ರಣಜಿ ಟ್ರೋಫಿ ಗೆಲುವಿಗೆ ಮುಂಬೈ ನೀಡಿದ್ದ 338ರ ಬೃಹತ್ ಗುರಿಯೆದುರು ಆರಂಭಿಕ ಕುಸಿತ ಕಂಡಿದ್ದ ಕರ್ನಾಟಕಕ್ಕೆ ಮನೀಷ್ ಪಾಂಡೆ ಮತ್ತು ಗಣೇಶ್ ಸತೀಶ್ ತಮ್ಮ ಆಕರ್ಷಕ ಆಟದ ಮೂಲಕ ಭರವಸೆ ಹುಟ್ಟಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್:
ಮುಂಬೈ ಮೊದಲ ಇನ್ನಿಂಗ್ಸ್ - 233
ಕರ್ನಾಟಕ ಮೊದಲ ಇನ್ನಿಂಗ್ಸ್ - 130
ಮುಂಬೈ ಎರಡನೇ ಇನ್ನಿಂಗ್ಸ್ - 234
ಕರ್ನಾಟಕ ಎರಡನೇ ಇನ್ನಿಂಗ್ಸ್ - 135/3 (ಗೆಲುವಿಗಿನ್ನೂ ಬೇಕು 203 ರನ್)
46 ರನ್ನುಗಳಿಗೆ ಮೂರು ಪ್ರಮುಖ ವಿಕೆಟುಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಜತೆಯಾದ ಪಾಂಡೆ (59*) ಮತ್ತು ಸತೀಶ್ (40) ಮುಂಬೈ ಬೌಲರುಗಳ ಬೆವರಿಳಿಸಿದ್ದಾರೆ. 62 ಎಸೆತಗಳನ್ನೆದುರಿಸಿದ ಪಾಂಡೆ ಅರ್ಧಶತಕದ ಮೂಲಕ ಆಕ್ರಮಣಕಾರಿ ಆಟಕ್ಕೆ ಮುಂದಾದರೆ, ಸತೀಶ್ ಅತ್ಯುತ್ತಮ ಸಾಥ್ ನೀಡುತ್ತಾ ತಾಳ್ಮೆಯ ಪ್ರದರ್ಶನವಿತ್ತರು.
ಮುರಿಯದ ನಾಲ್ಕನೇ ವಿಕೆಟ್ ಜತೆಯಾಟದಲ್ಲಿ ಪಾಂಡೆ-ಸತೀಶ್ 22.1 ಓವರುಗಳಲ್ಲಿ 89 ಅಮೂಲ್ಯ ರನ್ನುಗಳನ್ನು ಕಲೆ ಹಾಕಿದ್ದಾರೆ. ಪಾಂಡೆ ಒಟ್ಟು 71 ಎಸೆತಗಳಿಂದ 9 ಬೌಂಡರಿ ಸಹಿತ 59 ರನ್ ದಾಖಲಿಸಿದರೆ, ಸತೀಶ್ 125 ಎಸೆತಗಳಿಂದ 5 ಬೌಂಡರಿಗಳೊಂದಿಗೆ 40 ರನ್ ಮಾಡಿದ್ದಾರೆ.
ಮುರಳೀಧರನ್ ಗೌತಮ್ ಶೂನ್ಯಕ್ಕೆ ಪತನಗೊಂಡ ಬಳಿಕ ಕೆ.ಬಿ. ಪವನ್ (23) ತಾಳ್ಮೆಯ ಆಟಕ್ಕೆ ಮುಂದಾಗಿ ಆಸರೆಯಾಗಿದ್ದರಾದರೂ ಅಜಿತ್ ಅಗರ್ಕರ್ ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿ ತನ್ನ ವಿಕೆಟುಗಳ ಸಂಖ್ಯೆಯನ್ನು ಎರಡಕ್ಕೀರಿಸುವಲ್ಲಿ ಯಶಸ್ವಿಯಾಗಿದ್ದರು.
ಬಳಿಕ ಕ್ರೀಸಿಗೆ ಬಂದ ನಾಯಕ ರಾಬಿನ್ ಉತ್ತಪ್ಪ (4) ಮತ್ತೆ ಒಂದಂಕಿಗೆ ತನ್ನನ್ನು ಸೀಮಿತಗೊಳಿಸಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾದರು. ಅವರನ್ನು ಕೂಡ ಪೆವಿಲಿಯನ್‌ಗೆ ಕಳುಹಿಸಿದ್ದು ಅಗರ್ಕರ್. ಉತ್ತಪ್ಪ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 9 ರನ್ನಿಗೆ ವಿಕೆಟ್ ಒಪ್ಪಿಸಿದ್ದರು.
ಆರಂಭದಲ್ಲೇ ಮೂರು ಪ್ರಮುಖ ವಿಕೆಟುಗಳನ್ನು ಕೈ ಚೆಲ್ಲಿದ ಕರ್ನಾಟಕ ಕೈಗೆ ಬಂದಿದ್ದ ತುತ್ತನ್ನು ಬಹುತೇಕ ಕಳೆದುಕೊಳ್ಳುವ ಮುನ್ಸೂಚನೆಗಳನ್ನು ನೀಡುತ್ತಿತ್ತು. ಆದರೆ ಪಾಂಡೆ-ಸತೀಶ್ ಇದನ್ನು ಸುಳ್ಳು ಮಾಡುವ ನಿರೀಕ್ಷೆಗಳನ್ನು ಹುಟ್ಟಿಸುವಂತೆ ಮಾಡಿದ್ದಾರೆ.
ಬೃಹತ್ ಮೊತ್ತವನ್ನೇ ಗುರಿಯಾಗಿ ಪಡೆದಿರುವ ರಾಬಿನ್ ಉತ್ತಪ್ಪ ಪಡೆಗೆ ಎರಡು ದಿನಗಳ ಅವಕಾಶವಿದ್ದರೂ, ವಿಕೆಟ್ ಉಳಿಸಿಕೊಳ್ಳುವುದೇ ಮಹತ್ವದ್ದಾಗಿದೆ. ಈ ಕಾರಣದಿಂದ ತೀವ್ರ ಒತ್ತಡದಿಂದಲೇ ಕರ್ನಾಟಕ ತನ್ನ ಎರಡನೇ ಇನ್ನಿಂಗ್ಸ್‌ನ್ನು ನಾಳೆಗೆ ಮುಂದೂಡಿದೆ.
ಮುಂಬೈ ಇನ್ನಿಂಗ್ಸ್...
ವಿನಯ್ ಕುಮಾರ್ ಮತ್ತು ಅಭಿಮನ್ಯು ಮಿಥುನ್ ಪ್ರಖರ ಬೌಲಿಂಗ್ ಹೊರತಾಗಿಯೂ ಮುಂಬೈಯನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಅಲ್ಪಮೊತ್ತಕ್ಕೆ ಕಟ್ಟಿ ಹಾಕಲು ವಿಫಲವಾದ ಕರ್ನಾಟಕ 234ಕ್ಕೆ ಆಲೌಟ್ ಮಾಡಿತ್ತು. ಆ ಮೂಲಕ ಉತ್ತಪ್ಪ ಪಡೆ 338 ರನ್ನುಗಳ ಗೆಲುವಿನ ಗುರಿಯನ್ನು ಪಡೆದಿತ್ತು.
ನಿನ್ನೆಯೇ ಐದು ವಿಕೆಟುಗಳನ್ನು ಕಳೆದುಕೊಂಡಿದ್ದ ರಮೇಶ್ ಪೊವಾರ್ ನೇತೃತ್ವದ ಪ್ರವಾಸಿ ತಂಡಕ್ಕೆ ಇಂದು ಧವಳ್ ಕುಲಕರ್ಣಿ (87) ಮತ್ತು ಅಭಿಷೇಕ್ ನಾಯರ್ (50) ತಮ್ಮ ಅರ್ಧಶತಕಗಳ ಮೂಲಕ ಆಸರೆಯಾಗಿದ್ದರು. ಕುಲಕರ್ಣಿಯವರಂತೂ ಕ್ರೀಸಿಗಂಟಿಕೊಂಡು ಕೊನೆಯ ಹಂತದವರೆಗೂ ಕರ್ನಾಟಕ ಬೌಲರುಗಳಿಗೆ ಕಬ್ಬಿಣದ ಕಡಲೆಯಾಗಿದ್ದರು.
ರಣಜಿ ಟ್ರೋಫಿ ಫೈನಲ್ ಮೂರನೇ ದಿನದಾರಂಭದಲ್ಲೇ ವಿಕೆಟ್ ಕಿತ್ತು ಸವಾರಿ ನಡೆಸುವ ಕರ್ನಾಟಕದ ಆಸೆಯನ್ನು ಮುಂಬೈ ನಿರಾಕರಿಸುತ್ತಲೇ ಮಧ್ಯಾಹ್ನದವರೆಗೆ ಮುಂದುವರಿಯಿತು. 300ಕ್ಕೂ ಹೆಚ್ಚು ಮುನ್ನಡೆ ಪಡೆದು ಕರ್ನಾಟಕವನ್ನು ಒತ್ತಡಕ್ಕೆ ಸಿಲುಕಿಸುವ ಮುಂಬೈ ತಂತ್ರ ಬಹುತೇಕ ಯಶಸ್ವಿಯಾಯಿತು.
ಇಂದು ಅಭಿಷೇಕ್ ನಾಯರ್ (50), ಅಜಿತ್ ಅಗರ್ಕರ್ (4), ಇಕ್ಬಾಲ್ ಅಬ್ದುಲ್ಲಾ (15), ಧವಳ್ ಕುಲಕರ್ಣಿ (87), ಆವಿಷ್ಕಾರ್ ಸಾಲ್ವಿ (0) ವಿಕೆಟುಗಳು ಪತನವಾದವು. 28 ರನ್ ಗಳಿಸಿದ ರಮೇಶ್ ಪೊವಾರ್ ಅಜೇಯರಾಗುಳಿದರು.
83.3 ಓವರುಗಳಲ್ಲಿ 234 ರನ್ನುಗಳಿಗೆ ಸರ್ವಪತನ ಕಂಡ ಮುಂಬೈ 338 ರನ್ನುಗಳ ಮುನ್ನಡೆ ಪಡೆದುಕೊಂಡಿತು.
ಎರಡನೇ ಇನ್ನಿಂಗ್ಸ್‌ನಲ್ಲಿ ಆರು ವಿಕೆಟುಗಳನ್ನು 71 ರನ್ನುಗಳಿಗೆ ಪಡೆದ ಅಭಿಮನ್ಯು ಮಿಥುನ್ ಮಿಂಚಿದ್ದಾರೆ. ವಿನಯ್ ಕುಮಾರ್ ಪಾಲಿಗೆ ಮೂರು ಹಾಗೂ ಸುನಿಲ್ ಜೋಶಿ ಒಂದು ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್‌ನಲ್ಲಿ 233ಕ್ಕೆ ಸರ್ವಪತನ ಕಂಡಿದ್ದ ಮುಂಬೈ, ಕರ್ನಾಟಕವನ್ನು 130 ರನ್ನುಗಳಿಗೇ ಸೀಮಿತಗೊಳಿಸಿತ್ತು. ರಾಹುಲ್ ದ್ರಾವಿಡ್ ಅನುಪಸ್ಥಿತಿಯಲ್ಲಿ ಮನೀಷ್ ಪಾಂಡೆ ಮತ್ತು ಗಣೇಶ್ ಸತೀಶ್ ಅವರಂತಹ ಪ್ರಭಾವಿ ದಾಂಡಿಗರೂ ವಿಫಲರಾಗಿದ್ದರು. ಆ ಮೂಲಕ 103 ರನ್ನುಗಳ ಇನ್ನಿಂಗ್ಸ್ ಹಿನ್ನಡೆ ಕರ್ನಾಟಕಕ್ಕೆ ಒದಗಿತ್ತು.
webdunia
Subscribe to:
Post Comments (Atom)
No comments:
Post a Comment