
ಮಂಗಳೂರು, ಮಾ.೨೭: ಹಝ್ರತ್ ಖುತುಬುಝ್ಝಮಾನ್ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ತಂಙಳ್‌ರವರ ಹೆಸರಿನಲ್ಲಿ ಐದು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಐತಿಹಾಸಿಕ ಉಳ್ಳಾಲ ಉರೂಸ್‌ಗೆ ಖಾಝಿ ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುಲ್ ರಹ್‌ಮಾನ್ ಅಲ್ ಬುಖಾರಿಯವರು ಝಿಯಾ ರತ್ ಮತ್ತು ಧ್ವಜಾರೋಹಣ ಮಾಡಿ ಚಾಲನೆ ನೀಡಿದ್ದು, ಇದೀಗ ಭರದ ಸಿದ್ಧತೆ ನಡೆಯುತ್ತಿದೆ ಎಂದು ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಹಾಜಿ ಯು.ಕೆ. ಮೋನು ಕಣಚೂರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎಪ್ರಿಲ್ ೧ರಿಂದ ೨೫ರವರೆಗೆ ನಡೆಯುವ ಉರೂಸ್ ಸಮಾರಂಭ ದಲ್ಲಿ ದೇಶ ವಿದೇಶದ ಪ್ರಖ್ಯಾತ ಪಂಡಿತರಿಂದ ಧಾರ್ಮಿಕ ಉಪನ್ಯಾಸ, ದ್ಸಿಕ್ರ್ ಮಜ್ಲಿಸ್, ಸಯ್ಯಿದ್ ಮದನಿ ಅರಬಿಕ್ ಕಾಲೇಜಿನ ೪೦ನೆ ವಾರ್ಷಿಕ ಸನದುದಾನ, ಸೌಹಾರ್ದ ಸಮಾರಂಭ, ಸರಳ ಸಾಮೂಹಿಕ ವಿವಾಹ, ಸಾಮಾಜಿಕ ಮತ್ತು ರಾಜಕೀಯ ಮುಖಂಡರ ಸಾರ್ವಜನಿಕ ಸಭೆ, ಸಂದಲ್ ಮೆರವಣಿಗೆ, ಮೌಲೂದ್ ಪಾರಾಯಣ, ಅನ್ನದಾನ ಕಾರ್ಯಕ್ರಮ ಜರಗಲಿದೆ.
ಎ.೧ರಂದು ಸಂಜೆ ೭ ಗಂಟೆಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ಸಮಕ್ಷಮ ಉಳ್ಳಾಲ ತಂಙಳ್‌ರ ವಿಶೇಷ ದುಆದೊಂದಿಗೆ ಕಾರ್ಯಕ್ರಮ ಉದ್ಘಾಟನೆಗೊ ಳ್ಳಲಿದೆ. ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಯು.ಕೆ. ಮೋನು ಸಮಾ ರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಎ.೫ರಂದು ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡರ ಸಮಾರಂಭವನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಲ್ಯ ಮಠದ ರಾಜಯೋಗಿ ಸದ್ಗುರು ರಮಾನಂದ ಸ್ವಾಮೀಜಿ, ಮಂಗಳೂರು ಬಿಷಪ್ ಡಾ. ಅಲೋಶಿಯಸ್ ಪೌಲ್ ಡಿಸೋಜ, ಶಾಸಕರಾದ ಅಭಯಚಂದ್ರ ಜೈನ್ ಮತ್ತು ಯು.ಟಿ. ಖಾದರ್ ಭಾಗವಹಿಸಲಿದ್ದಾರೆ.
ಎ.೧೧ರಂದು ೧೬ ಜೋಡಿಗೆ ಸರಳ ಸಾಮೂಹಿಕ ಮದುವೆ ನಡೆಯಲಿದ್ದು, ಪ್ರವಾಸೋದ್ಯಮ ಸಚಿವ ಜನಾದನ ರೆಡ್ಡಿ, ಆರೋಗ್ಯ ಸಚಿವ ಶ್ರೀರಾಮಲು, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಖುಸ್ರೋ ಖುರೇಶಿ ಭಾಗವಹಿಸಲಿದ್ದಾರೆ. ಅಂದು ಮಧ್ಯಾಹ್ನ ೨ ಗಂಟೆಗೆ ಅರಬಿಕ್ ಕಾಲೇಜಿನಿಂದ ಪದವಿ ಪಡೆದ ೪೦ ಮಂದಿ ಪದಧರರಿಗೆ ಸನದುದಾನ ಕಾರ್ಯಕ್ರಮ ನೆರವೇರಲಿದೆ.
ಎ.೧೫ರಿಂದ ೨೪ರವರೆಗೆ ನಡೆಯುವ ಕಾರ್ಯಕ್ರಮಗಳಲ್ಲಿ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್, ಕೇಂದ್ರ ಕಾನೂನು ಸಚಿವ ಎಂ. ರಪ್ಪ ಮೊಯ್ಲಿ, ರೈಲ್ವೆ ಸಚಿವ ಕೆ.ಎಚ್. ಮುನಿಯಪ್ಪ, ರಾಜ್ಯಸಭಾ ಉಪ ಸಭಾಪತಿ ಕೆ.ಎ. ರಹ್ಮಾನ್ ಖಾನ್, ರಾಜ್ಯ ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ, ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮತ್ತಿತರ ಮುಖಂಡರು ಭಾಗವಹಿ ಸಲಿದ್ದಾರೆ.
ಎ.೨೪ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ದರ್ಗಾದ ಜತೆ ಕಾರ್ಯದರ್ಶಿ ಯು.ಟಿ. ಇಲ್ಯಾಸ್, ಪ್ರಚಾರ ಸಮಿತಿಯ ಸಂಚಾಲಕ ಎ.ಕೆ. ಮುಹಿಯುದ್ದೀನ್, ಮುಫತ್ತಿಸ್ ಇಸ್ಮಾಯೀಲ್ ಮದನಿ ನೆಕ್ಕಿಲಾಡಿ, ಮ್ಯಾನೇಜರ್ ಅಹ್ಮದ್ ಬಾವಾ ಯು.ಎ.ಉಪಸ್ಥಿತರಿದ್ದರು.
ಶಾಂತಿ ಸಮಿತಿ ರಚನೆ
ಉಳ್ಳಾಲದಲ್ಲಿ ಶಾಶ್ವತವಾಗಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ೩೦ ಮಂದಿಯ ಸಮಿತಿಯೊಂದನ್ನು ರಚಿಸಲಾಗಿದೆ. ಇದರಲ್ಲಿ ಉಳ್ಳಾಲ ದರ್ಗಾ ಅಧ್ಯಕ್ಷರು, ಶ್ರೀಚೀರುಂಭ ಭಗವತಿ ಕ್ಷೇತ್ರದ ಅಧ್ಯಕ್ಷರು, ಮೊಗರ ಸಂಘದ ಅಧ್ಯಕ್ಷರು, ಕ್ರಿಶ್ಚಿಯನ್ ಮುಖಂಡರಿದ್ದಾರೆ.
ಯಾವುದೇ ಸಣ್ಣಪುಟ್ಟ ಘಟನೆ ಸಂಭವಿಸಿದ ತಕ್ಷಣ ಸಭೆ ಸೇರಿ ಪರಿಹಾರ ಕಲ್ಪಿಸಲು ನಿರ್ಧರಿಸಲಾಗಿದೆ.
. ೨೪ ಗಂಟೆಯೂ ಸಂದರ್ಶನಕ್ಕೆ ಅವಕಾಶ
ಎ.೧ರಿಂದ ೨೫ರವರೆಗೆ ನಡೆಯುವ ಉರೂಸ್ ಸಮಾರಂಭದ ಹಿನ್ನೆಲೆಯಲ್ಲಿ ದಿನದ ೨೪ ಗಂಟೆಯೂ ಸಂದರ್ಶನಕ್ಕಾಗಿ ದರ್ಗಾದ ಬಾಗಿಲು ತೆರೆದಿರುತ್ತದೆ.
. ಉರೂಸ್ ಸಮಿತಿ ರಚನೆ: ೨೫ ದಿನಗಳ ಉರೂಸ್ ಕಾರ್ಯಕ್ರಮಕ್ಕೆ ಸುಮಾರು ೨೫ ಲಕ್ಷ ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಜಮಾಅತ್‌ನ ೪೮ ಮಂದಿ ಸದಸ್ಯರಲ್ಲದೆ, ೪ ವಲಯದಿಂದ ೨೦೦ ಮಂದಿಯನ್ನೊಳಗೊಂಡ ಉರೂಸ್ ಸಮಿತಿಯನ್ನು ರಚಿಸಲಾಗಿದೆ. ಆ ಪೈಕಿ ೨೦ ಮಂದಿಯ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ.
. ಅನುದಾನ ಮಂಜೂರು: ರಸ್ತೆಗಳ ದುರಸ್ತಿ, ಕುಡಿಯುವ ನೀರು ಪೂರೈಕೆ, ನೈರ್ಮಲ್ಯ, ನಿರಂತರ ವಿದ್ಯುತ್ ಪೂರೈಕೆ ಇತ್ಯಾದಿ ಸೌಲಭ್ಯಗಳೊಂದಿಗೆ ಶಾಸಕರ, ಉಸ್ತುವಾರಿ ಸಚಿವರ ಸಹಕಾರದಿಂದ ರಾಜ್ಯ ಸರಕಾರ ಅನುದಾನ ಮಂಜೂರು ಮಾಡಿದೆ. ಸ್ಥಳೀಯ ಪುರಸಭೆಯ ಸಹಕಾರವಲ್ಲದೆ, ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಜಿಲ್ಲಾಡಳಿತವೂ ಸಹಕಾರ ನೀಡಿದೆ.
No comments:
Post a Comment