದರೂ ಪಂಜಾಬ್ ತಂಡವನ್ನೂ ನಾನು ಪ್ರೀತಿಸುತ್ತಿದ್ದು, ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪರ ಆಡುವುದನ್ನು ಆನಂದಿಸುತ್ತಿದ್ದೇನೆ. ಹಾಗಾದರೂ ನಿಮಗೆ ತವರಿನ ತಂಡ ಲಭ್ಯವಿದ್ದರೆ ಯಾರೇ ಆದರೂ ಆ ತಂಡದ ಪರ ಒಲವು ತೋರಲಿದ್ದಾರೆ ಎಂದವರು ಹೇಳಿದರು.
No comments:
Post a Comment