
ಆತಿಥೇಯ ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯವನ್ನು ಪ್ರವಾಸಿ ಭಾರತ ತಂಡ ಹತ್ತು ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದ್ದು, ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0ರ ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿಕೊಂಡಿದೆ.
228/3 ಎಂಬಲ್ಲಿದ್ದ ದಿನದಾಟ ಆರಂಭಿಸಿದ ಬಾಂಗ್ಲಾದೇಶ ಊಟದ ವಿರಾಮದ ನಂತರ 90.3 ಓವರುಗಳಲ್ಲಿ 312 ರನ್ನುಗಳಿಗೆ ಆಲೌಟಾಯಿತು. ನಂತರ ಗೆಲುವಿಗಾಗಿ ಎರಡು ರನ್ನುಗಳನ್ನು ಅಜೇಯವಾಗಿ ಬೆನ್ನತ್ತಿದ ಭಾರತ ಹತ್ತು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.
ಭಾರತದ ಗೆಲುವಿಗಾಗಿ ಅಗತ್ಯವಿದ್ದ ಎರಡು ರನ್ನುಗಳು ಇತರೆ ರೂಪದಲ್ಲಿ ಬಂದಿದ್ದವು.
ದಿನದಾಟದಲ್ಲಿ ಬಾಂಗ್ಲಾಕ್ಕೆ ಮಾಜಿ ನಾಯಕ ಮೊಹಮ್ಮದ್ ಅಶ್ರಫುಲ್ (25) ಹಾಗೂ ನೈಟ್ ವಾಚ್‌ಮ್ಯಾನ್ ಶಹಾದತ್ ಹುಸೈನ್ (40) ಉತ್ತಮ ಆರಂಭ ಒದಗಿಸಿದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾದರು.
ಒಂದು ಹಂತದಲ್ಲಿ 290/3 ಸುಸ್ಥಿತಿಯಲ್ಲಿದ್ದ ಬಾಂಗ್ಲಾ ಆನಂತರದ ಏಳು ವಿಕೆಟ್‌ಗಳನ್ನು 22 ರನ್ ಅಂತರದಲ್ಲಿ ಕಳೆದುಕೊಳ್ಳುವ ಮೂಲಕ ನಾಟಕೀಯ ಕುಸಿತ ಕಂಡಿತು.
ನಂತರ ಬಂದ ರಿಕಿಬುಲ್ ಹಸನ್ (5), ನಾಯಕ ಶಾಕಿಬ್ ಉಲ್ ಹಸನ್ (7) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರೆ ಮಹ್ಮದುಲ್ಲಾಹ್ (0), ಶಫಿಯುಲ್ ಇಸ್ಲಾಂ (0) ಮತ್ತು ರುಬೆಲ್ ಹುಸೈನ್ (0) ಶೂನ್ಯಕ್ಕೆ ಪರೇಡ್ ನಡೆಸಿದರು.
ಜಹೀರ್ ಜೀವನಶ್ರೇಷ್ಠ ಸಾಧನೆ...

ಮಾರಕ ದಾಳಿ ಸಂಘಟಿಸಿದ ಎಡಗೈ ವೇಗಿ ಜಹೀರ್ ಖಾನ್ ಒಂದೇ ಓವರ್‌ನಲ್ಲೇ ಮೂರು ವಿಕೆಟ್‌ಗಳ ಸಹಿತ ಏಳು ವಿಕೆಟ್ ಪಡೆದು ಮಿಂಚಿದರು. ಕೇವಲ 20.3 ಓವರುಗಳನ್ನು ಎಸೆದಿದ್ದ ಜಹೀರ್ 87 ರನ್ ನೀಡಿ ಏಳು ವಿಕೆಟ್ ಕಿತ್ತಿದ್ದರಲ್ಲದೆ ತಮ್ಮ ಜೀವನಶ್ರೇಷ್ಠ ಸಾಧನೆ ಮಾಡಿಕೊಂಡರು.
ಪಂದ್ಯದುದ್ಧಕ್ಕೂ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ಜಹೀರ್ ಪಂದ್ಯದಲ್ಲಿ ಒಟ್ಟು ಹತ್ತು ವಿಕೆಟ್‌ಗಳನ್ನು ಕಿತ್ತರು. ಅಲ್ಲದೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಉಳಿದಂತೆ ಪ್ರಗ್ಯಾನ್ ಓಜಾ ಎರಡು ಹಾಗೂ ಹರಭಜನ್ ಸಿಂಗ್ ಒಂದು ವಿಕೆಟ್ ಕಿತ್ತು ಮಿಂಚಿದರು.
ನಂ.1 ಪಟ್ಟ ಉಳಿಸಿಕೊಂಡ ಧೋನಿ ಬಳಗ...

ಬಾಂಗ್ಲಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ನಾಲ್ಕನೇ ದಿನದಲ್ಲೇ ವಶಪಡಿಸಿಕೊಂಡ ಟೀಮ್ ಇಂಡಿಯಾ, ಸರಣಿಯನ್ನು 2-0ರ ಅಂತರದಲ್ಲಿ ಭರ್ಜರಿಯಾಗಿ ಗೆದ್ದುಕೊಂಡಿತ್ತಲ್ಲದೆ ಐಸಿಸಿ ನೂತನ ರ‌್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ ವನ್ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ.
ಇದೀಗ ಅಗ್ರಸ್ಥಾನದಲ್ಲಿರುವ ಭಾರತ 124 ಅಂಕಗಳನ್ನು ಹೊಂದಿದೆ. ಎರಡು ಹಾಗೂ ಮೂರನೇ ಸ್ಥಾನಗಳನ್ನು ದಕ್ಷಿಣ ಆಫ್ರಿಕಾ (120) ಹಾಗೂ ಆಸ್ಟ್ರೇಲಿಯಾ (118)ತಂಡಗಳು ಹಂಚಿಕೊಂಡಿದೆ.
ಭಾರತ ತನ್ನ ಮುಂದಿನ ಟೆಸ್ಟ್ ಸರಣಿಯನ್ನು ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಆಡಳಿಯಲಿದೆ. ಸರಣಿಯು ನಾಗ್ಪುರದಲ್ಲಿ ಫೆಬ್ರವರಿ 6ರಂದು ಆರಂಭವಾಗಲಿದೆ.
webdunia
No comments:
Post a Comment