ತಿರುವನಂತಪುರಂ, ಬುಧವಾರ, 17 ಫೆಬ್ರವರಿ 2010( 11:29 IST )
ಕಳೆದ ಶನಿವಾರ ಪುಣೆಯ ಜರ್ಮನ್ ಬೇಕರಿ ಮೇಲೆ ನಡೆದ ಭಯೋತ್ಪಾದಕ ದಾಳಿ ಪ್ರಕರಣದ ಹಿಂದೆ ಪಾಕಿಸ್ತಾನ ಸರಕಾರದ ಕೈವಾಡವಿದೆ ಎಂದು ತಾನು ಏಕಾಏಕಿ ಆರೋಪಿಸಲಾರೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶಶಿ ತರೂರ್ ಹೇಳಿದ್ದಾರೆ.
ಕೊಚ್ಚಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಪುಣೆ ದಾಳಿಯ ಸಂಬಂಧ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಅವರು, 'ಘಟನೆಗೆ ಪಾಕಿಸ್ತಾನ ಸರಕಾರವನ್ನು ನಾನು ಹೊಣೆಗಾರನನ್ನಾಗಿ ಮಾಡಲಾರೆ. ಆದರೆ ಪಾಕಿಸ್ತಾನದ ಹಲವು ಮಂದಿ ಈ ಘಟನೆಯ ಹಿಂದಿರಬಹುದು ಎಂದು ನಾವು ನಂಬಿದ್ದೇವೆ' ಎಂದರು.
PTI
ಭಾರತದ ಮೇಲೆ ಸತತ ದಾಳಿಗಳನ್ನು ನಡೆಸುವ ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನದ ಸರಕಾರಿ ಬೇಹುಗಾರಿಕಾ ಸಂಸ್ಥೆ ಐಎಸ್ಐ ಸದಾ ಬೆಂಬಲ ನೀಡುತ್ತಾ ಬಂದಿದೆ. ಇದು 2008ರ ಮುಂಬೈ ದಾಳಿಯಲ್ಲೂ ರುಜುವಾತಾಗಿದೆ. ಇದರ ಹೊರತಾಗಿಯೂ ಪಾಕಿಸ್ತಾನ ಸರಕಾರವನ್ನು ಆರೋಪಿಸುವುದು ಸರಿಯಲ್ಲ ಎಂದು ತರೂರ್ ಹೇಳಿದ್ದಾರೆ.
ಪುಣೆ ಸ್ಫೋಟದ ತನಿಖೆ ಆರಂಭಿಕ ಹಂತದಲ್ಲಷ್ಟೇ ಇರುವುದರಿಂದ ನಾವು ಪಾಕಿಸ್ತಾನ ಸೇರಿದಂತೆ ಯಾವುದೇ ಹೊರ ದೇಶಗಳತ್ತ ಬೆಟ್ಟು ಮಾಡಿ ತೋರಿಸುವುದಿಲ್ಲ. ಆದರೆ ಕಳೆದ 15 ವರ್ಷಗಳಿಂದ ಭಾರತದ ಮೇಲೆ ಗಡಿಯಾಚೆಯ ಹಲವರಿಂದ ನಡೆಯುತ್ತಿರುವ ದಾಳಿಗಳನ್ನು ಈಗ ಸ್ಮರಿಸಿಕೊಳ್ಳಬಹುದಾಗಿದೆ ಎಂದು ರಾಜ್ಯ ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಭಯೋತ್ಪಾದನೆಯನ್ನು ಬಗ್ಗುಬಡಿಯಲು ರಾಜತಾಂತ್ರಿಕತೆ ಮತ್ತು ಅಂತಾರಾಷ್ಟ್ರೀಯ ಸಹಕಾರದ ಬಳಕೆಯ ಅಗತ್ಯವನ್ನು ಒತ್ತಿ ಹೇಳಿರುವ ತರೂರ್, ಗಡಿಯಾಚೆಗಿನ ಭಯೋತ್ಪಾದನೆಯ ಜತೆ ವ್ಯವಹರಿಸಲು ರಾಜನೀತಿ ಮತ್ತು ಕಾರ್ಯನೀತಿಗಳನ್ನು ಬಳಸುವ ಬಗ್ಗೆ ಸರಕಾರವು ಜಾಗೃತಿಯನ್ನು ಉಂಟು ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದರು.
ಅಂತಾರಾಷ್ಟ್ರೀಯ ಮತ್ತು ರಾಜತಾಂತ್ರಿಕ ಸಹಕಾರದಿಂದ ಗಡಿಯಾಚೆಗಿನ ದಾಳಿಗಳನ್ನು ತಡೆಯಬಹುದಾಗಿದೆ. ಆದರೆ ಶೇ.100ರಷ್ಟು ಸುರಕ್ಷತೆಯ ಬಗ್ಗೆ ಮಾತನಾಡುವುದು ಅಸಾಧ್ಯ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
Source:webdunia
Feb 17, 2010
Subscribe to:
Post Comments (Atom)
No comments:
Post a Comment