VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 18, 2010

ದಾಖಲೆಯ ಶತಕ: ಆಯ್ಕೆ ಸಮರ್ಥಿಸಿಕೊಂಡ ಯೂಸುಫ್




ಅಹಮದಾಬಾದ್:ಮಹಾರಾಷ್ಟ್ರ ವಿರುದ್ಧ ನಡೆದ ವಿಜಯ್ ಹರಾರೆ ಟ್ರೋಫಿಗಾಗಿನ ಪಂದ್ಯದಲ್ಲಿ ಕೇವಲ 40 ಎಸೆತಗಳಲ್ಲಿ ಸ್ಫೋಟಕ ಶತಕ ಬಾರಿಸಿರುವ ಬರೋಡಾದ ಆಲ್‌ರೌಂಡರ್ ಆಟಗಾರ ಯೂಸುಫ್ ಪಠಾಣ್, ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲೇ ವೇಗದ ಶತಕ ಬಾರಿಸಿದ ವಿಶ್ವದ ಮೂರನೇ ಆಟಗಾರರೆನಿಸಿಕೊಂಡಿದ್ದಾರೆ.


ಅಷ್ಟೇ ಅಲ್ಲದೆ ಇದು ಭಾರತೀಯ ಬ್ಯಾಟ್ಸ್‌ಮನ್‌ನಿಂದ ದಾಖಲಾದ ಅತೀ ವೇಗದ ಶತಕವಾಗಿದೆ.
ಯೂಸುಫ್ ಗಳಿಸಿದ ಅಜೇಯ 108 ರನ್ನುಗಳ ನೆರವಿನಿಂದ ಬರೋಡಾ ತಂಡದವರು ಮಹಾರಾಷ್ಟ್ರ ಒಡ್ಡಿದ 231 ರನ್ನುಗಳ ಗೆಲುವಿನ ಗುರಿಯನ್ನು 36.3 ಓವರುಗಳಲ್ಲಿ ಕೇವಲ ಮೂರು ವಿಕೆಟ್ ನಷ್ಟಕ್ಕೆ ತಲುಪಿತು.
ಒಟ್ಟು 48 ಎಸೆತಗಳನ್ನು ಎದುರಿಸಿದ ಯೂಸುಫ್ ಎಂಟು ಬೌಂಡರಿ ಹಾಗೂ ಹತ್ತು ಭರ್ಜರಿ ಸಿಕ್ಸರುಗಳನ್ನು ಬಾರಿಸುವ ಮೂಲಕ ಅಜೇಯ 108 ರನ್ ಗಳಿಸಿದರು. ಈ ಮೂಲಕ ರಾಷ್ಟ್ರೀಯ ತಂಡಕ್ಕೆ ಪುನರಾಯ್ಕೆಗೊಂಡಿರುವ ಯೂಸುಫ್ ತಮ್ಮ ಆಯ್ಕೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಇತ್ತೀಚೆಗಷ್ಟೇ ದಕ್ಷಿಣ ವಲಯ ವಿರುದ್ಧ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಅಮೋಘ ದ್ವಿಶತಕ ಬಾರಿಸಿದ್ದ ಯೂಸುಫ್ ನೆರವಿನಿಂದ ಪಶ್ಚಿಮ ವಲಯ ತಂಡವು ದಾಖಲೆಯ 536 ರನ್ನುಗಳ ಗುರಿಯನ್ನು ಬೆನ್ನತ್ತುವ ಮೂಲಕ ಟ್ರೋಫಿಗೆ ಮುತ್ತಿಕ್ಕಿತ್ತು.
ಯೂಸುಫ್ ಎದುರಿಸಿದ್ದ ಮೊದಲ 20 ಎಸೆತಗಳಲ್ಲೇ ಅರ್ಧಶತಕ ಹರಿದು ಬಂದಿತ್ತಲ್ಲದೆ ಇದರಲ್ಲಿ ಆರು ಸಿಕ್ಸರುಗಳು ಸೇರಿದ್ದರು.
ಪಠಾಣ್ ಕ್ರೀಸಿಗಿಳಿಯುವ ವೇಳೆಯಲ್ಲಿ 23 ಓವರುಗಳಲ್ಲಿ 99 ರನ್ನುಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಬರೋಡಾ ಸಂಕಷ್ಟದಲ್ಲಿತ್ತು. ಆದರೆ ಮೈದಾನದ ನಾಲ್ಕು ದಿಕ್ಕುಗಳಿಗೆ ಸರ್ರನೆ ಬ್ಯಾಟ್ ಬೀಸಿದ ಯೂಸುಫ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಬರೋಡಾ ತಂಡ ಗೆಲುವಿನ ಗುರಿಯನ್ನು ಕೇವಲ 37ನೇ ಓವರ್‌ನಲ್ಲಿ ತಲುಪಿತು.
ಈ ಗೆಲುವಿನಿಂದ ಬರೋಡಾ ಬೋನಸ್ ಅಂಕ ಜೊತೆಗೆ ಪೂರ್ಣ ಐದಾಂಕವನ್ನು ತನ್ನ ಬಗಲಿಗೆ ಹಾಕಿಕೊಂಡಿತು.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲೆರಡು ಏಕದಿನ ಪಂದ್ಯಗಳಿಗಾಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಯೂಸುಫ್, ತನ್ನ ಆಯ್ಕೆಯನ್ನು ಈ ಅಮೋಘದ ಶತಕದ ಮೂಲಕ ಸಮರ್ಥಿಸಿಕೊಂಡಿದ್ದಾರೆ.

No comments: