VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 27, 2010

ಬಳ್ಳಾರಿ ಕಟ್ಟಡ ಕುಸಿತಕ್ಕೆ 8 ಬಲಿ; ಅವಶೇಷಗಳಡಿ ಕಾರ್ಮಿಕರ ಆಕ್ರಂದನ

ಬಳ್ಳಾರಿ: ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಹಾಸ್ಟೆಲ್ ಮೇಲೆ ಹಠಾತ್ತನೆ ಕುಸಿದ ಪರಿಣಾಮ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಕಾರ್ಮಿಕರು ಅವಶೇಷಗಳಡಿಯಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ, ಹಾಗಾಗಿ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ. ಹಲವರು ಘಟನೆಯಿಂದ ಗಾಯಗೊಂಡಿದ್ದಾರೆ.

ನಿನ್ನೆ ರಾತ್ರಿ 8.30ರ ಹೊತ್ತಿಗೆ ಗಾಂಧಿನಗರ ಎರಡನೇ ಕ್ರಾಸ್‌ನಲ್ಲಿನ ನಿರ್ಮಾಣ ಹಂತದಲ್ಲಿದ್ದ ಆರು ಮಹಡಿಯ ಖಾಸಗಿ ಅಪಾರ್ಟ್‌ಮೆಂಟ್ ಕುಸಿದು ಬಿದ್ದಿತ್ತು. ಈ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಕಾರ್ಮಿಕರು ಕಟ್ಟಡದ ಕೆಳ ಅಂತಸ್ತಿನಲ್ಲಿದ್ದರು ಎಂದು ಮೂಲವೊಂದು ತಿಳಿಸಿದೆ.

ಈ ಕಟ್ಟಡಕ್ಕೆ ಒತ್ತಿಕೊಂಡೇ ಇದ್ದ ಹಾಸ್ಟೆಲ್ ಮೇಲೂ ಕಟ್ಟಡದ ಭಾಗ ಬಿದ್ದಿರುವುದರಿಂದ ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಟ್ಟಡದೊಳಗೆ 25ಕ್ಕೂ ಹೆಚ್ಚು ಕಾರ್ಮಿಕರು ಸಿಕ್ಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಪುಣೆ, ಬೆಂಗಳೂರಿನಿಂದ ಆಗಮಿಸಿದ್ದ ವಿಶೇಷ ರಕ್ಷಣಾ ತಂಡಗಳಿಂದ ಬುಧವಾರ ರಾತ್ರಿಯವರೆಗೂ ಭರದಿಂದ ರಕ್ಷಣಾ ಕಾರ್ಯಗಳು ನಡೆಯುತ್ತಿದೆ.

ಸಾವನ್ನಪ್ಪಿದ ಎಂಟು ಮಂದಿಯಲ್ಲಿ ರುದ್ರೇ ಗೌಡ ಎಂಬ ವಿದ್ಯಾರ್ಥಿಯೊಬ್ಬನೂ ಸೇರಿದ್ದಾನೆ. ರಜೆಯಿದ್ದ ಕಾರಣ ಹಾಸ್ಟೆಲ್‌ನಲ್ಲಿ ಕಡಿಮೆ ವಿದ್ಯಾರ್ಥಿಗಳಿದ್ದರು, ಇಲ್ಲದೆ ಇರುತ್ತಿದ್ದರೆ ಹೆಚ್ಚಿನ ಅನಾಹುತ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ನಿನ್ನೆಯಿಂದಲೇ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಐವರನ್ನು ಇದುವರೆಗೆ ರಕ್ಷಿಸಲಾಗಿದೆ.ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಕೆಲವರು ತಲೆಗೆ ಪೆಟ್ಟಾಗಿರುವುದು ಮತ್ತು ಉಸಿರಾಟದ ತೊಂದರೆಯಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಲ್ಲಿಗೆ ಕನಿಷ್ಠ 12 ಮಂದಿ ದಾಖಲಾಗಿದ್ದಾರೆ. ಇವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಹೃದಯವಿದ್ರಾವಕ ಚಿತ್ರಣ...
ಕಟ್ಟಡ ಕುಸಿದು ಬಿದ್ದ ಕೂಡಲೇ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ ಕಾಣೆಯಾದವರಿಗೆ ಹುಡುಕಾಟ ಆರಂಭಿಸಿದಾಗ ಕೆಲವರು ಕೈಕಾಲುಗಳನ್ನು ಕಳೆದುಕೊಂಡಿದ್ದರು. ಒಂದೆರಡು ಮಂದಿ ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡು ಅಲ್ಲೇ ಪ್ರಾಣ ತ್ಯಜಿಸಿದ್ದರು. ಕೆಲವರ ಶವಗಳು ಹೊರಗಡೆ ಕಾಣುತ್ತಿವೆಯಾದರೂ ಇನ್ನೂ ಅವುಗಳನ್ನು ಹೊರತೆಗೆಯಲಾಗಿಲ್ಲ. ಜೆಸಿಬಿಗಳು ನಿನ್ನೆ ರಾತ್ರಿಯಿಂದಲೇ ಅವಶೇಷಗಳನ್ನು ತೆರವುಗೊಳಿಸುತ್ತಿದ್ದು, ಇನ್ನೂ ದಡಕ್ಕೆ ತಲುಪಿಲ್ಲ.

ಸರಕಾರ ಸೂಕ್ತ ಕ್ರಮ...
ಕಟ್ಟಡ ಕುಸಿತಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಪ್ರಾಥಮಿಕ ಮಾಹಿತಿಗಳು ಹೇಳಿದ್ದು, ಇಂಜಿನಿಯರ್ ಸೋಮಶೇಖರ್ ಅವರ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ ಎಂದು ಜಿಲ್ಲಾಡಳಿತ ಹೇಳಿದೆ.

ಅಲ್ಲದೆ ಈ ಕಟ್ಟಡದ ನಿರ್ಮಾಣ ಕಾರ್ಯವನ್ನೂ ಸ್ಥಗಿತಗೊಳಿಸಲಾಗುತ್ತದೆ. ನಿಯಮಾವಳಿಗಳ ಪ್ರಕಾರ ಕಟ್ಟಡ ನಿರ್ಮಾಣ ಮಾಡದ ಕಾರಣ ಕಠಿಣ ಕ್ರಮಗಳನ್ನು ಮಾಲಕ ಮೇಲೆ ತೆಗೆದುಕೊಳ್ಳಲಾಗುತ್ತದೆ. ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಸಚಿವ ಸೋಮಶೇಖರ ರೆಡ್ಡಿಯವರು ತಿಳಿಸಿದ್ದಾರೆ.

webdunia

No comments: