ಪುತ್ತೂರು, ಮಾ.೧೫: ಅಡಿಕೆಗೆ ಸಮರ್ಪಕವಾದ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಜಿಲ್ಲೆಯ ಎಲ್ಲಾ ಅಡಿಕೆ ಬೆಳೆಗಾರರನ್ನು ಸೇರಿಸಿಕೊಂಡು ಮಾ.೨೯ರಂದು ಸರಕಾರಕ್ಕೆ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಸ್ವಾಭಿಮಾನಿ ವೇದಿಕೆಯ ಅಧ್ಯಕ್ಷೆ , ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕೇರಳ ಮಾದರಿಯಲ್ಲಿ ರಾಜ್ಯದ ರೈತರಿಗೂ ಬೆಂಬಲ ಬೆಲೆ ನೀಡುವಂತೆ ಹಕ್ಕೊತ್ತಾಯ ಮಾಡುವುದಾಗಿ ತಿಳಿಸಿದ ಅವರು, ಈ ಹಿನ್ನೆಲೆಯಲ್ಲಿ ಮಾ.೨೪ರಂದು ಪುತ್ತೂರು ವ್ಯಾಪ್ತಿಯ ಅಡಿಕೆ ಬೆಳೆಗಾರರ ಸಮಾಲೋಚನಾ ಸಭೆಯನ್ನು ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಪೂರ್ವಾಹ್ನ ೧೦ಗಂಟೆಗೆ ಹಮ್ಮಿಕೊಂಡಿದ್ದು, ಈ ಸಭೆಯಲ್ಲಿ ಅಡಿಕೆಗೆ ಬೆಂಬಲ ಬೆಲೆ ಆಂದೋಲನದ ರೂಪುರೇಷೆಗಳನ್ನು ನಿರ್ಧರಿಸಲಾಗುವುದು ಎಂದರು.
ಅಡಿಕೆಗೆ ಬೆಂಬಲ ಬೆಲೆ ಆಂದೋಲನ ಕ್ರಿಯಾ ಸಮಿತಿ ಅಡಿಯಲ್ಲಿ ರಾಜಕೀಯ ರಹಿತವಾಗಿ ಎಲ್ಲಾ ಅಡಿಕೆ ಬೆಳೆಗಾರರನ್ನು ಒಳಗೊಂಡಂತೆ ಈ ಸಭೆಯಲ್ಲಿ ಅಡಿಕೆ ಬೆಳೆಗಾರರ ಹಿತರಕ್ಷಣಾ ಸಮಿತಿಯನ್ನು ರೂಪಿಸುವುದಾಗಿ ಅವರು ಹೇಳಿದರು.
ಈಗಾಗಲೇ ಸುಳ್ಯದಲ್ಲಿ ಎಂ.ಪಿ.ಉಮೇಶ್ ಅಧ್ಯಕ್ಷತೆಯಲ್ಲಿ ಅಡಿಕೆ ಬೆಳೆಗಾರರ ಹಿತರಕ್ಷಣಾ ಸಮಿತಿಯನ್ನು ರಚಿಸಲಾಗಿದ್ದು, ಮಾ.೧೫ರಂದು ವಿಟ್ಲದಲ್ಲಿ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಹಾಗೂ ಮಾ.೨೯ರಂದು ಪುತ್ತೂರಿನ ಎಲ್ಲಾ ಅಡಿಕೆ ಕೃಷಿಕರನ್ನು ಸೇರಿಸಿಕೊಂಡು ದರ್ಬೆಯಿಂದ ಬೃಹತ್ ಮೆರವಣಿಗೆ ನಡೆಸಲಾಗುವುದು. ಬಳಿಕ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಹಕ್ಕೊತ್ತಾಯ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು, ಆದಾಗ್ಯೂ ಸರಕಾರ ಈ ಬಗ್ಗೆ ಗಮನ ಹರಿಸದಿದ್ದಲ್ಲಿ ಮುಖ್ಯಮಂತ್ರಿಗಳ ಮನೆಯ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ವಾಭಿಮಾನಿ ವೇದಿಕೆಯ ಉಪಾಧ್ಯಕ್ಷ ಅಣ್ಣಾ ವಿನಯ ಚಂದ್ರ, ಎಂ.ಬಿ.ವಿಶ್ವನಾಥ್, ಕಾರ್ಯದರ್ಶಿ ರಾಮಚಂದ್ರ ಅಮಲ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ನ್ಯಾಯವಾದಿ ಎಂ.ವೆಂಕಪ್ಪ ಗೌಡ ಉಪಸ್ಥಿತರಿದ್ದರು.
Subscribe to:
Post Comments (Atom)
No comments:
Post a Comment