ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗೆ ರಣಜಿ ಟ್ರೋಫಿ ರನ್ನರ್ ಅಪ್ ಕರ್ನಾಟಕ ತಂಡದ ಯಾರೊಬ್ಬರಿಗೂ ಅವಕಾಶ ನೀಡಿಲ್ಲ. ಆದರೆ ತಮಿಳುನಾಡಿನ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಮೊದಲ ಎರಡು ಪಂದ್ಯಗಳಿಗೆ ಭಾರತ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ಕೋಲ್ಕತ್ತ: ಮುಗಿದ ರಣಜಿ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಮನೀಷ್ ಪಾಂಡೆ (882) ಹಾಗೂ ಹೆಚ್ಚು ವಿಕೆಟ್ ಪಡೆದಿದ್ದ ಅಭಿಮನ್ಯು ಮಿಥುನ್ (47) ಅವರನ್ನು ಬಿಸಿಸಿಐ ರಾಷ್ಟ್ರೀಯ ಆಯ್ಕೆದಾರರು ಪರಿಗಣಿಸಿಲ್ಲ. ಮಂಗಳವಾರ ರಾತ್ರಿ ತಾಜ್ ಬಂಗಾಳ ಹೋಟೆಲ್‌ನಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.
‘ಹರಭಜನ್ ಸಿಂಗ್ ವೈಯಕ್ತಿಕ ಕಾರಣಗಳಿಂದ ಮೊದಲ ಎರಡು ಪಂದ್ಯಗಳಲ್ಲಿ ಆಡುತ್ತಿಲ್ಲ. ಗಾಯದ ಕಾರಣ ಗೌತಮ್ ಗಂಭೀರ್ ಅವರನ್ನು ಪರಿಗಣಿಸಿಲ್ಲ’ ಎಂದು ಬಿಸಿಸಿಐ ಕಾರ್ಯದರ್ಶಿ ಎನ್.ಶ್ರೀನಿವಾಸನ್ ತಿಳಿಸಿದ್ದಾರೆ.
ಏಕದಿನ ಪಂದ್ಯಗಳು ಜೈಪುರ (ಫೆ.21), ಗ್ವಾಲಿಯರ್ (ಫೆ.24) ಹಾಗೂ ಅಹಮದಾಬಾದ್ (ಫೆ.27) ನಲ್ಲಿ ನಡೆಯಲಿವೆ. ಮೂರನೇ ಪಂದ್ಯಕ್ಕೆ ಬಳಿಕ ತಂಡ ಪ್ರಕಟಿಸಲಾಗುತ್ತದೆ.
23ರ ಹರೆಯದ ಅಶ್ವಿನ್ 28 ಪ್ರಥಮ ದರ್ಜೆ ಪಂದ್ಯಗಳಿಂದ 29.43 ಸರಾಸರಿಯಲ್ಲಿ 103 ವಿಕೆಟ್ ಪಡೆದಿದ್ದಾರೆ. ಆಲ್‌ರೌಂಡರ್‌ಗಳಾದ ಯೂಸುಫ್ ಪಠಾಣ್ ಹಾಗೂ ಅಭಿಷೇಕ್ ನಾಯರ್ ಅವರಿಗೆ ಮತ್ತೆ ಸ್ಥಾನ ನೀಡಲಾಗಿದೆ. ಯೂಸುಫ್ ದುಲೀಪ್ ಟ್ರೋಫಿ ಫೈನಲ್‌ನಲ್ಲಿ 190 ಎಸೆತಗಳಲ್ಲಿ 210 ರನ್ ಗಳಿಸಿದ್ದರು.
ಏಕದಿನ ತಂಡ ಇಂತಿದೆ: ಮಹೇಂದ್ರ ಸಿಂಗ್ ದೋನಿ (ನಾಯಕ), ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಸುರೇಶ್ ರೈನಾ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಜಹೀರ್ ಖಾನ್, ಆಶೀಶ್ ನೆಹ್ರಾ, ಸುದೀಪ್ ತ್ಯಾಗಿ, ಪ್ರವೀಣ್ ಕುಮಾರ್, ಅಭಿಷೇಕ್ ನಾಯರ್, ಯೂಸುಫ್ ಪಠಾಣ್ ಹಾಗೂ ಅಮಿತ್ ಮಿಶ್ರಾ.
ಪ್ರಜಾವಾಣಿ ವಾರ್ತೆ
Subscribe to:
Post Comments (Atom)
No comments:
Post a Comment