ಸಂತ್ರಸ್ತರ ಮನೆ ನಿರ್ಮಾಣಕ್ಕೆ ಹಣ ನೀಡುವ ದಾನಿಗಳ ಕೊರತೆ
ಉತ್ತರ ಕರ್ನಾಟಕದ ನೆರೆ ಪೀಡಿತರಿಗೆ ಗಣಿ ಮಾಲೀಕರ ವತಿಯಿಂದ ಮನೆ ನಿರ್ಮಿಸಿ ಕೊಡುವುದಾಗಿ ಘೋಷಿಸಿದ್ದ ಬಳ್ಳಾರಿಯ ‘ಗಣಿಧಣಿ’ ಸಚಿವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಂಗಳೂರು: ಉತ್ತರ ಕರ್ನಾಟಕದ ನೆರೆ ಪೀಡಿತರಿಗೆ ಗಣಿ ಮಾಲೀಕರ ವತಿಯಿಂದ ಮನೆ ನಿರ್ಮಿಸಿ ಕೊಡುವುದಾಗಿ ಘೋಷಿಸಿದ್ದ ಬಳ್ಳಾರಿಯ ‘ಗಣಿಧಣಿ’ ಸಚಿವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಾರಣ, ಕಟ್ಟಡ ನಿರ್ಮಾಣಕ್ಕೆ ಅಗತ್ಯ ಇರುವಷ್ಟು ಹಣವನ್ನು ನೀಡುವ ದಾನಿಗಳ ಕೊರತೆ ಉಂಟಾಗಿದೆ.
ಬಳ್ಳಾರಿಯ ಮೂರು ತಾಲ್ಲೂಕುಗಳಲ್ಲಿ 42 ಗಣಿ ಕಂಪೆನಿಗಳು ಇದ್ದರೂ, ಕಳೆದ ಅಕ್ಟೋಬರ್‌ವರೆಗೆ ಕೇವಲ ಆರು ಕಂಪೆನಿಗಳ ಮಾಲೀಕರು ದೇಣಿಗೆ ನೀಡಲು ಮುಂದೆ ಬಂದಿದ್ದಾರೆ. ಇಷ್ಟು ಹಣ ಕಟ್ಟಡ ನಿರ್ಮಾಣಕ್ಕೆ ಸಾಲದಾಗಿರುವ ಹಿನ್ನೆಲೆಯಲ್ಲಿ, ರೆಡ್ಡಿ ಸಹೋದರರು ಪೇಚಿಗೆ ಸಿಲುಕಿದ್ದಾರೆ.
ಸಿರಗುಪ್ಪ ಹಾಗೂ ಹಡಗಲಿ ತಾಲ್ಲೂಕುಗಳಲ್ಲಿ 6.800 ಮನೆಗಳನ್ನು ನಿರ್ಮಾಣ ಮಾಡಿಕೊಡು ವುದಾಗಿ ಈ ಸಹೋದರರು ಹೇಳಿಕೊಂಡಿದ್ದಾಗಿ ಸರ್ಕಾರದ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ. ವಸತಿ ನಿರ್ಮಾಣಕ್ಕೆ 500 ಕೋಟಿ ರೂಪಾಯಿಗಳನ್ನು ನೀಡಲು ತಮ್ಮಲ್ಲಿ ಸಾಮರ್ಥ್ಯ ಇರುವುದಾಗಿ ರೆಡ್ಡಿ ಸಹೋದರರು ಹಿಂದೊಮ್ಮೆ ಹೇಳಿದ್ದರು. ಮುಖ್ಯ ಮಂತ್ರಿಗಳ ಅನುಪಸ್ಥಿತಿಯಲ್ಲಿ ಸಿರಗುಪ್ಪ ಹಾಗೂ ಗದಗದ ಕೆಲವೊಂದು ಊರುಗಳಲ್ಲಿ ವಸತಿ ಯೋಜನೆಗೆ ಅಡಿಗಲ್ಲನ್ನೂ ಹಾಕಿದ್ದರು.
ಆದರೆ ಈವರೆಗೆ ಒಂದೂ ಕಟ್ಟಡ (ಮನೆ) ನಿರ್ಮಾಣ ಮಾಡಲಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಇವರು ಮಾಡಿದ ವಾಗ್ದಾನದಂತೆ 18 ಗ್ರಾಮಗಳಲ್ಲಿ 6,580 ಮನೆಗಳ ನಿರ್ಮಾಣಕ್ಕೆ ಸುಮಾರು 508.29 ಎಕರೆ ಜಮೀನಿನ ಅಗತ್ಯ ಇದೆ. ಈ ಪೈಕಿ 35 ಎಕರೆ ಸರ್ಕಾರಿ ಹಾಗೂ 443.17 ಎಕರೆ ಖಾಸಗಿ ಜಮೀನು ಕೂಡ ಖರೀದಿ ಮಾಡಲಾಗಿದೆ.
ಇದಕ್ಕಾಗಿ ಸರ್ಕಾರ 18 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. 11 ಕೋಟಿ ರೂಪಾಯಿಗಳನ್ನು ಇಲ್ಲಿಯವರೆಗೆ ಖರ್ಚು ಮಾಡಲಾಗಿದೆ.
ಸಿರಗುಪ್ಪ ತಾಲ್ಲೂಕಿನ ಮಾಟೂರು ಮತ್ತು ಡಿ.ಎಸ್.ಕುಡ್ಲೂರು ಗ್ರಾಮದಲ್ಲಿ ಬಿಎಂಎಂ ಸಂಸ್ಥೆಯೊಂದೇ ಈ ತನಕ ಕಟ್ಟಡ ನಿರ್ಮಾಣ ಆರಂಭಿಸಿದೆ.
ನೆರೆ ಸಂತ್ರಸ್ತರಿಗೆ ಈಗ ಸರ್ಕಾರ ನಿರ್ಮಿಸಿರುವ ಮನೆಗಳ ಅಡಿಪಾಯ 216.58 ಚದರ ಅಡಿ ಮಾತ್ರ ಇರುವ ಹಿನ್ನೆಲೆಯಲ್ಲಿ, ಅದು ಸಂತ್ರಸ್ತರಿಗೆ ಅಷ್ಟೊಂದು ಸಮಾಧಾನ ನೀಡಲಿಕ್ಕಿಲ್ಲ ಎನ್ನುವುದು ಬಳ್ಳಾರಿಯ ಕೆಲವರ ಅಭಿಮತ.
ಸಂತ್ರಸ್ತರು ಈಗ ವಾಸವಾಗಿರುವ ಮನೆಗಳ ನೀರು ಮತ್ತು ವಿದ್ಯುತ್ ಸೌಲಭ್ಯಗಳನ್ನು ಕಡಿತಗೊಳಿಸಲಾಗಿದ್ದು, ಅವರನ್ನು ಹೊಸ ಮನೆಗಳಿಗೆ ಸ್ಥಳಾಂತರಗೊಳ್ಳುವಂತೆ ಈಗಾಗಲೇ ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ವಾರ್ತೆ
Subscribe to:
Post Comments (Atom)
No comments:
Post a Comment