VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 8, 2010

ಗಂಗೂಲಿ ಆಕರ್ಷಕ ಅರ್ಧಶತಕ:ಡೆಲ್ಲಿಗೆ ಸೋಲುಣಿಸಿದ ನೈಟ್ ರೈಡರ್ಸ್




ಕೋಲ್ಕತ್ತಾ:ನಾಯಕ ಸೌರವ್ ಗಂಗೂಲಿ (56, 46 ಎಸೆತ) ಸಿಡಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಇಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಹತ್ವದ ಪಂದ್ಯವನ್ನು 14 ರನ್ನುಗಳ ಅಂತರದಿಂದ ಗೆದ್ದುಕೊಂಡಿದ್ದು, ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಇಲ್ಲಿನ ಈಡೆನ್ ಗಾರ್ಡೆನ್ ಮೈದಾನದಲ್ಲಿ ಸ್ಥಳೀಯ ಹೀರೊ 'ದಾದಾ' ಖ್ಯಾತಿಯ ಬಂಗಾಳದ ಹುಲಿ ನಿಜಕ್ಕೂ ಅತ್ಯುತ್ತಮ ಆಟ ಪ್ರದರ್ಶಿಸಿದರು. ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಮಿಂಚಿದ ಗಂಗೂಲಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹರಾದರು. ಆ ಮೂಲಕ ವೀರೇಂದ್ರ ಸೆಹ್ವಾಗ್ (64ರನ್, 40ಎಸೆತ) ಮತ್ತು ನಾಯಕ ಗೌತಮ್ ಗಂಭೀರ್ (47ರನ್, 29ಎಸೆತ) ನಡೆಸಿದ ದಿಟ್ಟ ಹೋರಾಟ ವ್ಯರ್ಥವಾಯಿತು.

ಡೆಲ್ಲಿ ವಿರುದ್ಧ ಜಯದೊಂದಿಗೆ ಟೂರ್ನಿಯಲ್ಲಿ ತಲಾ ಐದು ಜಯ ಹಾಗೂ ಸೋಲನ್ನು ಕಂಡಿರುವ ಸೌರವ್ ಪಡೆ ಒಟ್ಟು ಹತ್ತು ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಅದೇ ವೇಳೆ ಈ ಪಂದ್ಯದಲ್ಲಿ ಸೋತರೂ ಅಂಕಪಟ್ಟಿಯಲ್ಲಿ ಡೆವಿಲ್ಸ್ ಸ್ಥಾನಕ್ಕೆ ಯಾವುದೇ ಧಕ್ಕೆಯುಂಟಾಗಲಿಲ್ಲ. ಹತ್ತು ಪಂದ್ಯಗಳನ್ನಾಡಿರುವ ಡೆವಿಲ್ಸ್ ತಂಡ ಆರು ಜಯ ಹಾಗೂ ನಾಲ್ಕು ಸೋಲನ್ನು ಕಂಡಿದ್ದು, ಒಟ್ಟು 12 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ರೈಡರ್ಸ್‌ಗೆ ಗಂಗೂಲಿ ಮತ್ತು ಕ್ರಿಸ್ ಗೇಲ್ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 10.2 ಓವರುಗಳಲ್ಲಿ 94ರನ್ನುಗಳ ಜೊತೆಯಾಟ ನೀಡಿದರು.
ಕೇವಲ 21 ಎಸೆತಗಳನ್ನು ಎದುರಿಸಿದ ಗೇಲ್ ಐದು ಬೌಂಡರಿ ಹಾಗೂ ಎರಡು ಭರ್ಜರಿ ಸಿಕ್ಸರುಗಳ ನೆರವಿನಿಂದ 40 ರನ್ ಗಳಿಸಿದರು. ಅದೇ ರೀತಿ ದಾದಾ ಕೂಡಾ ಐಪಿಎಲ್‌ನಲ್ಲಿ ಆರನೇ ಅರ್ಧಶತಕ ದಾಖಲಿಸಿದರು. 46 ಎಸೆತಗಳನ್ನು ಎದುರಿಸಿದ ಗಂಗೂಲಿ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 56 ರನ್ ಗಳಿಸಿದರು.
ಗೇಲ್ ಔಟಾದ ನಂತರ ಕ್ರೀಸಿಗೆ ಆಗಮಿಸಿದ್ದ ಬ್ರೆಂಡ ಮೆಕಲಮ್ (6) ರನೌಟ್‌ಗೆ ಬಲಿಯಾದರು. ಆದರೆ ನಾಲ್ಕನೇ ವಿಕೆಟ್‌ಗೆ 41 ಎಸೆತಗಳಲ್ಲಿ ಮುರಿಯದ 70 ಪೇರಿಸಿದ ಮನೋಜ್ ತಿವಾರಿ ಹಾಗೂ ಅಂಗಲೋ ಮ್ಯಾಥ್ಯೂಸ್ ಜೋಡಿ ತಂಡದ ಮೊತ್ತವನ್ನು 180 ಗುರಿ ದಾಟಿಸಿದರು.

ಬಿರುಸಿನ ಆಟ ಪ್ರದರ್ಶಿಸಿದ ಮ್ಯೂಥ್ಯೂಸ್ 28 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಎರಡು ಸಿಕ್ಸರುಗಳ ನೆರವಿನಿಂದ ಅಜೇಯ 46 ರನ್ ಗಳಿಸಿದರು. ಅದೇ ರೀತಿ ಔಟಾಗದೆ ಉಳಿದ ತಿವಾರಿ ಕೂಡಾ 18 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್ ಹಾಗೂ ಬೌಂಡರಿ ನೆರವಿನಿಂದ 26 ರನ್ ಗಳಿಸಿದರು.
ಒಟ್ಟಾರೆಯಾಗಿ ಕೋಲ್ಕತ್ತಾ ತಂಡ ನಿಗದಿತ 20 ಓವರುಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 181 ರನ್ನುಗಳ ಸವಾಲಿನ ಮೊತ್ತ ಪೇರಿಸಿತು.
ಆದರೆ ಸವಾಲಿನ ಮೊತ್ತವನ್ನು ಬೆನ್ನತ್ತಿದ್ದ ಡೆಲ್ಲಿಗೆ ಕೋಲ್ಕತ್ತಾ ವೇಗಿ ಅಶೋಕ್ ದಿಂಡಾ ಪ್ರಥಮ ಓವರ್‌ನಲ್ಲೇ ಆಘಾತ ನೀಡಿದರು. ಡೇವಿಡ್ ವಾರ್ನರ್‌ರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್‌ಗೆ ಮರಳಿಸಿದರು.
ಈ ಹಂತದಲ್ಲಿ ಜೊತೆಗೂಡಿದ ಸೆಹ್ವಾಗ್ ಮತ್ತು ಗಂಭೀರ್ ಪಂದ್ಯದ ಗತಿಯನ್ನೇ ಬದಲಾಯಿಸುವ ಯತ್ನ ನಡೆಸಿದರು. ದ್ವಿತೀಯ ವಿಕೆಟ್‌ಗೆ 58 ಎಸೆತಗಳಲ್ಲಿ 99 ರನ್ನುಗಳ ಜೊತೆಯಾಟ ನೀಡಿದ ಈ ಜೋಡಿ ಗೆಲುವಿನ ನಿರೀಕ್ಷೆ ಮೂಡಿಸಿದರು.
ಆದರೆ ಗಂಭೀರ್‌ರನ್ನು ಅದ್ಭುತ ಫೀಲ್ಡಿಂಗ್ ಮಾಡುವ ಮೂಲಕ ರನೌಟ್‌ಗೆ ಗುರಿಯಾಗಿಸಿದ ಗಂಗೂಲಿ ಪಂದ್ಯಕ್ಕೆ ತಿರುವನ್ನು ನೀಡಿದರು. 29 ಎಸೆತಗಳನ್ನು ಎದುರಿಸಿದ ಗೌತಿ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 47 ರನ್ ಗಳಿಸಿದರು.
ನಂತರ ಕ್ರೀಸಿಗಿಳಿದ ದೆಹಲಿ ಬ್ಯಾಟ್ಸ್‌ಮನ್‌ಗಳೆಲ್ಲಾ ರೈಡರ್ಸ್ ಬೌಲರುಗಳ ನಿಖರ ದಾಳಿ ಮುಂದೆ ಮಿಂಚಿಲಾಗಲಿಲ್ಲ.
ದಿಟ್ಟ ಹೋರಾಟ ನಡೆಸಿದ ಸೆಹ್ವಾಗ್ ಮಾತ್ರ 40 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಮೂರು ಮನಮೋಹಕ ಸಿಕ್ಸರುಗಳ ನೆರವಿನಿಂದ 64 ರನ್ ಗಳಿಸಿದರು. ಉಳಿದಂತೆ ದಿನೇಶ್ ಕಾರ್ತಿಕ್ (20), ಪಾಲ್ ಕಾಲಿಂಗ್‌ವುಡ್ (2), ಕೆ.ಎಂ. ಜಾಧವ್ (5), ಮಹರೂಫ್ (2) ಮತ್ತು ರಜತ್ ಭಾಟಿಯಾ (2) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಅಂತಿಮವಾಗಿ ಡೆಲ್ಲಿ ತಂಡ ನಿಗದಿತ 20 ಓವರುಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 167 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 14 ರನ್ನುಗಳಿಂದ ಸೊಲೊಪ್ಪಿಕೊಂಡಿತು. ಅಜೇಯರಾಗುಳಿದ ಡ್ಯಾನಿಯಲ್ ವಿಟ್ಟೋರಿ 12 ರನ್ ಗಳಿಸಿದರು.
ಕೋಲ್ಕತ್ತಾ ಪರ ಪ್ರಭಾವಿ ದಾಳಿ ಸಂಘಟಿಸಿದ ದಿಂಡಾ ಮತ್ತು ಅಂಜತಾ ಮೆಂಡೀಸ್ ತಲಾ ಎರಡು ಹಾಗೂ ಅಜಿತ್ ಅಗರ್‌ಕರ್ ಮತ್ತು ಇಕ್ಬಾಲ್ ಅಬ್ದುಲ್ಲಾ ತಲಾ ಒಂದು ವಿಕೆಟ್ ಪಡೆದರು. ಅದ್ಭುತ ಕ್ಯಾಚ್‌ವೊಂದನ್ನು ಕೂಡಾ ಪಡೆದ ದಾದಾ ನಿಜಕ್ಕೂ ಗೆಲುವಿನ ರೂವಾರಿಯೆನಿಸಿದರು.

No comments: