

ಚೆನ್ನೈ:ಆರಂಭಿಕ ರಾಬಿನ್ ಉತ್ತಪ್ಪ (51) ಮತ್ತು ಸಿ.ಎಂ. ಗೌತಮ್ (68) ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡದವರು ಇಲ್ಲಿ ಹೈದರಾಬಾದ್ ವಿರುದ್ಧ ನಡೆದ ಸುಬ್ಬಯ್ಯ ಪಿಳ್ಳೈ ಕ್ರಿಕೆಟ್ ಟೂರ್ನಮೆಂಟ್‌ನ ಅಂತಿಮ ಏಕದಿನ ಪಂದ್ಯವನ್ನು 81 ರನ್ನುಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.
ಬೋನಸ್ ಅಂಕದೊಂದಿಗೆ ಪಂದ್ಯ ವಶಪಡಿಸಿಕೊಂಡಿರುವ ಕರ್ನಾಟಕ ಇದೀಗ ಒಟ್ಟು 20 ಅಂಕ ಸಂಪಾದಿಸಿದ್ದು, ದ್ವಿತೀಯ ಸ್ಥಾನದಲ್ಲಿದೆ. ಮೊದಲ ಸ್ಧಾನದಲ್ಲಿರುವ ತಮಿಳುನಾಡು ಕೂಡಾ ಆಂಧ್ರಪ್ರದೇಶ ವಿರುದ್ಧ ನಡೆದ ತನ್ನ ಅಂತಿಮ ಪಂದ್ಯವನ್ನು ಗೆದ್ದುಕೊಂಡಿತ್ತು.
ಈ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಗಣೇಶ್ ಸತೀಶ್ ಮುನ್ನಡೆಸಿದ್ದರು. ನಾಯಕ ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಮತ್ತು ಜೊನಾಥನ್‌ಗೆ ವಿಶ್ರಾಂತಿ ಕಲ್ಪಿಸಲಾಗಿತ್ತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ಉತ್ತಪ್ಪ ಹಾಗೂ ಗೌತಮ್ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 50 ಓವರುಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 317 ರನ್ನುಗಳ ಬೃಹತ್ ಮೊತ್ತ ಪೇರಿಸಿತ್ತು.
ಈ ಪಂದ್ಯದಲ್ಲಿ ಉತ್ತಪ್ಪಗೆ ಆರಂಭಿಕ ಜೋಡಿಯಾಗಿ ಯುವ ಭರವಸೆ ಆಟಗಾರ ಕೆ.ಎಲ್ ರಾಹುಲ್ ಕ್ರೀಸಿಗಿಳಿಸಿದ್ದರು. ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಹುಲ್ 47 ಎಸೆತಗಳಲ್ಲಿ ಐದು ಬೌಂಡರಿಗಳ ನೆರವಿನಿಂದ 36 ರನ್ ಗಳಿಸುವ ಮೂಲಕ ತಮ್ಮ ಸಾಮರ್ಥ್ಯ ಮೆರೆದಿದ್ದರು.
ಉತ್ತಪ್ಪ-ರಾಹುಲ್ ಜೋಡಿ ಮೊದಲ ವಿಕೆಟ್‌ಗೆ 13.2 ಓವರುಗಳಲ್ಲಿ 93 ರನ್ ಒಟ್ಟು ಸೇರಿಸಿತ್ತು. ಬಿರುಸಿನ ಆಟಕ್ಕಿಳಿದ ಉತ್ತಪ್ಪ ಕೇವಲ 34 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಒಂದು ಮನವೋಹಕ ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು.
ನಂತರ ಬಂದ ಮನೀಷ್ ಪಾಂಡೆ 28 ಹಾಗೂ ಸತೀಶ್ 24 ರನ್ ಗಳಿಸಿದರು. ಆದರೆ ಕೊನೆಯವರೆಗೂ ಅಜೇಯರಾಗಿ ಉಳಿದ ಗೌತಮ್ 71 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 68 ರನ್ ಗಳಿಸಿದರು.
ಗೌತಮ್‌ಗೆ ಉತ್ತಮ ಬೆಂಬಲ ನೀಡಿದ ಸ್ಟುವರ್ಟ್ ಬಿನ್ನಿ 41 ಹಾಗೂ ಆರ್. ಭಟ್ಕಲ್ 38 ರನ್ ಗಳಿಸಿದರು.
ನಂತರ ಪರಿಣಾಮಕಾರಿ ದಾಳಿ ಸಂಘಟಿಸಿದ ಭಟ್ಕಲ್, ಯು.ಬಿ. ಪಾಟೀಲ್ ಮತ್ತು ಆರ್. ನಿನಾನ್ ಬೌಲಿಂಗ್‌ಗೆ ಕುಸಿದ ಹೈದರಾಬಾದ್ 48 ಓವರುಗಳಲ್ಲಿ 236 ರನ್ನುಗಳಿಗೆ ಸರ್ವಪತನಗೊಳ್ಳುವ ಮೂಲಕ 81 ರನ್ನುಗಳಿಂದ ಸೊಲೊಪ್ಪಿಕೊಂಡಿತು.
No comments:
Post a Comment