
ಮುಂಬೈ, ಜ. 13 : ಆಸೀಸ್ ನಾಡಿನಲ್ಲಿ ಕಾಂಗರೂ ಕಪಿಗಳು ಅಮಾಯಕ ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿಗಳು, ಹತ್ಯೆಗಳು, ಕಿರುಕುಳಗಳು ಮುಂದುವರೆಯುತ್ತಿರುವ ಬೆನ್ನಲ್ಲೇ ಶಿವಸೇನೆ ಮುಖಂಡ ಬಾಳಾ ಠಾಕ್ರೆ ಮಹತ್ವದ ಫರ್ಮಾನು ಹೊರಡಿಸಿದ್ದಾರೆ, ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಆಸ್ಟ್ರೇಲಿಯನ್ನರಿಗೆ ಆಟವಾಡಲು ಅವಕಾಶವನ್ನು ನಿಷೇಧಿಸಿದ್ದೇವೆ ಎಂದು ಗುಡುಗಿದ್ದಾರೆ.
ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯ ಬರೆದಿರುವ ಠಾಕ್ರೆ, ಆಸೀಸ್ ನಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿಗಳು ನಿರಂತರವಾಗಿ ನಡೆಯತೊಡಗಿವೆ, ಅದನ್ನು ನಿಲ್ಲಿಸಲು ಅಲ್ಲಿಯ ಸರಕಾರ ಸಂಪೂರ್ಣ ವಿಫಲವಾಗಿದೆ. ಈ ಕೃತ್ಯ ನಿಲ್ಲುವವರೆಗೂ ಮುಂಬೈ ಅಥವಾ ಮಹಾರಾಷ್ಟ್ರದಲ್ಲಿ ಆಸ್ಟ್ರೇಲಿಯನ್ನರು ಕ್ರಿಕೆಟ್ ಆಡುವಂತಿಲ್ಲ. ನಾವು ಸ್ವಯಂ ಘೋಷಿತವಾಗಿ ಆ ಆಟಗಾರರಿಗೆ ನಿಷೇಧ ವಿಧಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ನಮ್ಮ ಕ್ರಿಕೆಟ್ ಆಟಗಾರರಿಗೆ ರಾಷ್ಟ್ರೀಯತೆ ಕಡಿಮೆಯಾಗುತ್ತಿದೆ. ದೇಶದ ಗೌರವ, ಸಮಗ್ರತೆ ಬೆಲೆ ಕೊಡದಿರುವ ಆಟಗಾರ ಎಂತಹ ದೊಡ್ಡವನಾದರೂ ಆಂತಹ ಆಟಗಾರ ನಮಗೆ ಬೇಕಿಲ್ಲ. ನಮ್ಮತನವನ್ನು ಆಟಗಾರರು ಗಳಿಸಿಕೊಳ್ಳಬೇಕು ಎಂದು ಠಾಕ್ರೆ ಕಿವಿ ಮಾತು ಹೇಳಿದ್ದಾರೆ. ಪಾಕಿಸ್ತಾನಿ ಆಟಗಾರರನ್ನು ಈಗಾಗಲೇ ನಾವು ನಿಷೇಧಿಸಿದ್ದೇವೆ. ಕಾಶ್ಮೀರದಲ್ಲಿ ಪಾಕ್ ಬೆಂಬಲಿತ ಉಗ್ರರು ನಡೆಸುತ್ತಿರುವ ಮಾರಣಹೋಮ ನಿಲ್ಲುವವರೆಗೂ ಪಾಕಿ ಆಟಗಾರರಿಗೆ ಮರಾಠಿ ನೆಲದಲ್ಲಿ ಆಡಲು ಅವಕಾಶವಿಲ್ಲ ಎಂದು ಠಾಕ್ರೆ ಹೇಳಿದರು.
Thatskannada
No comments:
Post a Comment