ಹರ್ಯಾಣದ ಮಾಜಿ ಪೊಲೀಸ್ ಅಧಿಕಾರಿಯಂತೆ ಕರ್ನಾಟಕದಲ್ಲೂ ಐಎಎಸ್ ಅಧಿಕಾರಿಯೊಬ್ಬರು ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಆದರೂ ಅವರ ವಿರುದ್ಧ ಸರಕಾರ ಕ್ರಮ ಕೈಗೊಂಡಿಲ್ಲ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಕೆಲ ದಿನಗಳ ಹಿಂದೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದ್ದರು.
ಅದೀಗ ಹಿರಿಯ ಐಎಎಸ್ ಅಧಿಕಾರಿ ಡಿ.ಕೆ. ರಂಗಸ್ವಾಮಿ ಎಂಬುದು ಬಹಿರಂಗವಾಗಿದೆ. ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿದ್ದಾಗ ವಿಧವೆ ಮಹಿಳೆಯೊಬ್ಬರಿಂದ ದೈಹಿಕ ಸುಖ ಬಯಸಿದ್ದರು ಎಂದು ಆರೋಪಿಸಲಾಗಿದ್ದು, ಮಾಹಿತಿ ಹಕ್ಕು ಕಾಯ್ದೆಯಿಂದಾಗಿ ಬಯಲಿಗೆ ಬಂದಿದೆ.
ಆರ್. ಯಾಮಿನಿ ಎಂಬವರೇ ರಂಗಸ್ವಾಮಿಯವರಿಂದ ಚಿತಾವಣೆಗೊಳಗಾದ ವಿಧವೆ. ಎರಡು ವರ್ಷಗಳ ಹಿಂದೆ ಗಂಡ ಸಾವನ್ನಪ್ಪಿದ ನಂತರ ಜಮೀನಿನ ದಾಖಲೆಗಳ ವರ್ಗಾವಣೆಗೆಂದು ಜಿಲ್ಲಾಧಿಕಾರಿ ಬಳಿ ತೆರಳಿದ್ದಾಗ ಅಸಭ್ಯವಾಗಿ ವರ್ತಿಸಿದ್ದರು ಎಂದು ಆರೋಪಿಸಲಾಗಿದೆ.
ಅವರ ಬಯಕೆಯನ್ನು ಪೂರೈಸಲು ನಾನು ನಿರಾಕರಿಸಿದ ಕಾರಣ ತನ್ನದೇ ಆದೇಶವನ್ನು ಮೂರು ಬಾರಿ ಅವರು ಬದಲಾಯಿಸಿದ್ದರು. ನಾನು ಅವರ ಆಸೆಗೆ ತಣ್ಣೀರೆರಚಿದ್ದರಿಂದ ನನಗೆ ಕಿರುಕುಳ ನೀಡಿದ್ದಲ್ಲದೆ, ನನ್ನ ವಿರುದ್ಧ ಆದಾಯಕ್ಕೆ ಸಂಬಂಧಿಸಿದಂತೆ ಸಿಸಿಬಿಯಲ್ಲಿ ಪ್ರಕರಣವೊಂದನ್ನು ಕೂಡ ದಾಖಲಿಸಿದರು. ಆದರೆ ನಾನು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದೆ ಎಂದು ಯಾಮಿನಿ ಹೇಳಿದ್ದಾರೆಂದು 'ಸಿಎನ್‌ಎನ್-ಐಬಿಎನ್' ವಾರ್ತಾವಾಹಿನಿ ವರದಿ ಮಾಡಿದೆ.
ಜಿಲ್ಲಾಧಿಕಾರಿ ವಿರುದ್ಧ ಯಾಮಿನಿ ದೂರು ನೀಡಿದ ಬಳಿಕ ಕಂದಾಯ ಕಾರ್ಯದರ್ಶಿ ಎಸ್.ಎಂ. ಜಾಮ್ದಾರ್ ಸೂಕ್ತ ತನಿಖೆ ನಡೆಸಿ ರಂಗಸ್ವಾಮಿಯವರನ್ನು ಅಮಾನತುಗೊಳಿಸುವಂತೆ ಶಿಫಾರಸು ಮಾಡಿದ್ದರು. ಆದರೆ ರಂಗಸ್ವಾಮಿ ಹಲವು ಗಣ್ಯ ವ್ಯಕ್ತಿಗಳ ಸಂಪರ್ಕ ಹೊಂದಿದ್ದರಿಂದ ಅವರ ವಿರುದ್ಧ ಯಾವುದೇ ಕ್ರಮಗಳು ಜಾರಿಯಾಗಲಿಲ್ಲ. ಇದೇ ಹಿನ್ನೆಲೆಯಲ್ಲಿ ಬಲಿಪಶು ವಿಧವೆ ಲೋಕಾಯುಕ್ತರಲ್ಲಿ ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ.
ನಾನು ಸರಕಾರಕ್ಕೆ ಹಲವು ಬಾರಿ ಪತ್ರ ಬರೆದರೂ ಕ್ರಮ ಕೈಗೊಳ್ಳುವ ಭರವಸೆ ಬಂತೇ ಹೊರತು ಯಾವುದೇ ಧನಾತ್ಮಕ ಬೆಳವಣಿಗೆ ಕಂಡು ಬರಲಿಲ್ಲ. ಅದರ ಬದಲಿಗೆ ರಂಗಸ್ವಾಮಿಯವರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಯಿತು. ಈಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಸರಕಾರ ಹೇಳುತ್ತಿದೆ ಎಂದು ಲೋಕಾಯುಕ್ತರು ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ರಂಗಸ್ವಾಮಿ ವಿರುದ್ಧ ಕ್ರಮಕ್ಕಾಗಿ ಯಾಮಿನಿಯವರು ಕಳೆದೆರಡು ವರ್ಷಗಳಿಂದ ಅವಿರತ ಹೋರಾಟ ಮಾಡುತ್ತಿದ್ದರೂ ಸರಕಾರ ಇನ್ನೂ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗುತ್ತಿರುವ ಹೊತ್ತಿನಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ.
ಸಚಿವಾಲಯದ ಮೂಲಗಳ ಪ್ರಕಾರ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಲಾಗುತ್ತದೆ. ಈ ಸಂಬಂಧ ಅಧಿಕೃತ ಆದೇಶ ಇನ್ನಷ್ಟೇ ಹೊರ ಬೀಳಬೇಕಿದೆ.
ರಂಗಸ್ವಾಮಿಯವರನ್ನು ಅಮಾನತುಗೊಳಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸುತ್ತಾ, ಅಮಾನತುಗೊಳಿಸಿದರೂ ಅವರು ಶೇ.75ರಷ್ಟು ವೇತನ ಪಡೆಯುತ್ತಾರೆ; ಪ್ರಸಕ್ತ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವರು ಲೋಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಸಾಕ್ಷ್ಯನಾಶ ಅಥವಾ ಇನ್ನಿತರ ಸಾಧ್ಯತೆಗಳು ಕಡಿಮೆಯಿದೆ ಎಂದಿದ್ದಾರೆ.
Source - Webdunia
Jan 7, 2010
Subscribe to:
Post Comments (Atom)
No comments:
Post a Comment