
ಪುತ್ತೂರು, ಮಾ.೧೫: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸುಮಾರು ಒಂದು ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ‘ಬ್ರಹ್ಮರಥ’ದ ಸಮರ್ಪಣಾ ಕಾರ್ಯವು ಮಾ.೧೭ರಂದು ನಡೆಯಲಿದೆ ಎಂದು ಬ್ರಹ್ಮರಥ ನಿರ್ಮಾಣದ ನೇತೃತ್ವ ವಹಿಸಿರುವ ಉದ್ಯಮಿ ಹಾಗೂ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಎನ್.ಮುತ್ತಪ್ಪ ರೈ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ನಾಡಿನ ಸಮಸ್ತ ಜನರ ಒಳಿತಿಗಾಗಿ ತಾನು ಬ್ರಹ್ಮರಥವನ್ನು ಸಮರ್ಪಿಸಲಿದ್ದು, ಜಾತಿ, ಮತ, ಭೇದವಿಲ್ಲದೆ ಹಾಗೂ ರಾಜಕೀಯ ತಾರತಮ್ಯವಿಲ್ಲದೆ ನಡೆಯಲಿರುವ ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮಕ್ಕೆ ‘ಈಶ್ವರ್ ಅಲ್ಲಾ ತೇರೇ ನಾಮ್ ಸಬ್‌ಕೋ ಸನ್ಮತಿ ದೇ ಭಗವಾನ್’ ಎಂಬ ಆಶಯದೊಂದಿಗೆ ಸರ್ವರನ್ನೂ ಆಹ್ವಾನಿಸುತ್ತಿರುವುದಾಗಿ ಅವರು ತಿಳಿಸಿದರು.
ಜಾತ್ರೋತ್ಸವಕ್ಕೆ ಎಲ್ಲ ಧರ್ಮೀಯರು ಸಹಕಾರ ನೀಡಿದ್ದು, ಮಸೀದಿ ಹಾಗೂ ಚರ್ಚ್‌ಗಳಲ್ಲಿಯೂ ಅಭಿನಂದನಾ ಬ್ಯಾನರ್ ಅಳವಡಿಸಲಾಗಿದೆ. ದಕ್ಷಿಣ ಭಾರತದಲ್ಲಿ ಅತೀ ದೊಡ್ಡದೆನಿಸಿದ ಬ್ರಹ್ಮರಥವು ೭೧ ಅಡಿ ಎತ್ತರ, ೨೦ ಅಡಿ ಅಗಲವಿದೆ. ನಿತ್ಯ ೨೦ಕ್ಕೂ ಅಧಿಕ ಮಂದಿ ಕಾಷ್ಟ ಶಿಲ್ಪಿಗಳು ವಿವಿಧ ಕೆತ್ತನೆ, ಜೋಡಣಾ ಕಾರ್ಯ ನಡೆಸಿದ್ದು, ರಥ ನಿರ್ಮಾಣ ಕಾರ್ಯದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಬ್ರಹ್ಮರಥ ಸಮರ್ಪಣೆ ಪ್ರಯುಕ್ತ ಮಾ.೧೭ರಂದು ಹಸಿರುವಾಣಿ ಮೆರವಣಿಗೆ ಕಾರ್ಯಕ್ರಮ ನಡೆಯಲಿದ್ದು, ಪುತ್ತೂರು ಉಪವಿಭಾಗಾಧಿಕಾರಿ ಡಾ.ಹರೀಶ್‌ಕುಮಾರ್ ಉದ್ಘಾಟಿಸಲಿದ್ದಾರೆ. ದೇವಳದ ಆಡಳಿತಾಧಿಕಾರಿ ವೈ.ಶಿವರಾಮಯ್ಯ ಉಪಸ್ಥಿತರಿರುವರು. ಉದ್ಘಾಟನಾ ಸಮಾರಂಭದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕಿ ಮಲ್ಲಿಕಾ ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ರಾತ್ರಿ ೭ಗಂಟೆಯಿಂದ ವೈದಿಕ ಹಾಗೂ ೮ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಉದಯಕುಮಾರ್ ಶೆಟ್ಟಿ ಮತ್ತು ಬಳಗ ಬೆಂಗಳೂರು ಇವರಿಂದ ಒಡಿಸ್ಸಿ, ಭರತನಾಟ್ಯ, ಕೂಚುಪುಡಿ ಮತ್ತು ಇತರ ನೃತ್ಯ ವೈಭವ ನಡೆಯಲಿದೆ ಎಂದು ತಿಳಿಸಿದರು.
ಈ ಪ್ರಯುಕ್ತ ಪುತ್ತೂರು ನಗರವನ್ನು ಮೈಸೂರು ದಸರಾ ಮಾದರಿಯಲ್ಲಿ ಅಲಂಕರಿಸಲಾಗುತ್ತಿದ್ದು, ಲೇಸರ್ ಶೋ, ವಿಶೇಷ ಸಿಡಿಮದ್ದು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಕೊಲ್ಹಾಪುರದ ೫೦ಮಂದಿಯ ತಂಡದಿಂದ ನಗಾರಿ ಪ್ರದರ್ಶನ, ೨೨೫ ಜಾನಪದ ತಂಡಗಳು ಕಾರ್ಯಕ್ರಮ ನೀಡಲಿವೆ ಹಾಗೂ ನಗೆಹಬ್ಬ, ಗಾನಕೋಗಿಲೆ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಮಾ.೨೧ರಂದು ನಡೆಯುವ ಧಾರ್ಮಿಕ ಸಮಾವೇಶದಲ್ಲಿ ಉಡುಪಿ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ, ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಶ್ವರ ಮಹಾ ಸ್ವಾಮೀಜಿ, ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿ, ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಭಾಗವಹಿಸಲಿದ್ದು, ಗೃಹ ಸಚಿವ ವಿ.ಎಸ್.ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಂಡ್ಯ ಸಂಸದ ಚೆಲುವರಾಯ ಸ್ವಾಮಿ ಮತ್ತು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿ ಲಿದ್ದಾರೆ ಎಂದು ಅವರು ತಿಳಿಸಿದರು.
ಮಾ.೨೨ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ರಥ ಸಮರ್ಪಣೆ ಮತ್ತು ರಥೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಕೃಷ್ಣ ಜೆ ಪಾಲೆಮಾರ್, ಎನ್.ಮುತ್ತಪ್ಪ ರೈ ಮತ್ತು ರೇಖಾ ಮತ್ತಪ್ಪ ರೈ ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮರಥ ಸಮರ್ಪಣಾ ಸಮಿತಿಯ ಸಂಚಾಲಕ, ಮುತ್ತಪ್ಪ ರೈಯ ಸಹೋದರ ಕರುಣಾಕರ ರೈ, ಅಧ್ಯಕ್ಷ ಎನ್.ಸುಧಾಕರ ಶೆಟ್ಟಿ, ಉಸ್ತುವಾರಿ ಜಗದೀಶ್ ನೆಲ್ಲಿಕಟ್ಟೆ, ಪ್ರಚಾರ ಸಮಿತಿಯ ಕರುಣಾಕರ ರೈ ಸಿ.ಎಚ್. ಉಪಸ್ಥಿತರಿದ್ದರು.
No comments:
Post a Comment