ಬೆಂಗಳೂರು, ಜ. 14 : ಸೂಕ್ತ ಸಾಕ್ಷ್ಯಾಧಾರ ಹಾಗೂ ಮಾಹಿತಿ ದೊರೆತಲ್ಲಿ ಸಚಿವರ ಮೇಲೂ ದಾಳಿ ಕೈಗೊಳ್ಳುವುದಾಗಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ತಿಳಿಸಿದರು. ಶ್ರೀ ಭಗವಾನ್ ಮಹಾವೀರ ಜೈನ್ ಕಾಲೇಜಿನ ಕನ್ನಡ ವೇದಿಕೆ ಏರ್ಪಡಿಸಿದ್ದ ಜಾಗೃತಿ ಹಬ್ಬ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಇಲಿ ಹಿಡಿದು ಹುಲಿಗಳನ್ನು ಬಿಡುತ್ತಾರೆ ಎಂಬ ಆರೋಪವನ್ನು ತಾವು ಒಪ್ಪುವುದಿಲ್ಲ. ಇಲ್ಲಿಯವರೆಗೆ ಅಧಿಕಾರಿಗಳು, ಎಂಜಿನಿಯರ್‌ಗಳು, ಶಾಸಕರ ಮೇಲೆ ದಾಳಿ ನಡೆಸಿದ್ದೇವೆ. ಅವಕಾಶ ಸಿಕ್ಕರೆ ಸಚಿವರ ಮೇಲೂ ದಾಳಿ ಕೈಗೊಳ್ಳುತ್ತೇವೆ ಎಂದು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು.
ಖಾಸಗಿ ಕಚೇರಿಗಳ ಮೇಲೆ ದಾಳಿ ನಡೆಸಲು ತಮಗೆ ಅಧಿಕಾರವಿಲ್ಲ.ಆದರೆ, ಸರಕಾರಿ ಅಧಿಕಾರಿಗಳ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವ ಖಾಸಗಿ ವ್ಯಕ್ತಿಗಳನ್ನು ಬಂಧಿಸಬಹುದು. ಭಾರತೀಯರು ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿರುವ ಹಣದ ಬಡ್ಡಿಯಲ್ಲಿ ದೇಶದ 619 ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬಹುದು. ಜತೆಗೆ, ದೇಶವನ್ನು ತೆರಿಗೆ ಮುಕ್ತಗೊಳಿಸಬಹುದು ಎಂದು ಅಭಿಪ್ರಾಯಪಟ್ಟರು.
ಶಿಕ್ಷಿಸುವ ಅಧಿಕಾರ ಬೇಡ : ಪರಮಾಧಿಕಾರ ನೀಡುತ್ತೇವೆ ಎನ್ನುತ್ತ ಕಾಲ ಕಳೆಯುವುದು ಸರಿಯಲ್ಲ. ಸರಕಾರ ಲೋಕಾಯುಕ್ತ ಸಂಸ್ಥೆಯನ್ನು ನಂಬಬೇಕು ಇಲ್ಲವೇ ಮುಚ್ಚಬೇಕು. ನಾನು ರಾಜೀನಾಮೆ ನೀಡಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತೇನೆ. ಶಿಕ್ಷಿಸುವ ಅಧಿಕಾರ ತಮಗೆ ಬೇಡ. ಆರೋಪಿಗಳನ್ನು ಕೋರ್ಟ್ ಮೆಟ್ಟಿಲು ಹತ್ತಿಸಲು ಅಧಿಕಾರ ನೀಡಿ ಸಾಕು ಎಂದು ಸರಕಾರಕ್ಕೆ ಮನವಿ ಮಾಡಿದರು. ನ್ಯಾಯಾಂಗದಲ್ಲೂ ಸುಧಾರಣೆ ಆಗಬೇಕು. ಎಲ್ಲ ನ್ಯಾಯಾಧೀಶರೂ ತಮ್ಮ ಆಸ್ತಿ ವಿವರ ಪ್ರಕಟಿಸಬೇಕು. ನ್ಯಾಯಾಂಗ ದಲ್ಲಿ ಭ್ರಷ್ಟಾಚಾರ ನಡೆದಾಗ ಇಲ್ಲವೇ ಭ್ರಷ್ಟರು ಸಿಕ್ಕಿಬಿದ್ದಾಗ ವಿಚಾರಣೆಗೆ ಆಯೋಗವೊಂದು ರಚನೆಯಾಗಬೇಕು. ವಿಚಾರಣೆ ನಂತರ ರಾಷ್ಟ್ರಪತಿಗೆ ವರದಿ ಸಲ್ಲಿಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ತಿಳಿಸಿದರು.
ಲೋಕಾಯುಕ್ತ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಲೋಪದೋಷಗಳಿವೆ ಎಂಬ ವಿದ್ಯಾರ್ಥಿನಿಯೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಲೋಕಾಯುಕ್ತದಲ್ಲಿ ಎಲ್ಲವೂ ಸರಿಯಿದೆ ಎಂದು ಭಾವಿಸಬೇಕಿಲ್ಲ. ಇಲ್ಲೂ ಸಣ್ಣಪುಟ್ಟ ಲೋಪದೋಷಗಳಿವೆ. ಇದು ಭ್ರಷ್ಟರ ವಿರುದ್ಧ ಮಾತ್ರ ಹೋರಾಡುವ ಸಂಸ್ಥೆಯಲ್ಲ. ಬದಲಿಗೆ, ಆಡಳಿತದಲ್ಲಿನ ತಪ್ಪು ಸರಿಪಡಿಸುವ ಜವಾಬ್ದಾರಿಯೂ ಸಂಸ್ಥೆಯ ಮೇಲಿದೆ ಎಂದು ವಿವರಿಸಿದರು.
thatskannada
Jan 14, 2010
Subscribe to:
Post Comments (Atom)
No comments:
Post a Comment