ಮೈಸೂರು, ಮೇ 19: ರಾಜ್ಯ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಮಾನವ ರೂಪದ ಅಮಾನವೀಯ ಮನಸ್ಸುಗಳು ಆಡಳಿತ ನಡೆಸುತ್ತಿವೆ. ಅದರಿಂದ ಜನತಂತ್ರ ವ್ಯವಸ್ಥೆಯೆ ಕುಲಗೆಟ್ಟು ಹೋಗಿದೆ ಎಂದು ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷ, ಸಾಹಿತಿ, ಚಿಂತಕ ದೇವನೂರ ಮಹದೇವ ಅಭಿಪ್ರಾಯ ಪಟ್ಟಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಘ ಪರಿವಾರದ ಕಪಿಮುಷ್ಠಿಯಲ್ಲಿರುವ ಬಿಜೆಪಿಯಿಂದ ಪ್ರಜಾ ಸತ್ತಾತ್ಮಕ ಆಡಳಿತ ಸಾಧ್ಯವಿಲ್ಲ. ಯಾಕೆಂದರೆ ಸಂಘ ಪರಿವಾರಕ್ಕೆ ಈ ವ್ಯವಸ್ಥೆಯಲ್ಲಿ ನಂಬಿಕೆಯೇ ಇಲ್ಲ. ಹಾಗಿರುವಾಗ ರಾಜ್ಯ ಸರಕಾರದಿಂದ ಜನತಂತ್ರ ಆಡಳಿತ ನಿರೀಕ್ಷಿಸುವುದು ಸಾಧ್ಯವಿಲ್ಲ ಎಂದರು.
ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಾದ ಚುನಾವಣೆಗಳು ಹಣ, ಹೆಂಡ, ಜಾತಿ, ಆಮಿಷದ ಹಾವಳಿಯಿಂದ ಮಹತ್ವವನ್ನೆ ಕಳೆದುಕೊಂಡಿವೆ. ಇದೀಗ ತಾನೆ ಫಲಿತಾಂಶ ಬಂದಿರುವ ಗ್ರಾಮ ಪಂಚಾಯತ್ ನಿಂದ ಹಿಡಿದು ವಿಧಾನಸಭಾ, ಲೋಕಸಭಾ ಮತ್ತು ವಿಧಾನಪರಿಷತ್‌ನ ಎಲ್ಲ ಚುನಾವಣೆಗಳು ವಾಮಮಾರ್ಗಗಳಲ್ಲೆ ಹೆಚ್ಚಾಗಿ ನಡೆದಿವೆ ಎಂದು ಮಹದೇವ ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷವು ಘನತೆಯಿಂದ ಸ್ಪರ್ಧಿಸಿತ್ತು. ಅಕಸ್ಮಾತ್ ಒಂದೇ ಒಂದು ಸ್ಥಾನ ನಮಗೆ ದೊರಕಿಬಿಟ್ಟಿದ್ದರೆ, ನಮ್ಮನ್ನು ನಾವೇ ಅನುಮಾನದಿಂದ ನೋಡುವಂತಹ ಪರಿಸ್ಥಿತಿ ಇತ್ತು. ನಾವೇ ಎಲ್ಲೊ ಹಣ, ಹೆಂಡ ಹಂಚಿ ಗೆದಿದ್ದೇವೆ ಎಂಬ ತಿಕ್ಕಾಟಕ್ಕೆ ಸಿಲುಕಬೇಕಿತ್ತು. ಆ ಚುನಾವಣೆ ಪ್ರಾಮಾಣಿಕವಾಗಿ ನಡೆದಿದ್ದರೆ ನಮ್ಮ ಪಕ್ಷ ಕನಿಷ್ಠ 12 ಶಾಸಕ, 2 ಸಂಸದ ಸ್ಥಾನವನ್ನು ಗಳಿಸುತ್ತಿತ್ತು. ಸಿಪಿಐ ಮತ್ತು ಬಿಎಸ್ಪಿ ನಮಗಿಂತ ಹೆಚ್ಚು ಕಡೆ ಜಯಭೇರಿ ಬಾರಿಸಬೇಕಿತ್ತು ಎಂದು ಅವರು ನುಡಿದರು.
ಇಂದಿನ ಸರಕಾರ ಜನತಂತ್ರ ವ್ಯವಸ್ಥೆಯನ್ನು ಬಡುಮೇಲು ಮಾಡಿದೆ. ಪ್ರಜಾಸತ್ತೆ ನಾಮಕಾವಸ್ಥೆಗೆ ಉಸಿರಾಡುತ್ತಿದೆ. ಪ್ರಜಾಪ್ರಭುತ್ವವನ್ನು ಹೀಗೆ ಅವನತಿ ಹಾದಿಗೆ ತಳ್ಳಿರುವುದು ಹೇಯ. ದೇಶದ ಪ್ರಜಾತಂತ್ರಕ್ಕೆ ನಕ್ಸಲರಿಂದ ತೊಂದರೆ ಎಂದು ಹೇಳಲಾಗುತ್ತಿದೆ. ಆದರೆ ಅದಕ್ಕಿಂತ ಹೆಚ್ಚು ಅಪಾಯಕಾರಿಯಾಗಿರುವುದು ಈ ಸಂಘ ಪರಿವಾರದ ಸರಕಾರ ಎಂದು ದೇವನೂರು ಕಿಡಿಕಾರಿದರು.
ವೆಂಕಟೇಶಮೂರ್ತಿಗೆ ಬೆಂಬಲ: ರಾಜ್ಯದ ಬುದ್ಧಿಜೀವಿಗಳ ಮನೆಯಂದೆ ಪ್ರತಿಬಿಂಬಿತವಾಗಿರುವ ಮೇಲ್ಮನೆಯ ದಕ್ಷಿಣ ಪದವೀಧರರ ಕ್ಷೇತ್ರಕ್ಕೆ ಜೂನ್ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಪಕ್ಷೇತರರಾಗಿರುವ ವೆಂಕಟೇಶ ಮೂರ್ತಿ ಅವರನ್ನು ತಮ್ಮ ಪಕ್ಷ ಬೆಂಬಲಿಸಲಿದೆ ಎಂದು ದೇವನೂರು ಮಹದೇವ ಪ್ರಕಟಿಸಿದರು.
ರೈತ ಚಳವಳಿ ನಾಯಕ ದಿವಂಗತ ಎಂ.ಎನ್.ನಂಜುಂಡಸ್ವಾಮಿ ಅವರ ಒಡನಾಡಿ, ಪ್ರಗತಿಪರ ಚಿಂತಕ ಮೂರ್ತಿ ಅವರು ಮೇಲ್ಮನೆಗೆ ಸೂಕ್ತ ಪ್ರತಿನಿಧಿಯಾಗಿದ್ದಾರೆ. ಮತದಾರರು ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಪ್ರಾಶಸ್ತ್ಯ ಮತದಾನದಲ್ಲಿ ಪಾಲ್ಗೊಳ್ಳುವವರು ಎಲ್ಲ ಅಭ್ಯರ್ಥಿಗಳಿಗೂ ಪ್ರಾಶಸ್ತ್ಯ ನೀಡಬೇಕು. ಕೇವಲ ಒಬ್ಬರಿಗೇ ಮಾತ್ರವೇ ಮತ ಹಾಕಿ ಉಳಿದವರನ್ನು ಕೈಬಿಡುವುದು ಸಂವಿಧಾನ ಬಾಹಿರ ಎಂದ ಅವರು, ಎಲ್ಲರಿಗೂ ಪ್ರಾಶಸ್ತ್ಯ ನೀಡುವುದರಿಂದ ಹಣ ಕೊಟ್ಟವರಿಗೆ ಒಂದು, ವಸ್ತ್ರ ನೀಡಿದವರಿಗೆ ಎರಡನೆಯದು ಎಂದರೂ ಕನಿಷ್ಠ ಮೂರನೆ ಪ್ರಾಶಸ್ತ್ಯವಾದರೂ ಪ್ರಾಮಾಣಿಕ ಉಮೇದುವಾರರಿಗೆ ಸಿಗಲಿ ಎಂಬುದು ನಮ್ಮ ಉದ್ದೇಶ ಎಂದು ಮಹದೇವ ತಿಳಿಸಿದರು.
ವಾಸ್ತವವಾಗಿ ಮೇಲ್ಮನೆಗೆ ಬುದ್ಧಿಜೀವಿಗಳು, ಸಮಾಜ ಸೇವಕರು, ವಿದ್ವಾಂಸರು, ಪ್ರಗತಿಪರ ರನ್ನು ನಾಮಕರಣ ಮಾಡಬೇಕು. ಆದರೆ ಬಿಜೆಪಿಯು ಹಣ, ಜಾತಿ ಆಧರಿಸಿ ನಾಮ ನಿರ್ದೇಶನ ಮಾಡುತ್ತಿದೆ. ಚುನಾವಣೆ ಮೂಲಕ ಆಯ್ಕೆಯಾಗಬೇಕಾದ ಸ್ಥಾನಗಳಿಗೂ ಇದೇ ಮಾನದಂಡ ಅನುಸರಿಸುವುದಾದರೆ ವಿಧಾನ ಪರಿಷತ್ ವ್ಯವಸ್ಥೆಯನ್ನೇ ರದ್ದುಪಡಿಸುವುದು ಸೂಕ್ತ ಎಂದು ಅವರು ಪ್ರತಿಪಾದಿಸಿದರು.
ಚುನಾವಣಾ ಸುಧಾರಣೆಗೆ ಹೋರಾಟದ ಹಿನ್ನೆಲೆಯಲ್ಲಿರುವ ಎಲ್ಲ ಪಕ್ಷಗಳು ಸೇರಿ ಮಾರ್ಗ ಗಳನ್ನು ರೂಪಿಸಲು ಚಿಂತನೆ ಮಾಡಬೇಕು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಗ್ರಾಮ ಪಂಚಾಯತ್ ಚುನಾವಣೆಗಳನ್ನು ನಡೆಸುವ ಮೂಲಕ ರಾಜಕೀಯ ಪಕ್ಷಗಳು ಮುಂದಿನ ದಿನಗಳಲ್ಲಿ ಗ್ರಾಮೀಣ ಮಟ್ಟದಲ್ಲಿ ತಮ್ಮ ಪಕ್ಷಗಳ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಏಜೆಂಟರನ್ನು ಸೃಷ್ಟಿಸಿಕೊಂಡಿವೆ ಎಂದು ಸರ್ವೋದಯ ಕರ್ನಾಟಕ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದರು.
ಗ್ರಾ.ಪಂ. ಚನಾವಣೆಯಲ್ಲಿ ಕೆಲವು ಅಭ್ಯರ್ಥಿಗಳು 5ರಿಂದ 8 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದಾರೆ. ಅಷ್ಟೊಂದು ಹಣವನ್ನು ವ್ಯಯಿಸಿ ಗೆದ್ದಿದ್ದರೂ ಅವರು ಯಾವುದೋ ರಾಜಕೀಯ ಪಕ್ಷಕ್ಕೆ ಗುಲಾಮರಾಗಬೇಕಾದ ಪರಿಸ್ಥಿತಿ ಇದೆ. ಇಂದಿನ ಚುನಾವಣಾ ವ್ಯವಸ್ಥೆಯ ಅಧ್ವಾನ ಸ್ಥಿತಿ ಗಮನಿಸಿದರೆ ಪ್ರಾಮಾಣಿಕರಿಗೆ ಆತ್ಮಹತ್ಯೆ ಮಾಡಿಕೊಂಡುಬಿಡಬೇಕು ಅನಿಸುತ್ತದೆ ಎಂದು ಅವರು ನೊಂದುಕೊಂಡರು.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ: ನಗರದ ಮರಿಮಲ್ಲಪ್ಪ, ಸದ್ವಿದ್ಯಾ ವಿದ್ಯಾಸಂಸ್ಥೆಗಳು ಸೇರಿದಂತೆ ಎಲ್ಲ ಖಾಸಗಿ ಶಾಲಾ ಕಾಲೇಜುಗಳಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಮೀಸಲಾತಿ ಕಲ್ಪಿಸಬೇಕು. ಅಲ್ಲದೆ ಈ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿಗೆ ಕಡಿವಾಣ ಹಾಕಬೇಕು. ತಪ್ಪಿದರೆ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮತ್ತು ಅಭಿರುಚಿ ಗಣೇಶ್ ಉಪಸ್ಥಿರಿದ್ದರು.
May 20, 2010
Subscribe to:
Post Comments (Atom)
No comments:
Post a Comment