
ಕೋಲ್ಕತ್ತ: ಸೋಮವಾರ ಸಚಿನ್-ಸೆಹ್ವಾಗ್ ಅವರ ಶತಕದ ಸೊಬಗು ಸವಿದಿದ್ದ ಅಭಿಮಾನಿಗಳಿಗೆ ಮಾರನೆಯ ದಿನ ಮತ್ತೊಂದು ವಿಧದ ಬ್ಯಾಟಿಂಗ್ ವೈಭವ ವೀಕ್ಷಿಸುವ ಸೌಭಾಗ್ಯ ಲಭಿಸಿತು. ಅದು ಲಕ್ಷ್ಮಣ್ ವಿಶೇಷ ಆಟ ಹಾಗೂ ದೋನಿಯ ವಿಭಿನ್ನ ಶೈಲಿಯ ಶತಕ. ಅವರೊಂದಿಗೆ ದಕ್ಷಿಣ ಆಫ್ರಿಕಾ ಆಟಗಾರರನ್ನು ಕಾಡಿದ್ದು ಪ್ರೇಕ್ಷಕರ ಜೋರಾದ ಕೂಗು!
ಆ ಪರಿಣಾಮ ಭಾರತಕ್ಕೆ ಮತ್ತೊಂದು ಸ್ಮರಣೀಯ ದಿನ ಎದುರಾಯಿತು. ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ 153 ಓವರ್‌ಗಳಲ್ಲಿ 6 ವಿಕೆಟ್‌ಗೆ 643 ರನ್ ಪೇರಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ 347 ರನ್‌ಗಳ ಅಮೋಘ ಮುನ್ನಡೆ ಸಾಧಿಸಿದೆ. ಈ ಮುನ್ನಡೆ ಗ್ರೇಮ್ ಸ್ಮಿತ್ ಪಡೆಯ ಮೊದಲ ಇನಿಂಗ್ಸ್‌ನ 296 ರನ್‌ಗಳ ಮೊತ್ತ ಮೀರುವಂತದ್ದು ಎಂಬುದು ವಿಶೇಷ.
ಎರಡನೇ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ಮೂರನೇ ದಿನದಾಟದ ಅಂತ್ಯಕ್ಕೆ 0.5 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ 6 ರನ್ ಗಳಿಸಿದೆ. ಮಂದ ಬೆಳಕಿನ ಕಾರಣ 18 ನಿಮಿಷ ಮೊದಲೇ ಆಟ ಸ್ಥಗಿತಗೊಂಡಿತು. ಅದನ್ನು ಸರಿದೂಗಿಸಲು ಬುಧವಾರ 8.57ಕ್ಕೆ ಪಂದ್ಯ ಶುರುವಾಗಲಿದೆ. ಅದರೆ ಈಗ ಸ್ಮಿತ್ ಪಡೆ ಮುಂದೆ ದೊಡ್ಡ ಸವಾಲೇ ಇದೆ. ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಅವರು ಇನ್ನೂ 341 ರನ್ ಗಳಿಸಬೇಕು. 4 ಹಾಗೂ 5ನೇ ದಿನ ಸ್ಪಿನ್ನರ್‌ಗೆ ನೆರವು ನೀಡುವ ಈಡನ್ ಪಿಚ್‌ನಲ್ಲಿ ಬ್ಯಾಟಿಂಗ್ ಸುಲಭದ ಮಾತಲ್ಲ!

ಆದರೆ ಲಕ್ಷ್ಮಣ್ (ಔಟಾಗದೆ 143, 352 ನಿ, 260 ಎಸೆತ, 16 ಬೌಂಡರಿ) ಹಾಗೂ ದೋನಿ ( ಔಟಾಗದೆ 132, 272 ನಿ, 187 ಎಸೆತ, 12 ಬೌಂಡರಿ, 3 ಸಿಕ್ಸರ್) ಅವರ ಜೊತೆಯಾಟ ಸಚಿನ್, ಸೆಹ್ವಾಗ್ ಜುಗಲ್‌ಬಂದಿಯನ್ನು ಮೀರಿ ನಿಂತಿತು. ಅವರಷ್ಟು ಕ್ಲಾಸಿಕ್ ಅನಿಸದಿದ್ದರೂ ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟಕ್ಕಾಗಿನ ಕಾದಾಟ ದಲ್ಲಿ ಮೂರನೇ ದಿನವೂ ತನ್ನ ಸಾಮ ರ್ಥ್ಯ ಮೆರೆಯಲು ಭಾರತಕ್ಕೆ ಸಾಧ್ಯವಾ ಯಿತು. ಜೊತೆಗೆ ಅಗ್ರ ರ್‍ಯಾಂಕಿಂಗ್ ಉಳಿಸಿಕೊಳ್ಳಲು ಗೆಲ್ಲಲೇಬೇಕಾ ಗಿರುವ ಈ ತಂಡವನ್ನು ಅದೃಷ್ಟ ಕೈಹಿಡಿದಂತಿದೆ.
ದಾಖಲೆ ಜೊತೆಯಾಟ: ಲಕ್ಷ್ಮಣ್ ಹಾಗೂ ದೋನಿ ಅಮೋಘ ಶತಕಗಳ ಮೂಲಕ ಈಡನ್ ಅಂಗಳದಲ್ಲಿ ಮೆಕ್ಸಿಕನ್ ಅಲೆ ಎಬ್ಬಿಸಿದರು. ಅವರು ಮುರಿಯದ ಏಳನೇ ವಿಕೆಟ್‌ಗೆ 259 ರನ್ ಸೇರಿಸಿ ಹೊಸ ದಾಖಲೆ ಬರೆದರು. 1984-85ರಲ್ಲಿ ರವಿಶಾಸ್ತ್ರಿ (142) ಹಾಗೂ ಸೈಯದ್ ಕಿರ್ಮಾನಿ (102) ಅವರು ಮುಂಬೈನಲ್ಲಿ ಇಂಗ್ಲೆಂಡ್ ಎದುರು ಏಳನೇ ವಿಕೆಟ್‌ಗೆ 235 ರನ್ ಗಳಿಸಿದ್ದರು. ಆ ದಾಖಲೆ ಅಳಿಸಿ ಹೋಯಿತು.
ಅಷ್ಟು ಮಾತ್ರವಲ್ಲದೇ, ದಕ್ಷಿಣ ಆಫ್ರಿಕಾ ವಿರುದ್ಧ ಇದು ಭಾರತದ ಅತಿ ಹೆಚ್ಚಿನ ಮೊತ್ತ ಕೂಡ. ಈ ಮೊದಲು 2008ರಲ್ಲಿ ಚೆನ್ನೈನಲ್ಲಿ 628 ರನ್ ಗಳಿಸಿದ್ದರು. ಜೊತೆಗೆ ಒಂದೇ ಇನಿಂಗ್ಸ್ ನಲ್ಲಿ ಭಾರತದ ನಾಲ್ಕು ಮಂದಿ ಶತಕ ಗಳಿಸಿದ್ದು ಇದು ಕೇವಲ ಎರಡನೇ ಬಾರಿ!
ಕ್ಲಾಸಿಕ್ ಲಕ್ಷ್ಮಣ್: ಕೈನೋವಿನಿಂ ದಾಗಿ ನಾಗಪುರ ಪಂದ್ಯ ತಪ್ಪಿಸಿಕೊಂ ಡಿದ್ದ ಲಕ್ಷ್ಮಣ್ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಸಾಮರ್ಥ್ಯವೇನು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ನೀರು ಹರಿದಷ್ಟೆ ಸರಾಗವಾಗಿ ಅವರ ಬ್ಯಾಟ್‌ನಿಂದ ರನ್‌ಗಳು ಬಂದವು. ಇದು ಅವರ 15ನೇ ಶತಕ.
ಈ ಅಂಗಳದಲ್ಲಿ 9 ಪಂದ್ಯ ಆಡಿರುವ ಲಕ್ಷ್ಮಣ್ 94.63 ಸರಾಸರಿಯಲ್ಲಿ 1041 ರನ್ ಗಳಿಸಿರುವುದು ವಿಶೇಷ. ಈಡನ್‌ನಲ್ಲಿ ಅವರಿಗಿದು 4ನೇ ಶತಕ ಕೂಡ. ಸೋಮವಾರವಷ್ಟೇ 7 ಸಾವಿರ ರನ್‌ಗಳ ಗಡಿದಾಟಿದ್ದ ಅವರು 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಲ್ಲಿಯೇ ಸ್ಮರಣೀಯ ಎನಿಸುವ 281 ರನ್ ಗಳಿಸಿದ್ದು ಮತ್ತೆ ನೆನಪಾಯಿತು. ಹಾಗಾಗಿಯೇ ಸ್ಕ್ರೀನ್‌ನಲ್ಲಿ ಅಭಿಮಾನಿಗಳು ಕಳುಹಿಸಿದ ‘ದಿ ಲಾರ್ಡ್ ಆಫ್ ಈಡನ್’ ಎಂಬ ಸಂದೇಶ ಪದೇಪದೇ ಕಾಣಿಸುತಿತ್ತು.
ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದಿದ್ದ ನಾಯಕ ದೋನಿ ಆಕ್ರಮಣಕಾರಿ ಇನಿಂಗ್ಸ್ ಕಟ್ಟಿದರು. ಡುಮಿನಿಗೆ ಸತತ 2 ಸಿಕ್ಸರ್ ಎತ್ತಿದರು. ಅವರು 158 ಎಸೆತಗಳಲ್ಲಿ ಮೂರಂಕಿ ತಲುಪಿದರು. ಅವರಿಗಿದು ನಾಲ್ಕನೇ ಶತಕ. ಎಡಗೈ ಸ್ಪಿನ್ನರ್ ಹ್ಯಾರೀಸ್‌ಗೆ ಲಾಂಗ್ ಆಫ್‌ಗೆ ಎತ್ತಿದ ಸಿಕ್ಸರ್ ಅದ್ಭುತವಾಗಿತ್ತು.
ಪ್ರಜಾವಾಣಿ ವಾರ್ತೆ
No comments:
Post a Comment