ಇದು ಸರಕಾರಕ್ಕೆ ಅಪಕೀರ್ತಿ ಹುನ್ನಾರ ಎಂದ ಮುತಾಲಿಕ್
ಹುಬ್ಬಳ್ಳಿ, ಬುಧವಾರ, 17 ಫೆಬ್ರವರಿ 2010( 14:41 IST )
ರಾಜ್ಯದಲ್ಲಿ ನಡೆದಿರುವ ಚರ್ಚ್ ದಾಳಿ, ತನ್ನ ಮುಖಕ್ಕೆ ಮಸಿ ಬಳಿದ ಘಟನೆ ಸಹಿತ ಎಲ್ಲ ಗಲಭೆಗಳ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ನೇರವಾಗಿ ಆರೋಪಿಸಿರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಮತ್ತು ಸರಕಾರಕ್ಕೆ ಕೆಟ್ಟ ಹೆಸರು ತರುವ ಹುನ್ನಾರವಿದು ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮುಖಕ್ಕೆ ಮಸಿ ಬಳಿದ ಪ್ರಕರಣದ ಆರೋಪಿ, ಯುವ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಅವರನ್ನು ಕ್ಷಮಿಸಿರುವುದಾಗಿ ಹೇಳಿದ್ದಾರಲ್ಲದೆ, ಪ್ರಕರಣದ ನಂತರ ಬಂದ್ ಇತ್ಯಾದಿ ಘಟನೆಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದರೆ ಕ್ಷಮೆ ಯಾಚಿಸುವುದಾಗಿ ಹೇಳಿದ್ದಾರೆ.
ಮಸಿ ಬಳಿದ ಪ್ರಕರಣದಲ್ಲಿ ಶ್ರೀನಿವಾಸ್ ಅವರನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗಿದೆಯಷ್ಟೆ. ತಾನು ವ್ಯಕ್ತಿಯನ್ನು ಕ್ಷಮಿಸಿದ್ದೇನೆಯೇ ಹೊರತು ಅದರ ಹಿಂದಿರುವ ದುಷ್ಟ ಶಕ್ತಿ ಕಾಂಗ್ರೆಸ್ಸನ್ನಲ್ಲ. ಅದನ್ನು ಬಯಲಿಗೆಳೆಯಬೇಕು, ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇನೆ ಎಂದವರು ಹೇಳಿದರು.
ವ್ಯಾಲೆಂಟೈನ್ಸ್ ಡೇಗೆ ಸಿಎಂ, ಗೃಹಮಂತ್ರಿಯ ಮಕ್ಕಳನ್ನು ಕಳಿಸ್ತಾರಾ?
ವಿದೇಶೀ ಆಚರಣೆಯಾದ ವ್ಯಾಲೆಂಟೈನ್ ಡೇಗೆ ಮುಖ್ಯಮಂತ್ರಿ, ಗೃಹ ಸಚಿವರು ಬಹಿರಂಗ ಬೆಂಬಲ ನೀಡಿದ್ದಾರೆ. ಆದರೆ ತಮ್ಮ ಮನೆಮಂದಿಯೂ ಇದನ್ನು ಆಚರಿಸಲು ಅವರು ಅವಕಾಶ ನೀಡುತ್ತಾರೆಯೇ ಎಂದು ಪ್ರಶ್ನಿಸಿದ ಮುತಾಲಿಕ್, ರೆಡ್ಡಿಗಳ ಮೇಲಿನ ಕೊಲೆ ಕೇಸುಗಳನ್ನು ಹಿಂದೆಗೆದುಕೊಳ್ಳುತ್ತಿರುವ ಬಿಜೆಪಿ ಸರಕಾರ, ಹಿಂದೂಗಳ ರಕ್ಷಣೆಗಾಗಿ ಹೋರಾಡುತ್ತಿರುವವರ ಮೇಲೆ ಇಲ್ಲದ ಕೇಸುಗಳನ್ನು ಜಡಿಯುತ್ತಿದೆ ಎಂದು ಕೆಂಡ ಕಾರಿದರು.
ಪುಣೆ ಸ್ಫೋಟಕ್ಕೆ ಭಟ್ಕಳ ನಂಟು
ಪುಣೆಯಲ್ಲಿ ನಡೆದ ಸ್ಫೋಟದಲ್ಲಿಯೂ ಭಟ್ಕಳ ನಂಟಿದೆ. ಭಟ್ಕಳದಲ್ಲಿ ನಡೆಯುತ್ತಿರುವ ದೇಶದ್ರೋಹಿ ಚಟುವಟಿಕೆಗಳ ಕುರಿತು ಶ್ರೀರಾಮ ಸೇನೆ ಮೊದಲಿನಿಂದಲೂ ಎಚ್ಚರಿಸುತ್ತಾ ಬಂದಿದೆ. ಜಗನ್ನಾಥ ಶೆಟ್ಟಿ ಆಯೋಗದ ವರದಿ ಬಹಿರಂಗವಾದರೆ, ಅಲ್ಲೇನು ನಡೆಯುತ್ತಿದೆ ಎಂಬ ಪೂರ್ಣ ವಿವರಗಳು ಅದರಲ್ಲಿವೆ. ಪುಣೆ ಸ್ಫೋಟದ ಕುರಿತ ನಂಟಿನ ಬಗ್ಗೆಯೂ ಮತ್ತಷ್ಟು ತನಿಖೆ ನಡೆಸಿದರೆ ಮಾಹಿತಿ ದೊರೆಯಲಿದೆ ಎಂದು ಮುತಾಲಿಕ್ ನುಡಿದರು.
Source:webdunia
Feb 17, 2010
Subscribe to:
Post Comments (Atom)
No comments:
Post a Comment