

ಕುಂದಾಪುರದಲ್ಲಿ ನಡೆದ ಘಟನೆ: ಒಂಭತ್ತು ಮಂದಿ ಆಸ್ಪತ್ರೆಗೆ
ಮಂಗಳೂರು: ಕುಂದಾಪುರ ಠಾಣಾ ವ್ಯಾಪ್ತಿಯ ಕಕ್ಕುಂಜೆ ಎಂಬಲ್ಲಿ ಚಿರತೆಯೊಂದು ಜನವಸತಿ ಪ್ರದೇಶದಲ್ಲಿ ದಾಂಧಲೆ ನಡೆಸಿ ಎಂಟಕ್ಕೂ ಅಧಿಕ ಮಂದಿಯನ್ನು ಕಚ್ಚಿ ಗಾಯಗೊಳಿಸಿದ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ.
ಕೊಲ್ಲೂರು ಮೂಕಾಂಬಿಕಾ ರಕ್ಷಿತಾರಣ್ಯದಿಂದ ಆಗೊಮ್ಮೆ, ಈಗೊಮ್ಮೆ ನಾಡಿಗಿಳಿಯುವ ಚಿರತೆ, ಚಿಟ್ಟೆಹುಲಿ ಮತ್ತಿತರ ಕ್ರೂರ ಮೃಗಗಳು ಕುಂದಾಪುರ, ಬ್ರಹ್ಮಾವರದ ಕಾಡಿಗೆ ಅಂಟಿ ಕೊಂಡಿರುವ ಪ್ರದೇಶಗಳಲ್ಲಿ ದಾಂಧಲೆ ಎಸಗು ವುದು ಇದೇ ಮೊದಲೇನಲ್ಲ. ನಿನ್ನೆಯೂ ಮಧ್ಯಾಹ್ನದ ವೇಳೆ ಭಾರೀ ಗಾತ್ರದ ಚಿರತೆ ದಿಢೀರ್ ಆಗಿ ಕಕ್ಕುಂಜೆಯ ಜನವಸತಿ ಇರುವ ಪ್ರದೇಶಕ್ಕೆ ನುಗ್ಗಿದೆ. ಇಲ್ಲಿನ ಸುಮಾರು ಐದಕ್ಕೂ ಅಧಿಕ ಮನೆಗಳ ಮೇಲೆ ದಾಳಿ ನಡೆಸಿದ ಚಿರತೆ ಮನೆಮಂದಿಯನ್ನು ಕಚ್ಚಿ ಗಾಯಗೊಳಿಸಿದೆ. ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಸವಾರರನ್ನು ಕಚ್ಚಿ ಗಾಯಗೊಳಿಸಿದೆ. ದನದ ಕೊಟ್ಟಿಗೆಗೆ ನುಗ್ಗಿ ಜಾನುವಾರುಗಳಿಗೂ ಕಚ್ಚಿದೆ. ಕಕ್ಕುಂಜೆಯ ವಾಸುದೇವ ಐತಾಳ, ಅರಣ್ಯ ಪಾಲಕ ವಿಠಲ, ಪುರುಷ ನಾಯ್ಕ ಎಂಬವರು ಚಿರತೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಕ್ಕುಂಜೆಯಿಂದ ಮುಂದಕ್ಕೆ ಸಾಗಿದ ಚಿರತೆ ವಂಡಾರು ಗ್ರಾಮಕ್ಕೆ ತೆರಳಿ ಅಲ್ಲಿನ ಕೆಲವು ಮನೆಗಳ ಮೇಲೂ ದಾಳಿ ನಡೆಸಿದೆ. ಅಷ್ಟರಲ್ಲಿ ಸುದ್ದಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ಹಿಡಿಯಲು ಕಾರ್ಯಾಚರಣೆ ನಡೆಸಿದರು. ಸಂಕದಬಾಗಿಲು ಸೀತಾರಾಮ ಶೆಟ್ಟಿ ಎಂಬವರ ಹಳೆಕಾಲದ ಮನೆಯಲ್ಲಿ ವಿಶ್ರಾಂತಿ ಪಡೆದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಲೆ ಬೀಸಿ ಹಿಡಿದು ಕೊಲ್ಲೂರು ರಕ್ಷಿತಾರಣ್ಯಕ್ಕೆ ಸಾಗಿಸಲಾಗಿದೆ.
ಘಟನೆಯಲ್ಲಿ ಓರ್ವ ಅರಣ್ಯ ಇಲಾಖೆಯ ವೀಕ್ಷಕನಿಗೂ ಗಾಯಗಳಾಗಿವೆ. ಗಾಯಾಳುಗಳು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂದಾಪುರ ಠಾಣಾ ವ್ಯಾಪ್ತಿಯ ಗ್ರಾಮ ಪ್ರದೇಶಗಳಲ್ಲಿ ಚಿರತೆ ದಾಳಿ ಹೊಸದಲ್ಲ ವಾದರೂ ನಿನ್ನೆ ನಡೆಸಿದ ದಾಂಧಲೆ ಜನರನ್ನು ಭಯಭೀತರನ್ನಾಗಿಸಿದೆ. ಇತ್ತೀಚೆಗೆ ಬ್ರಹ್ಮಾವರ ಬಳಿ ರಾತ್ರಿಯ ವೇಳೆ ಮನೆಯ ಅಂಗಳದಲ್ಲಿ ಕುಳಿತಿದ್ದ ಯುವತಿಯ ಮೇಲೆ ಚಿರತೆ ಹಠಾತ್ ದಾಳಿ ನಡೆಸಿ ಆಕೆಯನ್ನು ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ. ಈ ಘಟನೆಯ ನಂತರ ಸ್ಥಳೀಯವಾಗಿ ನಡೆದ ಭಯಾನಕ ಚಿರತೆ ದಾಳಿ ಇದಾಗಿತ್ತು ಎಂದು ಪ್ರತಿಕ್ರಿಯಿಸಿರುವ ಗ್ರಾಮಸ್ಥರು ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಗಮನ ಹರಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
jayakirana
No comments:
Post a Comment