
ಪುತ್ತೂರು: ಇಲ್ಲಿನ ಕೆಎಸ್ ಆರ್‌ಟಿಸಿ ವಠಾರದಲ್ಲಿರುವ ಗಾಂಧಿಕಟ್ಟೆಯಲ್ಲಿನ ಗಾಂಧಿ ಪ್ರತಿಮೆಗೆ ಚಪ್ಪಲಿ ಹಾರ ಹಾಕಿ ರಾಷ್ಟ್ರಪಿತನನ್ನು ಅವಮಾನಿಸಿರುವ ಪ್ರಕರಣ ಶ್ರೀರಾಮ ಸೇನೆಯ ದಕ್ಷಿಣ ಪ್ರಾಂತ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮತ್ತು ತಂಡದ ಕೃತ್ಯ ಎಂದಿರುವ ಪುತ್ತೂರು ನಗರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಗಳಿಗಾಗಿ ಬಲೆ ಬೀಸಿದ್ದಾರೆ. ಮಾತ್ರವಲ್ಲದೆ ಪುತ್ತಿಲ ಮಾರುತಿ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಪುತ್ತೂರು ನಗರ ಪೊಲೀಸರು ಪುತ್ತಿಲ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಿದ್ದು, ಈ ಮಾಹಿತಿಯನ್ನರಿತ ಪುತ್ತಿಲ ಕಾರನ್ನು ಪುತ್ತೂರಿನ ಪೆಟ್ರೋಲ್ ಪಂಪ್ ಒಂದರ ಬಳಿ ನಿಲ್ಲಿಸಿ ಪರಾರಿಯಾಗಿದ್ದಾನೆ. ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುತ್ತೂರಿನ ಮುರದಲ್ಲಿನ ಉಮ್ಮರ್ ಎಂಬವರ ಅಂಗಡಿಗೆ ಬೆಂಕಿ ಹಚ್ಚಿದ ಮತ್ತು ಕೆಎಸ್‌ಆರ್‌ಟಿಸಿ ಬಸ್ಸಿಗೆ ಕಲ್ಲೆಸೆದು ಹಾನಿಗೊಳಿಸಿದ ಪ್ರಕರಣಗಳಿಗೂ ಅರುಣ್ ಕುಮಾರ್ ಪುತ್ತಿಲನೇ ಪ್ರೇರಣೆ ನೀಡಿದ್ದಾನೆ ಎಂಬ ಅಂಶವನ್ನು ಬಂಧಿತ ಆರೋಪಿಗಳಾದ ನವೀನ್, ನಾರಾಯಣ್ ಮತ್ತು ಪ್ರವೀಣ್ ವಿಚಾರಣೆಯ ವೇಳೆ ಬಹಿರಂಗಪಡಿಸಿದ್ದಾರೆ ಎಂಬ ವಿಚಾರವನ್ನು ಪೊಲೀಸರು ಪತ್ರಿಕೆಗೆ ತಿಳಿಸಿದ್ದಾರೆ. ಪುತ್ತೂರಿನಲ್ಲಿ ನೆಲೆಸಿರುವ ಶಾಂತಿ ಯನ್ನು ಕದಡಿ ಅರಾಜಕತೆ ಸೃಷ್ಟಿಸುವುದು ಈ ಕೃತ್ಯಗಳ ಹಿಂದಿನ ಉದ್ದೇಶವಾಗಿತ್ತು. ಪುತ್ತೂರು ನಗರ ಅಲ್ಲದೆ ಗ್ರಾಮಾಂತರ ಪ್ರದೇಶದ ಕೆಲವು ಭಾಗಗಳಲ್ಲಿ ಕುಕೃತ್ಯ ನಡೆಸಲು ವಿವಿಧ ತಂಡಗಳ ಮೂಲಕ ಸಂಚು ರೂಪಿಸಲಾಗಿತ್ತು. ಆದರೆ ನವೀನ್ ತಂಡ ಹೊರತುಪಡಿಸಿ ಉಳಿದ ತಂಡಗಳು ಕುಕೃತ್ಯ ನಡೆಸುವಲ್ಲಿ ಎಡವಿದ್ದವು. ಈ ಎಲ್ಲಾ ಕೃತ್ಯಗಳಿಗೂ ಅರುಣ್ ಕುಮಾರ್ ಪುತ್ತಿಲನೇ ವ್ಯವಸ್ಥಿತವಾದ ಸಂಚು ರೂಪಿಸಿ, ದುಷ್ಕತ್ಯಗಳನ್ನು ಎಸಗುವಂತೆ ಪ್ರೇರಣೆ ನೀಡಿದ್ದನು. ಮಾತ್ರವಲ್ಲದೆ ಎಲ್ಲಾ ತಂಡಗಳಿಗೂ ಮದ್ಯ ಸರಬರಾಜು ಮಾಡಿದ್ದರು ಎಂಬ ವಿಚಾರ ತನಿಖೆಯಿಂದ ತಿಳಿದುಬಂದಿರುವುದಾಗಿ ಪುತ್ತೂರು ನಗರ ಪೊಲೀಸರು ತಿಳಿಸಿದ್ದಾರೆ.
source; jayakirana
No comments:
Post a Comment