ಕೇಂದ್ರ ಸಾಗರೋತ್ತರ ವ್ಯವಹಾರಗಳ ಸಚಿವ ವಯಲಾರ್ ರವಿ ಲಿಬಿರಿಯಾದಲ್ಲಿ ಕಾರು ಅಪಘಾತಕ್ಕೊಳಗಾಗಿ ಗಾಯಗೊಂಡಿದ್ದು, ಅವರನ್ನು ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕರೆ ತರಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಲಿಬಿರಿಯಾದಲ್ಲಿ ಅಪಘಾತಕ್ಕೊಳಗಾಗಿರುವ ಅವರನ್ನು ಕೋಟ್ ಡಿ ಐವೋರಿಯ ರಾಜಧಾನಿ ಅಬಿದ್ಜಾನ್‌ಗೆ ತರಲಾಗಿದೆ. ಅಲ್ಲಿಂದ ಚೆನ್ನೈಗೆ ಅವರನ್ನು ಎಲ್ಲಾ ವೈದ್ಯಕೀಯ ಸಲಕರಣೆ, ವ್ಯವಸ್ಥೆಗಳನ್ನು ಹೊಂದಿರುವ ವಿಶೇಷ ವಿಮಾನದಲ್ಲಿ ಚೆನ್ನೈಗೆ ತರಲಾಗುತ್ತದೆ. ನಾಳೆ ರಾತ್ರಿ ಅವರು ಭಾರತವನ್ನು ತಲುಪಲಿದ್ದಾರೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಘಾನಾ, ತಾಂಜಾನಿಯಾ, ಕೀನ್ಯಾ, ಲಿಬಿರಿಯಾ ಮತ್ತು ನೈಜೀರಿಯಾ ಸೇರಿದಂತೆ ಆಫ್ರಿಕಾ ದೇಶಗಳ ಪ್ರವಾಸದಲ್ಲಿದ್ದ ರವಿ ಅವರು ಫೆಬ್ರವರಿ 4ರಂದು ಲಿಬಿರಿಯಾದ ರಾಜಧಾನಿ ಮೊನ್ರೊವಿಯಾದಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದರು.
ಮುಂದಿನ ಪ್ರವಾಸಕ್ಕಾಗಿ ನೈಜೀರಿಯಾಕ್ಕೆ ಹೋಗಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಟ್ಯಾಕ್ಸಿಯೊಂದು ಸಚಿವರಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು.
ಲಿಬಿರಿಯಾದ ಜಾನ್ ಎಫ್ ಕೆನಡಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಅವರನ್ನು ಮರುದಿನ ಪಕ್ಕದ ದೇಶ ಕೋಟ್ ಡಿ ಐವೋರಿಯ ರಾಜಧಾನಿ ಅಬಿದ್ಜಾನ್‌ಗೆ ವಿಮಾನದ ಮೂಲಕ ಕೊಂಡೊಯ್ದು ಅಲ್ಲಿನ ಪಿಸಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪಿಸಾಮ್ ಆಸ್ಪತ್ರೆಯಲ್ಲಿ ನಡೆಸಲಾದ ಸಿಟಿ ಸ್ಕ್ಯಾನ್ ಮತ್ತು ಇತರ ಪರೀಕ್ಷೆಗಳ ಪ್ರಕಾರ ಸಚಿವರು ಯಾವುದೇ ಗಂಭೀರ ಗಾಯಕ್ಕೊಳಗಾಗಿಲ್ಲ ಎಂದು ಸಚಿವಾಲಯದ ಮೂಲಗಳು ಹೇಳಿವೆ.
ತನ್ನ ಸುರಕ್ಷಿತ ವಾಪಸಿಗಾಗಿ ವ್ಯವಸ್ಥೆ ಮಾಡಿರುವ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಕ್ಷಣಾ ಸಚಿವ ಎ.ಕೆ. ಆಂಟನಿಯವರಿಗೆ ವಯಲಾರ್ ರವಿಯವರು ಅಬಿದ್ಜಾನ್‌ನಿಂದಲೇ ಅಭಿನಂದನೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸಹಕಾರವನ್ನೂ ಅವರು ಸ್ಮರಿಸಿದ್ದಾರೆ.
source: webdunia
Feb 10, 2010
Subscribe to:
Post Comments (Atom)
No comments:
Post a Comment