Feb 17, 2010
ಐಪಿಎಲ್‌ಗೆ ಆಸ್ಟ್ರೇಲಿಯನ್ನರೂ ಬರಲಿ, ಪಾಕಿಗಳೂ ಬರಲಿ: ಶಿವಸೇನೆ
ದೇಶಪ್ರೇಮವನ್ನು ಎದುರಿಗಿಟ್ಟುಕೊಂಡು ಹೋರಾಟ ನಡೆಸುವುದಕ್ಕೆ ಅರ್ಥವಿಲ್ಲ ಎನ್ನುವುದನ್ನು ನಾವು ಮನಗಂಡಿದ್ದೇವೆ; ಹಾಗಾಗಿ ಐಪಿಎಲ್‌ನಲ್ಲಿ ಆಡುವ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರ ವಿರುದ್ಧ ನಾವು ಪ್ರತಿಭಟನೆ ನಡೆಸುವುದಿಲ್ಲ ಎಂದು ಶಿವಸೇನೆ ವರಿಷ್ಠ ಬಾಳ ಠಾಕ್ರೆ ಹೇಳಿದ್ದಾರೆ.ಆಸ್ಟ್ರೇಲಿಯಾ ಕ್ರಿಕೆಟಿಗರು ಬರಲಿ ಬಿಡಿ, ಪಾಕಿಸ್ತಾನದ ಆಟಗಾರರು ಬರಲಿ.. ಅದಕ್ಕೂ ಅವಕಾಶ ನೀಡಿ. ತರಬೇತಿ ಪಡೆದ ಭಯೋತ್ಪಾದಕರೂ ಇಲ್ಲಿಗೆ ಬರಲಿ, ಅವರನ್ನೂ ತಡೆಯಬೇಡಿ. ಶಿವಸೇನೆ ಇದನ್ನು ವಿರೋಧಿಸುವುದಿಲ್ಲ ಎಂದು ಮಂಗಳವಾರ ತಡರಾತ್ರಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಠಾಕ್ರೆ ಹೇಳಿದ್ದಾರೆ.
ಐಪಿಎಲ್ ಆಟಗಾರರಿಗೆ ಸಂಪೂರ್ಣ ಭದ್ರತೆ ನೀಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾನ್ ಪ್ರಕಟಿಸಿದ ಗಂಟೆಗಳೊಳಗೆ ಠಾಕ್ರೆ ತನ್ನ ಈ ಹಿಂದಿನ ನಿಲುವನ್ನು ಬದಲಾಯಿಸಿದ್ದು, ಆಸ್ಟ್ರೇಲಿಯಾ ಕ್ರಿಕೆಟಿಗರ ವಿರುದ್ಧದ ಪ್ರಸ್ತಾವಿತ ಪ್ರತಿರೋಧವನ್ನು ಕೈ ಬಿಡುವುದಾಗಿ ಹೇಳಿದ್ದಾರೆ.
ದೇಶಪ್ರೇಮವನ್ನು ಆಧರಿಸಿ ಹೋರಾಟ ಮಾಡುವುದರಲ್ಲಿ ಅರ್ಥವೇ ಇಲ್ಲ. ಇಂತಹ ವಿಚಾರಗಳಲ್ಲಿ ಜನ ಆಸಕ್ತಿ ಹೊಂದಿಲ್ಲ. ಅಲ್ಲದೆ ಆಸ್ಟ್ರೇಲಿಯಾ ಕ್ರಿಕೆಟಿಗರನ್ನು ಸೇನೆ ತಡೆಯುವುದರಿಂದ ಆಸ್ಟ್ರೇಲಿಯಾದಲ್ಲಿರುವ ಭಾರತೀಯರಿಗೆ ಇನ್ನಷ್ಟು ತೊಂದರೆಯಾಗಬಹುದು ಎಂದು ಅಲ್ಲಿನ ಭಾರತೀಯರು ಅಭಿಪ್ರಾಯಪಟ್ಟಿದ್ದಾರೆ. ಇವೆಲ್ಲವನ್ನೂ ಗಮನಕ್ಕೆ ತೆಗೆದುಕೊಂಡಿರುವ ಶಿವಸೇನೆಯು ಈ ನಿರ್ಧಾರಕ್ಕೆ ಬಂದಿದೆ. ಸಾರ್ವತ್ರಿಕ ಅಭಿಪ್ರಾಯದ ಕೊರತೆಯಿರುವ ಈ ವಿಚಾರದಲ್ಲಿ ಶಿವಸೈನಿಕರು ತಲೆ ಹಾಕುವುದಿಲ್ಲ ಎಂದು ಠಾಕ್ರೆ ವಿವರಣೆ ನೀಡಿದ್ದಾರೆ.
ದೇಶಭಕ್ತಿಯ ಬಗ್ಗೆ ಯಾರೊಬ್ಬರಿಗೂ ಅಭಿಮಾನ ಇಲ್ಲದೇ ಇರುವಾಗ ಶಿವಸೇನೆ ಮಾತ್ರ ಯಾಕೆ ಇದರ ಕುರಿತು ಮಾತನಾಡಬೇಕು ಅಥವಾ ಪ್ರತಿಭಟನೆಗಳನ್ನು ನಡೆಸಬೇಕು? ಶಿವಸೈನಿಕರು ಮಾತ್ರ ದೇಶಭಕ್ತರೇ? ನಮ್ಮ ಹೋರಾಟವನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರು ಯಾವುದೇ ಹೊರ ದೇಶದ ತಂಡವನ್ನು ಪ್ರತಿನಿಧಿಸುತ್ತಿಲ್ಲ. ಐಪಿಎಲ್‌ನಲ್ಲಿ ಅವರು ಭಾಗವಹಿಸುತ್ತಿರುವ ಕಾರಣ ನಾವು ವಿರೋಧಿಸುತ್ತಿಲ್ಲ. ಆದರೆ ಆಸ್ಟ್ರೇಲಿಯಾದ ತಂಡವನ್ನು ಭಾರತದಲ್ಲಿ ಆಡಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಆಟಗಾರರ ಪರವಾಗಿ ಹೇಳಿಕೆ ನೀಡಿದ್ದ ಶಾರೂಖ್ ಖಾನ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಶಿವಸೇನೆ, ಅವರ ಚಿತ್ರ ಬಿಡುಗಡೆಯನ್ನು ತೀವ್ರವಾಗಿ ವಿರೋಧಿಸಿತ್ತು. ಆದರೆ ಸರಕಾರ ಸಂಪೂರ್ಣ ಭದ್ರತೆ ನೀಡಿದ ಕಾರಣ ಚಿತ್ರ ಬಿಡುಗಡೆ ನಿರಾತಂಕವಾಗಿತ್ತು. ಇದರಿಂದ ತೀವ್ರ ಮುಖಭಂಗ ಅನುಭವಿಸಿದ್ದ ಶಿವಸೇನೆ ಮತ್ತೊಂದು ಅಂತಹುದೇ ಪ್ರಸಂಗವನ್ನು ಎದುರಿಸಲು ಇಷ್ಟವಿಲ್ಲದೆ ಆಸ್ಟ್ರೇಲಿಯಾ ಆಟಗಾರರ ವಿರುದ್ಧದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
Subscribe to:
Post Comments (Atom)
No comments:
Post a Comment