ಮುಂಬೈ, ಬುಧವಾರ, 17 ಫೆಬ್ರವರಿ 2010( 11:04 IST )
14ರ ಹರೆಯದಲ್ಲಿ ಮದುವೆಯಾಗಿ ರಿಮಾಂಡ್ ಹೋಮ್ ಸೇರಿರುವ ಮುಸ್ಲಿಂ ಹುಡುಗಿಯೊಬ್ಬಳು, ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಮೈ ನೆರೆದ ಬಳಿಕ ಮದುವೆಯಾಗಬಹುದು ಎಂದು ನ್ಯಾಯಾಲಯದಲ್ಲಿ ವಾದ ಮಾಡುತ್ತಿದ್ದಾಳೆ.
ಆದರೆ ಈ ಪ್ರಕರಣಕ್ಕೆ ಬಾಲ್ಯವಿವಾಹ ತಡೆ ಕಾಯ್ದೆ ಅಥವಾ ಮುಸ್ಲಿಂ ವೈಯಕ್ತಿಕ ಕಾನೂನು ಇವೆರಡರಲ್ಲಿ ಯಾವುದನ್ನು ಅನ್ವಯಿಸಲಾಗುತ್ತದೆ ಎಂಬುದನ್ನು ಬಾಂಬೆ ಹೈಕೋರ್ಟ್ ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಗಳಿವೆ.
ಔರಂಗಾಬಾದ್‌ನ ಝಾಕಿಯಾ ಬೇಗಂ ಎಂಬಾಕೆ ಬಾಲಾಪರಾಧಿಗಳ ಜೈಲಿನಲ್ಲಿರುವ ತನ್ನ 14ರ ಹರೆಯದ ಪುತ್ರಿಯನ್ನು ಬಿಡುಗಡೆ ಮಾಡಿ ತನ್ನ ವಶಕ್ಕೆ ನೀಡುವಂತೆ ಕೋರಿ ಬಾಂಬೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಝಾಕಿಯಾರವರ ಮಗಳನ್ನು ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಮದುವೆ ಮಾಡಿಕೊಡಲಾಗಿತ್ತು. ಆದರೆ ಇದು ಬಾಲ್ಯವಿವಾಹ ತಡೆ ಕಾಯ್ದೆಯನ್ನು ಉಲ್ಲಂಘಿಸಿದಂತಾಗಿದೆ ಎಂದು ಆಕೆಯ ಅಂಕಲ್ ಪೊಲೀಸರಿಗೆ ದೂರು ನೀಡಿದ್ದರು.
ಬಾಲಕಿಯನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಆಕೆಯನ್ನು ಮಕ್ಕಳ ಕಲ್ಯಾಣ ಸಮಿತಿಯೆದುರು ಹಾಜರುಪಡಿಸಿದ್ದು, ಪ್ರಸಕ್ತ ಆಕೆ ರಿಮಾಂಡ್ ಹೋಂನಲ್ಲಿದ್ದಾಳೆ.
ಝಾಕಿಯಾ ಇದೀಗ ಹೈಕೋರ್ಟ್ ಮೊರೆ ಹೋಗಿದ್ದಾರೆ. 'ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಹುಡುಗಿಯೊಬ್ಬಳು ಒಮ್ಮೆ ಮೈ ನೆರೆದಳೆಂದರೆ ಆಕೆ ಮದುವೆಯಾಗಬಹುದು. ಹಾಗಾಗಿ ಪೊಲೀಸರ ಕ್ರಮ ಕಾನೂನು ಬಾಹಿರ' ಎಂದು ವಾದಿಸುತ್ತಿದ್ದಾರೆ.
ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಬಾಲಕಿಯೊಬ್ಬಳು ಪ್ರೌಢಾವಸ್ಥೆಗೆ ಬಂದ ನಂತರ ಮದುವೆಯಾಗಬಹುದಾದರೆ, ಬಾಲ್ಯವಿವಾಹ ತಡೆ ಕಾಯ್ದೆ ಪ್ರಕಾರ 18 ವರ್ಷದೊಳಗಿನ ಹುಡುಗಿಯರಿಗೆ ಮದುವೆ ಯಾವ ಧರ್ಮದಲ್ಲಾದರೂ ನಿಷಿದ್ಧ. ಇದನ್ನೇ ಸರಕಾರಿ ವಕೀಲೆ ಉಷಾ ಕೇಜಾರಿವಾಲ್ ಕೂಡ ವಾದಿಸುತ್ತಿದ್ದಾರೆ.
ಅರ್ಜಿದಾರರ ವಕೀಲ ಪ್ರಕಾಶ್ ವಾಘ್ ಅವರು ಬಾಲ್ಯವಿವಾಹ ತಡೆ ಕಾಯ್ದೆಯ ವಿಸ್ತಾರದ ಕುರಿತು ಪ್ರಶ್ನಿಸಿದ್ದಾರೆ. ಆದರೆ ನ್ಯಾಯಾಧೀಶ ರಂಜನಾ ದೇಸಾಯಿ ಮತ್ತು ಮೃದುಲಾ ಭಟ್ಕರ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಮಕ್ಕಳ ಕಲ್ಯಾಣ ಸಮಿತಿಯನ್ನೂ ಈ ಪ್ರಕರಣದಲ್ಲಿ ಒಂದು ಪಕ್ಷವಾಗಿ ಪರಿಗಣಿಸುವಂತೆ ನಿರ್ದೇಶನ ನೀಡಿದೆ.
ಈ ಸಂಬಂಧ ನಾವು ಒಂದು ಕಾನೂನನ್ನು ರೂಪಿಸಬೇಕಾಗಿದೆ. ಅಪ್ರಾಪ್ತರ ಮದುವೆಗೆ ಅವಕಾಶ ನೀಡಿದಲ್ಲಿ ನಾಳೆ 12ರ ಹರೆಯದ ಹುಡುಗಿಯೂ ಮದುವೆಯಾಗುತ್ತಾಳೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
source:webdunia
Feb 17, 2010
Subscribe to:
Post Comments (Atom)
No comments:
Post a Comment