‘ನೈಸ್ ಸಂಸ್ಥೆಗೆ ರೈತರ ಜಮೀನನ್ನು ವಶಪಡಿಸಿಕೊಳ್ಳಲು ಮುಂದೆ ಬರುವ ಅಧಿಕಾರಿಗಳನ್ನು ಹಿಡಿದು ಥಳಿಸಿರಿ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಕರೆ ನೀಡಿದರು.
ರಾಜರಾಜೇಶ್ವರಿನಗರ: ‘ನೈಸ್ ಸಂಸ್ಥೆಗೆ ರೈತರ ಜಮೀನನ್ನು ವಶಪಡಿಸಿಕೊಳ್ಳಲು ಮುಂದೆ ಬರುವ ಅಧಿಕಾರಿಗಳನ್ನು ಹಿಡಿದು ಥಳಿಸಿರಿ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಕರೆ ನೀಡಿದರು.
ಹೆಮ್ಮಿಗೆಪುರದಲ್ಲಿ ಮಂಗಳವಾರ ನಡೆದ ಬೃಹತ್ ರೈತ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ನೈಸ್ ಕಂಪೆನಿಯ ಮುಖ್ಯಸ್ಥ ಅಶೋಕ್ ಖೇಣಿ ಮಹಾನ್ ಕಳ್ಳ. ಅವರೊಡನೆ ಸೇರಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಹ ಭ್ರಷ್ಟರಾಗಿದ್ದಾರೆ’ ಎಂದು ಟೀಕಿಸಿದರು.
‘ರಾಜ್ಯದ ಅಭಿವೃದ್ಧಿ ಕೆಲಸ ಮಾಡದೆ ಕೈಗಾರಿಕೆ, ಉಪನಗರ, ರಸ್ತೆ ಅಭಿವೃದ್ಧಿ ನೆಪದಲ್ಲಿ ರೈತರ ಭೂಮಿಯನ್ನು ಲೂಟಿ ಮಾಡುತ್ತಿರುವ ಯಡಿಯೂರಪ್ಪ ಅವರಿಗೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ’ ಎಂದು ಅವರು ದೂರಿದರು.
‘ರಾಜ್ಯದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಆರ್‌ಎಸ್‌ಎಸ್ ಮುಖಂಡರು ಕೇಶವಕೃಪಾದಲ್ಲಿ ಕುಳಿತು ನೋಡುತ್ತಿದ್ದಾರೆ. ಅವರ ಹಾಗೆ ಕಣ್ಣಿದ್ದು ಕುರುಡರಾಗಿ ಕುಳಿತುಕೊಳ್ಳಲು ನನ್ನಿಂದ ಸಾಧ್ಯವಿಲ್ಲ. ಈ ಬಗ್ಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ರೈತರನ್ನು ಜಾಗೃತಿಗೊಳಿಸಲು ರೈತ ಆಂದೋಲನ ಹಮ್ಮಿಕೊಳ್ಳಲಾಗಿದೆ’ ಎಂದು ಅವರು ಹೇಳಿದರು.
ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ‘ಅಭಿವೃದ್ಧಿ ಹೆಸರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಮುರಗೇಶ್ ನಿರಾಣಿ, ಆರ್. ಅಶೋಕ, ಕಟ್ಟಾಸುಬ್ರಹ್ಮಣ್ಯನಾಯ್ಡು, ಶಾಸಕಿ ಶೋಭಾ ಕರಂದ್ಲಾಜೆ ರಿಯಲ್ ಎಸ್ಟೇಟ್ ವ್ಯಾಪಾರ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.
ಸಿಪಿಎಂ ಮುಖಂಡ ಜಿ.ವಿ. ಶ್ರೀರಾಮರೆಡ್ಡಿ ಮಾತನಾಡಿ, ‘ಕಣ್ಣು, ಮೂಗು, ಕಿವಿ ಇಲ್ಲದ ಸರ್ಕಾರ ನೈಸ್ ಸಂಸ್ಥೆಯ ಅವ್ಯವಹಾರಗಳಿಗೆ ಕಡಿವಾಣ ಹಾಕದೇ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಿರುವುದೇ ದೊಡ್ಡ ಸಾಧನೆಯಾಗಿದೆ’ ಎಂದು ವ್ಯಂಗ್ಯವಾಡಿದರು.
ಮಾಜಿ ಸಂಸದ ಸಿ. ನಾರಾಯಣಸ್ವಾಮಿ, ಅಖಿಲ ಭಾರತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ವರದರಾಜನ್, ಡಿಎಸ್‌ಎಸ್ ಮುಖಂಡ ವಿ. ನಾಗರಾಜ್ ಮಾತನಾಡಿದರು.
ರೈತ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಪಂಚಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಅಬ್ದುಲ್ ಅಜೀಮ್, ಇ. ಕೃಷ್ಣಪ್ಪ, ಜೆಡಿಎಸ್ ಮುಖಂಡರಾದ ನಾರಾಯಣರಾವ್, ಅಂದಾನಪ್ಪ, ಬಿ.ಎಚ್. ಚಂದ್ರಶೇಖರ್, ಆರ್. ಪ್ರಕಾಶ್, ಹನುಮಂತರಾಯಪ್ಪ, ಟಿ.ಎನ್. ಜವರಾಯೀಗೌಡ, ಎಂ.ಬಿ. ಗೋವಿಂದೇಗೌಡ, ಯಶೋಧಾ ತಿಮ್ಮೇಗೌಡ, ಸತ್ಯನಾರಾಯಣ, ಯಶೋಧಮ್ಮ, ಟಿ.ಎಂ. ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವೆಂಕಟಾಚಲಯ ಸ್ವಾಗತಿಸಿದರು. ಕನ್ನಡ ಸೇನೆ ರಾಜ್ಯಾಧ್ಯಕ್ಷ ಲಿಂಗೇಗೌಡ ನಿರೂಪಿಸಿದರು
ಪ್ರಜಾವಾಣಿ ವಾರ್ತೆ
Subscribe to:
Post Comments (Atom)
No comments:
Post a Comment