ನವದೆಹಲಿ, ಜ. 13 : ಕಚ್ಚಾ ತೈಲ ಬೆಲೆ ಹೆಚ್ಚಾಗಿರುವುದರಿಂದ ಕೇಂದ್ರ ಪೆಟ್ರೋಲಿಯಂ ಇಲಾಖೆ ಪೆಟ್ರೋಲ್ ದರ ಹೆಚ್ಚಿಸುವ ಚಿಂತನೆ ನಡೆಸಿದೆ. ಪ್ರಧಾನಮಂತ್ರಿ ಬಳಿ ಈಗಾಗಲೇ ಈ ಬಗ್ಗೆ ಪ್ರಸ್ತಾಪಿಸಲಾಗಿದೆ. ಅವರು ಹಸಿರು ನಿಶಾನೆ ತೋರಿದರೆ ಒಂದು ಲೀಟರ್ ಪೆಟ್ರೋಲ್ ಗೆ ಮೂರು ರುಪಾಯಿ ಹೆಚ್ಚಾಗುವ ಸಾಧ್ಯತೆ ಇದೆ.
ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಸರಕಾರಿ ಸ್ವಾಮ್ಯದಲ್ಲಿರುವ ಸಾರ್ವಜನಿಕ ತೈಲ ಕಂಪನಿಗಳ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಪೆಟ್ರೋಲಿಯಂ ಸಚಿವ ಮುರಳೀ ದಿಯೋರ್ ಚರ್ಚೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಪೆಟ್ರೋಲ್ ನ್ನು ಮೂರು ರುಪಾಯಿ ಹೆಚ್ಚಿಸಿದರೆ, ಡೀಸೆಲ್ ನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಲು ಅನುಮತಿ ನೀಡುವಂತೆ ಪೆಟ್ರೋಲಿಯಂ ಇಲಾಖೆ ಪ್ರಧಾನಿ ಮೇಲೆ ಒತ್ತಡ ಹೇರಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 83 ಡಾಲರ್ ಆಗಿದೆ. ಕಚ್ಚಾ ತೈಲ ಬೆಲೆ ಇಳಿಕೆಯಾದಾಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸಲಾಗಿತ್ತು. ಆದರೆ, ಇದೀಗ ಮತ್ತೆ ಕಚ್ಚಾ ತೈಲ ಬೆಲೆಗಳು ಏರಿಕೆಯಾಗಿದ್ದು, ದರ ಏರಿಕೆ ಅನಿವಾರ್ಯ ಎಂದು ಸಚಿವ ಮುರಳೀ ದಿಯೋರಾ ಅವರು ಪ್ರಧಾನಮಂತ್ರಿ ಅವರಿಗೆ ಮನದಟ್ಟು ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ಪೆಟ್ರೋಲಿಯಂ ಮತ್ತು ಹಣಕಾಸು ಇಲಾಖೆಗಳು ತೈಲ ಬೆಲೆಗಳನ್ನು ಏರಿಸುವಂತೆ ಪ್ರಧಾನಮಂತ್ರಿಗೆ ಮನವಿ ಮಾಡಿಕೊಂಡಿದ್ದಾರೆ.
Thatskannada
Subscribe to:
Post Comments (Atom)
No comments:
Post a Comment