ಇಂದೋರ್, ಮೇ 16: ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮಧ್ಯಪ್ರದೇಶದ ಧಾರ್ ಜಿಲ್ಲೆಯಿಂದ ಉದ್ಯಮಿಯೊಬ್ಬನನ್ನು ರಾಜಸ್ಥಾನ ಭಯೋತ್ಪಾದನೆ ನಿಗ್ರಹ ದಳವು (ಎಟಿಎಸ್) ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದೆಯೆಂದು ಪೊಲೀಸರಿಂದು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ಪ್ಯಾರ್ ಸಿಂಗ್ ನೆನಾಮಾ ಎಂಬವರ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿದ್ದು, ಸದ್ಯ ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ರಾಜೇಶ್ ಮಿಶ್ರಾ ಎಂಬಾತನನ್ನು ಪಿತಾಂಪುರದಿಂದ ನಿನ್ನೆ ರಾತ್ರಿ ಎಟಿಎಸ್ ವಶಕ್ಕೆ ತೆಗೆದುಕೊಂಡಿದೆಯೆಂದು ಅವರು ಹೇಳಿದ್ದಾರೆ.
2007ರಲ್ಲಿ ಅಜ್ಮೀರ್‌ನ ಖ್ವಾಜಾ ಮೊಯ್ನುದ್ದೀನ್ ಚಿಸ್ತಿ ದರ್ಗಾದಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಮಧ್ಯಪ್ರದೇಶದಿಂದ ಎಟಿಎಸ್ ವಶಕ್ಕೆ ತೆಗೆದುಕೊಂಡಿರುವ ನಾಲ್ಕನೆಯ ವ್ಯಕ್ತಿ ಈತನಾಗಿದ್ದಾನೆ. ಧಾರ್ ಜಿಲ್ಲೆಯ ಪಿತಂಪುರ ಕೈಗಾರಿಕಾ ವಲಯದಲ್ಲಿ ಎಂಜಿನಿಯರಿಂಗ್ ಘಟಕವೊಂದನ್ನು ನಡೆಸುತ್ತಿರುವ ಮಿಶ್ರಾನ ಮೇಲೆ ರಾಜಸ್ಥಾನ ಎಟಿಎಸ್ ಕಳೆದ ಏಳು ತಿಂಗಳುಗಳಿಂದ ಕಣ್ಣಿಟ್ಟಿತ್ತೆಂದು ಪೊಲೀಸರು ತಿಳಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಹಾಗೂ ರಾಜಸ್ಥಾನ ಎಟಿಎಸ್‌ನ ಜಂಟಿ ತಂಡವೊಂದು 2009ರ ಅಕ್ಟೋಬರ್‌ನಲ್ಲಿ ಈತನ ವಿಚಾರಣೆ ನಡೆಸಿ, ಬಳಿಕ ಬಿಡುಗಡೆಗೊಳಿಸಿತ್ತೆಂದು ಅವರು ಹೇಳಿದ್ದಾರೆ.
ಈ ಮೊದಲು, ಇಂದೋರ್ ನಿವಾಸಿ ಲೋಕೇಶ್ ಶರ್ಮಾ (30) ಎಂಬಾತನನ್ನು ರಾಜಸ್ಥಾನ ಎಟಿಎಸ್ ಮೇ 14ರಂದು ಬಂಧಿಸಿದೆ.
ಮಿಶ್ರಾ ಹಾಗೂ ಶರ್ಮಾ, 2003ರಲ್ಲಿ ಆಗಸ್ಟ್‌ನಲ್ಲಿ ಇಂದೋರ್‌ನ ಮಾನ್‌ಪುರದಲ್ಲಿ ನಡೆದ ಕಾಂಗ್ರೆಸ್ ನಾಯಕ ನೆನಾಮಾರ ಕೊಲೆ ಪ್ರಕರಣದ 13 ಆರೋಪಿಗಳಲ್ಲಿ ಸೇರಿದ್ದಾರೆ. ಕೊಲೆ ಪ್ರಕರಣದಲ್ಲಿ ಬಂಧಿತರಾದ ಇಬ್ಬರೂ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.
2007ರ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಗುಂಡಿಗೆ ಬಲಿಯಾದ ಆರೆಸ್ಸೆಸ್‌ನ ಮಾಜಿ ಪ್ರಚಾರಕ ಸುನೀಲ್ ಜೋಶಿ ಎಂಬಾತನ ಹೆಸರೂ ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದಲ್ಲಿ ಕೇಳಿ ಬಂದಿತ್ತು. ಆತನೂ ನೆನಾಮಾ ಕೊಲೆ ಪ್ರಕರಣದ ಆರೋಪಿಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಚಂದ್ರಶೇಖರ ಬರೋಡ್ ಹಾಗೂ ವಿಷ್ಣು ಪಾಟಿದಾರ್ ಈ ಮೊದಲು ಎಟಿಎಸ್ ಬಂಧಿಸಿರುವ ಇತರ ಇಬ್ಬರಾಗಿದ್ದಾರೆ.
ಪಾಟದಾರನನ್ನು ಬಳಿಕ ಬಿಡುಗಡೆಗೊಳಿಸಲಾಯಿತಾದರೂ ಬರೋಡ್‌ಗೆ ಮೇ 21ರ ತನಕ ಪೊಲೀಸ್ ಕಸ್ಟಡಿ ವಿಧಿಸಲಾಗಿದೆಯೆಂದು ಅವರು ಹೇಳಿದ್ದಾರೆ.
Subscribe to:
Post Comments (Atom)
No comments:
Post a Comment