ಟೀಮ್ ಇಂಡಿಯಾ ಅಗ್ರ ಕ್ರಮಾಂಕ ದೊಪ್ಪನೆ ಕುಸಿದದ್ದು, ಎಂದಿನಂತೆ ಕಳಪೆ ಫೀಲ್ಡಿಂಗ್ ಮತ್ತು ಬೌಲಿಂಗ್‌ಗಳ ಪರಿಣಾಮ ಶ್ರೀಲಂಕಾ ವಿರುದ್ಧದ 'ಐಡಿಯಾ ಕಪ್' ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ನಾಲ್ಕು ವಿಕೆಟುಗಳ ಅಂತರದಿಂದ ಸೋಲುಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಮಹೇಂದ್ರ ಸಿಂಗ್ ಧೋನಿ ಪಡೆಗೆ ಸುರೇಶ್ ರೈನಾ ಶತಕ ಹೊರತುಪಡಿಸಿ ಉಳಿದ ದಾಂಡಿಗರು ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಕೇವಲ 245 ರನ್ನುಗಳಿಗೆ ಸರ್ವಪತನ ಕಂಡಿತ್ತು. ಈ ಸಾಧಾರಣ ಮೊತ್ತದ ಹಿಂದೆ ಬಿದ್ದ ಕುಮಾರ ಸಂಗಕ್ಕರ ಪಾಳಯ ಇನ್ನೂ 10 ಎಸೆತಗಳು ಬಾಕಿ ಉಳಿದಿರುವಾಗಲೇ ಪಂದ್ಯವನ್ನು ಗೆದ್ದುಕೊಂಡು ಕಪ್ ಮುಡಿಗೇರಿಸಿಕೊಂಡಿದೆ.
ಭಾರತದ ಇನ್ನಿಂಗ್ಸ್‌ನಲ್ಲಿ ದ್ವೀಪರಾಷ್ಟ್ರದ ಬೌಲರುಗಳು ಮೆರೆದಾಡಿದ್ದನ್ನು ಕಂಡ ಅಭಿಮಾನಿಗಳು, ಉಪುಲ್ ತರಂಗಾ ಕ್ರೀಸಿಗಾಗಮಿಸಿದ ಕೂಡಲೇ ಶೂನ್ಯಕ್ಕೆ ತನ್ನ ವಿಕೆಟನ್ನು ಕೊಟ್ಟಾಗ ಧೋನಿ ಪಾಳಯದ ಬೌಲರುಗಳೂ ಇದೇ ಸಾಧನೆ ಮಾಡುತ್ತಾರೆಂದು ನಿರೀಕ್ಷಿಸಿದ್ದು ಕೊನೆಗೂ ನಿಜವಾಗಲೇ ಇಲ್ಲ.
ರನ್ ಪ್ರವಾಹವನ್ನು ಕೊಂಚ ಮಟ್ಟಿಗೆ ತಡೆಯಲು ಸ್ಪಿನ್ನರುಗಳು ಯಶಸ್ವಿಯಾದರೂ, ಪಂದ್ಯಕ್ಕೆ ತಿರುವು ಕೊಡುವಷ್ಟು ಪ್ರದರ್ಶನ ಯಾರೊಬ್ಬರಿಂದಲೂ ಹೊರ ಬರಲಿಲ್ಲ. ವೇಗಿಗಳ ನಿರ್ವಹಣೆಯೂ ತೀರಾ ಭಿನ್ನವೇನೂ ಆಗಿರಲಿಲ್ಲ. ಗಾಯಗೊಂಡ ಆಶಿಶ್ ನೆಹ್ರಾ 1.2 ಓವರುಗಳಷ್ಟೇ ಬೌಲಿಂಗ್ ಮಾಡಲು ಸಾಧ್ಯವಾಗಿತ್ತು. ಇದಕ್ಕೆ ಇನ್ನಷ್ಟು ಉಪ್ಪು ಖಾರ ಹಚ್ಚಿದ್ದು ಕಳಪೆ ಫೀಲ್ಡಿಂಗ್.
ಮಹೇಲಾ ಜಯವರ್ಧನೆ ಜಪ್ಪೆಂದರೂ ಕ್ರೀಸ್ ಬಿಡದೆ, ಸತತ ಮೂರು ಬೌಂಡರಿಗಳನ್ನು ಬಾರಿಸುವ ಮೂಲಕ ಲಂಕಾವನ್ನು ಗೆಲುವಿನ ದಡ ಹತ್ತಿಸುವ ಮೊದಲು ಭಾರತ ಕೊನೆಯ ಕ್ಷಣದಲ್ಲೂ ವಿಜಯಮಾಲೆಯನ್ನು ತನ್ನತ್ತ ವಾಲಿಸಬಹುದೆಂಬ ನಿರೀಕ್ಷೆಯಿಟ್ಟುಕೊಂಡಿತ್ತು.
ತಿಲಕರತ್ನೆ ದಿಲ್‌ಶಾನ್ (49) ಎಂದಿನಂತೆ ಬ್ಯಾಟಿಂಗ್ ಮಾಡಲಾಗದಿದ್ದರೂ ಆರಂಭಿಕ ಆಘಾತವನ್ನು ನಾಯಕ ಕುಮಾರ ಸಂಗಕ್ಕರರೊಡಗೂಡಿ (55) ಮರೆ ಮಾಚಿದ್ದರು. ಈ ಜೋಡಿ ಎರಡನೇ ವಿಕೆಟಿಗೆ 93 ರನ್ನುಗಳ ಭಾಗೀದಾರಿಕೆಯ ಆಟ ನೀಡಿತ್ತು.
ತಿಲನ್ ಸಮರವೀರಾ (27), ತಿಲನಾ ಕಂದಾಂಬಿ (18), ಸೂರಜ್ ರಣದೀವ್ (17) ಅಲ್ಪಮೊತ್ತಕ್ಕೆ ವಿಕೆಟ್ ಕೊಟ್ಟಿದ್ದರೆ, 6 ರನ್ ಮಾಡಿದ್ದ ತಿಸ್ಸಾರಾ ಪಿರೇರಾ ಅಜೇಯರಾಗುಳಿದರು.
ಲಂಕಾ 48.3 ಓವರುಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 249 ರನ್ ಗಳಿಸುವ ಮೂಲಕ ಐಡಿಯಾ ಕಪ್‌ನ್ನು ಕೈ ವಶ ಮಾಡಿಕೊಂಡಿತು. ಭಾರತ ಪರ ಹರಭಜನ್ ಎರಡು, ನೆಹ್ರಾ, ಯುವರಾಜ್ ಸಿಂಗ್ ಮತ್ತು ರವೀಂದ್ರ ಜಡೇಡಾ ತಲಾ ಒಂದೊಂದು ವಿಕೆಟ್ ಪಡೆದರು.
ಮಾನ ಉಳಿಸಿದ ಸುರೇಶ್ ರೈನಾ...
ಕೇವಲ 60 ರನ್ನುಗಳಿಗೆ ಐದು ಪ್ರಮುಖ ವಿಕೆಟುಗಳನ್ನು ಕಳೆದುಕೊಂಡಿದ್ದ ಭಾರತಕ್ಕೆ ರೈನಾ ಆಸರೆಯಾಗದೆ ಇದ್ದಿದ್ದರೆ ಪರಿಸ್ಥಿತಿ ಮತ್ತಷ್ಟು ಹೀನಾಯವಾಗಿರುತ್ತಿತ್ತು. ಅವರು ಅಂತಾರಾಷ್ಟ್ರೀಯ ಏಕದಿನದಲ್ಲಿ ತನ್ನ ಮೂರನೇ ಆಕರ್ಷಕ ಶತಕ (106) ದಾಖಲಿಸುವ ಮೂಲಕ ತಂಡದ ಮಾನ ಉಳಿಸಿದ್ದರು.
ಇಲ್ಲಿನ ಶೇರ್ ಎ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಬುಧವಾರ ಟಾಸ್ ಗೆದ್ದ ಶ್ರೀಲಂಕಾದಿಂದ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತವು 48.2 ಓವರುಗಳಲ್ಲಿ 245 ರನ್ನುಗಳಿಗೆ ಸರ್ವಪತನ ಕಂಡಿತ್ತು.
ಅಗ್ರ ಕ್ರಮಾಂಕ ಮತ್ತೊಮ್ಮೆ ತನ್ನ ವೈಫಲ್ಯತೆಯನ್ನು ಮೆರೆದಿರುವ ಹೊರತಾಗಿಯೂ ಸುರೇಶ್ ರೈನಾ ಅಮೋಘ ಶತಕದ ನೆರವಿನಿಂದ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 245ರ ಸಾಧಾರಣ ಮೊತ್ತ ಪೇರಿಸಿತು.
ಸೂಕ್ತ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಿ ನಿಂತು ತಾಳ್ಮೆಯ ಆಟವಾಡುತ್ತಾ ನಂತರ ಲಂಕಾ ಬೌಲರುಗಳ ಸತ್ವಪರೀಕ್ಷೆಗಿಳಿದ ರೈನಾ ಹೊರತುಪಡಿಸಿ ಸಾಧಾರಣ ಪ್ರದರ್ಶನ ನೀಡಿದ್ದು ವೀರೇಂದ್ರ ಸೆಹ್ವಾಗ್ (42) ಮತ್ತು ರವೀಂದ್ರ ಜಡೇಜಾ (38) ಮಾತ್ರ.
ಅಗ್ರ ಕ್ರಮಾಂಕದಲ್ಲಿ ಗೌತಮ್ ಗಂಭೀರ್ ಮತ್ತು ಯುವರಾಜ್ ಸಿಂಗ್ ಖಾತೆ ತೆರೆಯುವ ಮೊದಲೇ ಹೊರಟು ಹೋದರೆ, ಸರಣಿಯ ಹೀರೋ ವಿರಾಟ್ ಕೋಹ್ಲಿ ಕೇವಲ ಎರಡು ರನ್ನುಗಳಿಗೆ ಸೀಮಿತವಾಗಿದ್ದರು. ನಾಯಕ ಮಹೇಂದ್ರ ಸಿಂಗ್ ಧೋನಿಯವರ ಹೋರಾಟವೂ 14ಕ್ಕೆ ಮುಕ್ತಾಯ ಕಂಡಿತು.
ಹರಭಜನ್ ಸಿಂಗ್ (11) ಮತ್ತು ಜಹೀರ್ ಖಾನ್ (16) ಎರಡಂಕಿ ತಲುಪಿದರೆ, ಶ್ರೀಶಾಂತ್ 4ಕ್ಕೆ ವಿಕೆಟ್ ಒಪ್ಪಿಸಿದರು. 2 ರನ್ ಗಳಿಸಿದ ಆಶಿಶ್ ನೆಹ್ರಾ ಅಜೇಯರಾಗುಳಿದರು.
ನುವಾನ್ ಕುಲಶೇಖರ ಮತ್ತು ಚಣಕಾ ವೆಲಗೇದರಾ ಅವರು ಭಾರತವನ್ನು ಅಟ್ಟಾಡಿಸಿದ್ದು, ಕ್ರಮವಾಗಿ ನಾಲ್ಕು ಮತ್ತು ಮೂರು ಪ್ರಮುಖ ವಿಕೆಟುಗಳನ್ನು ಕಬಳಿಸಿದರು. ಸೂರಜ್ ರಣದೀವ್, ತಿಸ್ಸಾರಾ ಪಿರೇರಾ ಮತ್ತು ತಿಲಕರತ್ನೆ ದಿಲ್‌ಶಾನ್ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಭಾರತ 245 (48.2 ಓವರು)
ವೀರೇಂದ್ರ ಸೆಹ್ವಾಗ್ 42, ಗೌತಮ್ ಗಂಭೀರ್ 0, ವಿರಾಟ್ ಕೋಹ್ಲಿ 2, ಯುವರಾಜ್ ಸಿಂಗ್ 0, ಮಹೇಂದ್ರ ಸಿಂಗ್ ಧೋನಿ 14, ರವೀಂದ್ರ ಜಡೇಜಾ 38, ಹರಭಜನ್ ಸಿಂಗ್ 11, ಜಹೀರ್ ಖಾನ್ 16, ಸುರೇಶ್ ರೈನಾ 106, ಶ್ರೀಶಾಂತ್ 4, ಆಶಿಶ್ ನೆಹ್ರಾ 2*.
Webdunia
Subscribe to:
Post Comments (Atom)
No comments:
Post a Comment