


ಇತ್ತ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾರನ್ನು ಕಾಂಗ್ರೆಸ್ ಅಧ್ಯಕ್ಷೆ ಭೇಟಿ ಮಾಡಿರುವುದು ಮತ್ತು ಪೆಟ್ರೋಲ್ ಬೆಲೆಯೇರಿಕೆ ವಿರೋಧ ವ್ಯಕ್ತಪಡಿಸುವ ಮೂಲಕ ಡಿಎಂಕೆ ಮುನಿಸಿಕೊಂಡಿದ್ದರೆ, ಅತ್ತ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರಿಗೆ ಶರಣಾಗತಿ ಪ್ರಸ್ತಾಪವನ್ನು ಮುಂದಿಟ್ಟಿರುವ ಬಗ್ಗೆ ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಸರಕಾರ ವಿರುದ್ಧ ಕಾಂಗ್ರೆಸ್‌ನಲ್ಲೇ ಅಸಮಾಧಾನ ಸ್ಫೋಟಗೊಂಡಿದೆ.
ಇದರೊಂದಿಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದಲ್ಲಿ (ಯುಪಿಎ) ಎಲ್ಲವೂ ಸರಿಯಾಗಿಲ್ಲ ಎಂಬುದು ನಿಧಾನವಾಗಿ ಬಯಲಿಗೆ ಬರುತ್ತಿದೆ. ಇದಕ್ಕೊಂದಿಷ್ಟು ಉಪ್ಪುಖಾರ ಹಚ್ಚುವ ಕೆಲಸವನ್ನು ಇತ್ತ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಶುರು ಹಚ್ಚಿಕೊಂಡಿದ್ದಾರೆ. ಹೀಗಾಗಿ ಯುಪಿಎ ಸರಕಾರ ರಾಜಕೀಯ ಸಂಕಷ್ಟಕ್ಕೆ ಒಳಗಾಗುತ್ತಿದೆ ಎಂದು ಹೇಳಲಾಗಿದೆ
ಕಾಂಗ್ರೆಸ್ ಯುವ ನಾಯಕ ಮತ್ತು ಮುಂದಿನ ಪ್ರಧಾನಿ ಎಂದೇ ಬಿಂಬಿತವಾಗುತ್ತಿರುವ ರಾಹುಲ್ ಗಾಂಧಿ ಕೂಡ ಡಿಎಂಕೆ ಜತೆಗಿನ ಸಂಬಂಧದ ಬಗ್ಗೆ ತೃಪ್ತಿ ಹೊಂದಿಲ್ಲ ಮತ್ತು ಜಯಲಲಿತಾ ಅವರ ಪಕ್ಷದ ಬಗ್ಗೆ ಒಲವು ಹೊಂದಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದೇ ಕಾರಣದಿಂದ ಇತ್ತೀಚಿನ ತನ್ನ ತಮಿಳುನಾಡು ಭೇಟಿ ಸಂದರ್ಭದಲ್ಲಿ ಕರುಣಾನಿಧಿಯವರನ್ನು ಮುಖಾಮುಖಿಯಾಗಿರಲಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತರಾಗುವ ಹಿಂದೆಯೇ ಹೆಸರುವಾಸಿಯಾಗಿದ್ದ ಚಾವ್ಲಾ, ಜಯಲಲಿತಾ ಮೊರೆಗೆ ಓಗೊಟ್ಟು ರಾಜ್ಯದಲ್ಲಿನ ಉಪ ಚುನಾವಣೆಗಳನ್ನು ಮುಂದೂಡಿದ್ದಾರೆ ಎಂಬ ಆರೋಪವನ್ನೂ ಡಿಎಂಕೆ ಮಾಡಿದೆ.
ಜತೆಗೆ ಇತ್ತೀಚೆಗಷ್ಟೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಬೇಕೆಂಬ ಶಿಫಾರಸಿನ ಹಿನ್ನೆಲೆಯಲ್ಲಿ ಚರ್ಚೆ ನಡೆಸಿದಾಗ ಮೈತ್ರಿಕೂಟದ ಡಿಎಂಕೆ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳು ಬೆಲೆಯೇರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದೇ ಕಾರಣದಿಂದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆ ನಿರ್ಧಾರವನ್ನು ಕೈ ಬಿಡಲಾಗಿತ್ತು ಎಂದು ಮೂಲಗಳು ಹೇಳಿವೆ.
ಸಂತಸದಲ್ಲಿದ್ದಾರೆ ಜಯಲಲಿತಾ...
ಇತ್ತ ಜಯಲಲಿತಾರವರು ಸೋನಿಯಾ ಭೇಟಿಯಿಂದ ಆನಂದ ತುಂದಿಲರಾಗಿದ್ದು, ಕಳೆದ ಹಲವು ವರ್ಷಗಳಿಂದ ಮಗ್ಗುಲ ಮುಳ್ಳಾಗಿರುವ ಡಿಎಂಕೆಯನ್ನು ಶಕ್ತಿಕೇಂದ್ರದಿಂದ ಹೊರದಬ್ಬುವ ವಿಶ್ವಾಸದಿಂದಿದ್ದಾರೆ.
ಕಾದು ನೋಡೋಣ, ಈಗಲೇ ಏನೂ ಹೇಳಲಾಗದು. ತಮಿಳುನಾಡಿನ ಜನತೆ ಉತ್ತಮ ಸರಕಾರವೊಂದಕ್ಕೆ ಮನಸ್ಸು ಮಾಡಿದಲ್ಲಿ, ತಮಿಳುನಾಡಿಗೆ ಅದರ ಅಗತ್ಯವಿದ್ದಲ್ಲಿ ಅವರೇ ಅದನ್ನು ಸಾಧ್ಯವಾಗಿಸುತ್ತಾರೆ ಎಂದು ಜಯಲಲಿತಾ ರಾಷ್ಟ್ರೀಯ ಪಕ್ಷದ ಜತೆಗಿನ ಸಂಭಾವ್ಯ ಸಂಬಂಧದ ಕುರಿತು ಪ್ರತಿಕ್ರಿಯಿಸಿದ್ದಾರೆ.
ಡಿಎಂಕೆ ವರ್ತನೆಯಿಂದ ಕಾಂಗ್ರೆಸ್ ತಾಳ್ಮೆಗೆಟ್ಟಿರುವುದು ಇದೊಂದೇ ಪ್ರಕರಣದಲ್ಲಲ್ಲ. ಜನತೆ ಕೂಡ ಆ ಪಕ್ಷದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಜನ ಬದಲಾವಣೆ ಬಯಸುತ್ತಿದ್ದಾರೆ. ಈ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕಾಗಿರುವುದು ಕಾಂಗ್ರೆಸ್ ನಾಯಕತ್ವ
ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಭಿನ್ನಮತ...
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರದಲ್ಲಿ ತರಬೇತಿ ಪಡೆದ ಸುಮಾರು 11,000 ಕಾಶ್ಮೀರಿ ಯುವಕರು ಶರಣಾಗತರಾದಲ್ಲಿ ಅವರಿಗೆ ಸಹಕಾರ ನೀಡಲಾಗುತ್ತದೆ ಎಂಬ ಪ್ರಸ್ತಾಪವನ್ನು ಮುಂದಿಟ್ಟಿರುವ ಜಮ್ಮು-ಕಾಶ್ಮೀರ ಸರಕಾರದ ನಿರ್ಧಾರದ ಬಗ್ಗೆ ಮೈತ್ರಿ ಪಕ್ಷ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ಸಿನ ಗುಲಾಂ ನಬಿ ಅಜಾದ್, ಶರಣಾಗತರಾದ ಉಗ್ರರು ಮತ್ತೆ ಅದೇ ಹಾದಿ ತುಳಿಯುವುದಿಲ್ಲ ಎಂಬ ಬಗ್ಗೆ ಯಾವ ಖಾತ್ರಿಯಿದೆ. ಸರಕಾರದ ನಿಲುವು ಸರಿಯಲ್ಲ ಎಂದು ಆಕ್ರೋಶಗೊಂಡಿದ್ದಾರೆ.
source: webdunia
No comments:
Post a Comment