ಕೋಲ್ಕತ್ತಾ, ಗುರುವಾರ, 18 ಫೆಬ್ರವರಿ 2010( 17:35 IST )

ಹಾಸೀಮ್ ಆಮ್ಲಾ (ಅಜೇಯ 127) ನಡೆಸಿದ ದಿಟ್ಟ ಶತಕದ ಹೋರಾಟದ ನಡುವೆಯೂ ಇಲ್ಲಿನ ಈಡೆನ್ ಗಾರ್ಡೆನ್ ಮೈದಾನದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯವನ್ನು ಭಾರತ ಇನ್ನಿಂಗ್ಸ್ ಹಾಗೂ 57 ರನ್ನುಗಳಿಗೆ ಗೆದ್ದುಕೊಂಡಿದ್ದು, ಸರಣಿಯನ್ನು 1-1ರ ಅಂತರದಲ್ಲಿ ಸಮಬಲಗೊಳಿಸಿದೆ.
ಇದರೊಂದಿಗೆ ಅಗ್ರಸ್ಥಾನವನ್ನು ಉಳಿಸಿಕೊಂಡಿರುವ ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ವಾರ್ಷಿಕ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.
ಸರಣಿಯ ಮೊದಲ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 6 ರನ್ನುಗಳ ಅಂತರದಿಂದ ಕಳೆದುಕೊಂಡಿದ್ದ ಭಾರತ ಈ ಗೆಲುವಿನೊಂದಿಗೆ ಸೇಡು ತೀರಿಸಿಕೊಂಡಿದೆ.
ಆಮ್ಲಾ 'ಭೇಷ್ ಭೇಷ್'...

ಅಂತಿಮ ಹಂತದ ವರೆಗೂ ಕೆಚ್ಚೆದೆಯ ಹೋರಾಟ ನೀಡಿದ ಹಾಸೀಮ್ ಆಮ್ಲಾ 489 ನಿಮಿಷಗಳ ಕಾಲ ಕ್ರೀಸಿನಲ್ಲಿ ನೆಲೆಯೂರಿ ನಿಂತಿದ್ದರಲ್ಲದೆ 394 ಎಸೆತಗಳಲ್ಲಿ 16 ಬೌಂಡರಿಗಳ ನೆರವಿನಿಂದ 127 ರನ್ ಗಳಿಸಿ ಅಜೇಯರಾಗಿ ಉಳಿದರು.
ಆದರೆ ಬಾಲಂಗೋಚಿಗಳಾದ ವೇಯ್ನ್ ಪಾರ್ನೆಲ್ ಮತ್ತು ಮೊರ್ನೆ ಮೊರ್ಕೆಲ್ ಹೊರತುಪಡಿಸಿ ಇತರ ಯಾವ ಪ್ರಮುಖ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಸಾಥ್ ಲಭಿಸಿಲಿಲ್ಲ.
ಸರಣಿಯುದ್ದಕ್ಕೂ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಆಮ್ಲಾ ಅರ್ಹವಾಗಿಯೇ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಭಜ್ಜಿ 'ಭಲ್ಲೆ ಭಲ್ಲೆ'...

ಮತ್ತೊಮ್ಮೆ ತನ್ನ ನೆಚ್ಚಿನ ತಾಣದಲ್ಲಿ ಜಾದೂ ಪ್ರದರ್ಶಿಸಿದ ಫಿರ್ಕಿ ಹರಭಜನ್ ಸಿಂಗ್ ಮತ್ತೊಮ್ಮೆ ಭಾರತದ ವಿರೋಚಿತ ಗೆಲುವಿಗೆ ಸಾಕ್ಷಿಯಾದರು.
59 ರನ್ನುಗಳಿಗೆ ಐದು ವಿಕೆಟ್ ಉರುಳಿಸಿದ ಭಜ್ಜಿ ಗೆಲುವಿನ ರೂವಾನಿಯೆನಿಸಿಕೊಂಡರು. ಈ ಮೂಲಕ ಟೀಕಾಕಾರರಿಗೆ ದಿಟ್ಟ ಉತ್ತರ ನೀಡಿರುವ ಭಜ್ಜಿ 'ಸಿಂಗ್ ಈಸ್ ಕಿಂಗ್' ಎಂಬುದನ್ನು ಸಾಬೀತುಪಡಿಸಿದರು.
ಅಂತಿಮ ವಿಕೆಟ್‌ಗೆ 25 ರನ್ನುಗಳ ಅಮೂಲ್ಯ ಜೊತೆಯಾಟ ನೀಡಿದ ಆಮ್ಲಾ-ಮೊರ್ಕೆಲ್ ಜೋಡಿ 124 ಎಸೆತಗಳನ್ನು ಯಶಸ್ವಿಯಾಗಿ ಎದುರಿಸಿದ್ದರು. ಆದರೆ ಈ ಜೋಡಿಯನ್ನು ಭಜ್ಜಿ ಬೇರ್ಪಡಿಸುತ್ತಿದಂತೆ ಭಾರತಕ್ಕೆ ಗೆಲುವಿನ ಅಲೆ ಅಪ್ಪಲಿಸಿತು.
ಮೊದಲ ಇನ್ನಿಂಗ್ಸ್‌ನಲ್ಲಿ 347 ರನ್ನುಗಳ ಬೃಹತ್ ಹಿನ್ನೆಡೆಯೊಂದಿಗೆ ಅಂತಿಮ ದಿನದಾಟ ಮುಂದುವರಿಸಿದ ಪ್ರವಾಸಿ ದಕ್ಷಿಣ ಆಫ್ರಿಕಾಕ್ಕೆ ದ್ವಿತೀಯ ಇನ್ನೀಂಗ್ಸ್‌ನಲ್ಲೂ ಹಾಸೀಮ್ ಆಮ್ಲಾ ನೆರವಾದರು.
115/3 ಎಂಬಲ್ಲಿದ್ದ ದಿನದಾಟ ಆರಂಭಿಸಿದ ಪ್ರವಾಸಿಗರಿಗೆ ಆಮ್ಲಾ-ಆಶ್ವೆಲ್ ಪ್ರಿನ್ಸ್ ಉತ್ತಮ ಆರಂಭವನ್ನೇ ಒದಗಿಸಿದ್ದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 47 ರನ್ನುಗಳ ಜೊತೆಯಾಟ ನೀಡಿದ್ದರು.
ಈ ಹಂತದಲ್ಲಿ 23 ರನ್ ಗಳಿಸಿದ ಪ್ರಿನ್ಸ್ ಸ್ಪಿನ್ನರ್ ಹರಭಜನ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಅಬ್ರಹಾಂ ಡಿ ವಿಲಿಯರ್ಸ್‌ರನ್ನು (3), ಜೆ.ಪಿ. ಡ್ಯುಮಿನಿ (6) ಮತ್ತು ಡೇಲ್ ಸ್ಟೈನ್ (1) ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಆದರೆ ಒಂದು ಬದಿಯಿಂದ ಬಂಡೆಕಲ್ಲಿನಂತೆ ನಿಲ್ಲುವ ಮೂಲಕ ಏಕಾಂಕಿ ಹೋರಾಟ ನಡೆಸಿದ ಆಮ್ಲಾ ಅಂತಿಮ ಹಂತದ ವರೆಗೂ ಹೋರಾಟ ಕೈಬಿಡಲಿಲ್ಲ.
ಎರಡೂ ಇನ್ನಿಂಗ್ಸ್‌ನಲ್ಲೂ ಶತಕದ ಸಾಧನೆ ಮಾಡಿರುವ ಆಮ್ಲಾ ಭಾರತದ ವಿರುದ್ಧ ಭಾರತದೇ ನೆಲದಲ್ಲಿ ಈ ಸಾಧನೆ ಮಾಡಿದ ವಿಶ್ವದ ಐದನೇ ಆಟಗಾರರೆನಿಸಿಕೊಂಡರು. ಅಷ್ಟೇ ಅಲ್ಲದೆ ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಹಾಸೀಮ್ ಬ್ಯಾಟ್‌ನಿಂದ ದಾಖಲಾದ ಸತತ ಐದನೇ ಅರ್ಧಶತಕವಾಗಿದೆ.
ವೇಯ್ನ್ ಪಾರ್ನೆಲ್ ಜೊತೆ ಎಂಟನೇ ವಿಕೆಟ್‌ಗೆ ಆಮ್ಲಾ ಅಮೂಲ್ಯ70 ರನ್ನುಗಳ ಜೊತೆಯಾಟ ನೀಡಿದರು. 64 ಎಸೆತಗಳನ್ನು ಎದುರಿಸಿದ ಪಾರ್ನೆಲ್ ನಾಲ್ಕು ಬೌಂಡರಿಗಳ ನೆರವಿನಿಂದ 22 ರನ್ ಗಳಿಸಿ ಪಂದ್ಯ ಉಳಿಸಿಕೊಳ್ಳಲು ತಮ್ಮಿಂದಾಗುವ ಎಲ್ಲಾ ಯತ್ನ ನಡೆಸಿದರು.
ಆದರೆ ಈ ಜೋಡಿಯನ್ನು ವೇಗಿ ಇಶಾಂತ್ ಶರ್ಮಾ ಬೇರ್ಪಡಿಸಿದರು. ನಂತರ ಬಂದ ಪಾಲ್ ಹ್ಯಾರಿಸ್‌ರನ್ನು ಕೂಡಾ ಪೆವಿಲಿಯನ್‌ಗೆ ಅಟ್ಟಿದ ಇಶಾಂತ್ ಭಾರತಕ್ಕೆ ಮುನ್ನಡೆ ಒದಗಿಸಿದರು. ಆದರೆ ಅಂತಿಮ ವಿಕೆಟ್‌ಗೂ ದಿಟ್ಟ ಹೋರಾಟ ನೀಡಿದರೂ ದ.ಆಫ್ರಿಕಾಕ್ಕೆ ಪಂದ್ಯ ಉಳಿಸಿಕೊಳ್ಳಲಾಗಲಿಲ್ಲ.
ಇಂದಿನ ದಿನದಾಟದಲ್ಲಿ ಒಟ್ಟು 96.3 ಓವರುಗಳ ಪಂದ್ಯಾಟ ನಡೆದಿತ್ತು. ಗಾಯಾಳು ಜಹೀರ್ ಅಭಾದದಲ್ಲಿ ಸ್ಪಿನ್ನರುಗಳು ಪ್ರಭಾವಿ ದಾಳಿ ಸಂಘಟಿಸಿದರು. ಮಾರಕ ದಾಳಿ ಸಂಘಟಿಸಿದ ಹರಭಜನ್ ಸಿಂಗ್ ಐದು ಹಾಗೂ ಅಮಿಮ್ ಮಿಶ್ರಾ ಮೂರು ವಿಕೆಟ್ ಪಡೆದು ಮಿಂಚಿದರು. ನಂತರ ಅಂತಿಮ ಹಂತದಲ್ಲಿ ಮಿಂಚಿನ ಬೌಲಿಂಗ್ ಪ್ರದರ್ಶಿಸಿದ ಇಶಾಂತ್ ಶರ್ಮಾ ಕೂಡಾ ಎರಡು ವಿಕೆಟ್ ಪಡೆಯುವ ಮೂಲಕ ತಮ್ಮ ಕೆಲಸ ಯಶಸ್ವಿಯಾಗಿ ನಿರ್ವಹಿಸಿದರು.
ಮಳೆ ಹಾಗೂ ಮಂದ ಬೆಳಕಿನಿಂದಾಗಿ ನಾಲ್ಕನೇ ದಿನದಾಟ ಬಹುತೇಕ ರದ್ದುಗೊಂಡಿತ್ತಲ್ಲದೆ ಕೇವಲ 34.1 ಓವರುಗಳ ಪಂದ್ಯಾಟವಷ್ಟೇ ನಡೆದಿತ್ತು. ಆದರೆ ಪ್ರಕಾಶಮಾನವಾದ ವಾತಾವರಣದೊಂದಿಗೆ ಇಂದು ಬೆಳಗ್ಗೆ 8.45ಕ್ಕೆ ಆಟ ಆರಂಭಗೊಂಡಿತ್ತು.
Source - Webdunia
No comments:
Post a Comment