VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 24, 2010

ಉತ್ತಪ್ಪ ಅಬ್ಬರ : ರಾಯಲ್ ಗೆ ಗೆಲುವು




ಬೆಂಗಳೂರು:ರಾಬಿನ್ ಉತ್ತಪ್ಪ ಬಾರಿಸಿದ ಬಿರುಸಿನ ಅರ್ಧಶತಕ (ಅಜೇಯ 68, 38ಎಸೆತ) ಹಾಗೂ ವೇಗಿ ವಿನಯ್ ಕುಮಾರ್ (40ಕ್ಕೆ 4) ಮಾರಕ ದಾಳಿಗೆ ತತ್ತರಿಸಿದ ಚೆನ್ನೆ ಸೂಪರ್ ಕಿಂಗ್ಸ್ ಇಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯವನ್ನು 36 ರನ್ನುಗಳ ಅಂತರದಿಂದ ಕಳೆದುಕೊಂಡಿದೆ.

ಈ ಮೂಲಕ ಸತತ ನಾಲ್ಕನೇ ಜಯ ದಾಖಲಿಸಿರುವ ಅನಿಲ್ ಕುಂಬ್ಳೆ ಬಳಗ ಎಂಟು ಪಾಯಿಂಟ್‌ಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ್ಕಕೇರಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿಸಲ್ಪಟ್ಟ ಬೆಂಗಳೂರು ತಂಡದ ಆರಂಭ ಉತ್ತಮವಾಗಿರಲಿಲ್ಲ. ಸತತ ನಾಲ್ಕು ಪಂದ್ಯಗಳಲ್ಲಿ ನೌಟೌಟ್ ಆಗಿ ಉಳಿದಿದ್ದ ಜಾಕ್ವಾಸ್ ಕಾಲಿಸ್ (19) ಮೊದಲ ಬಾರಿಗೆ ವಿಕೆಟ್ ಒಪ್ಪಿಸಿದರು.


ಯುವ ಭರವಸೆಯ ಆಟಗಾರ ಮನೀಷ್ ಪಾಂಡೆ (20) ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾದರು. ದ್ವಿತೀಯ ಕ್ರಮಾಂಕಕ್ಕೆ ಭಡ್ತಿ ಪಡೆದಿದ್ದ 'ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ (14) ಕೂಡಾ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರು.

ನಂತರ ಬಂದ ರಾಬಿನ್ ಉತ್ತಪ್ಪ ತಂಡದ ಪರಿಸ್ಥಿತಿಯನ್ನೇ ಬದಲಾಯಿಸಿದರು. ಎರಡು ಬಾರಿ ಸಿಕ್ಕಿದ ಅಮೂಲ್ಯ ಜೀವದಾನದ ನೆರವಿನೊಂದಿಗೆ ಬಿರುಸಿದ ಬ್ಯಾಟಿಂಗ್ ಮಾಡಿದ ರಾಬಿನ್ ಮೈದಾನದಲ್ಲಿ ಸಿಕ್ಸರುಗಳ ಸುರಿಮಳೆಗೈದರು. ಉತ್ತಪ್ಪ 5 ಹಾಗೂ 25 ರನ್ ಗಳಿಸಿದ್ದಾಗ ಆರ್. ಅಶ್ವಿನ್ ಹಾಗೂ ಮುರಳಿ ವಿಜಯ್ ಕ್ಯಾಚ್ ಕೈಚೆಲ್ಲಿದ್ದರು.

ಕೇವಲ 38 ಎಸೆತಗಳನ್ನು ಎದುರಿಸಿದ ಉತ್ತಪ್ಪ ಮೂರು ಬೌಂಡರಿ ಹಾಗೂ ಆರು ಭರ್ಜರಿ ಸಿಕ್ಸರುಗಳ ನೆರವಿನಿಂದ ಅಜೇಯ 68 ರನ್ ಗಳಿಸಿದರು. ಪಂದ್ಯದ 19ನೇ ಓವರ್ ಎಸೆದಿದ್ದ ಎಲ್. ಬಾಲಾಜಿ ಓವರ್‌ನಲ್ಲಂತೂ ಉತ್ತಪ್ಪ ಹ್ಯಾಟ್ರಿಕ್ ಸಿಕ್ಸರುಗಳ ನೆರವಿನಿಂದ 24 ರನ್ ಸೊರೆಗೈದಿದ್ದರು.

ಬೌಷರ್ ಜೊತೆ ಸೇರಿದ ಉತ್ತಪ್ಪ ಆರನೇ ವಿಕೆಟ್‌ಗೆ ಕೇವಲ 19 ಎಸೆತಗಳಲ್ಲಿ ಮುರಿಯದ 52 ರನ್ ಒಟ್ಟು ಸೇರಿಸಿದ್ದರು. ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದ್ದ ವಿರಾಟ್ ಕೊಹ್ಲಿ ಕೂಡಾ 24 ರನ್ನುಗಳ ಅಮೂಲ್ಯ ಕೊಡುಗೆ ನೀಡಿದರು. ಅದೇ ರೀತಿ ವಿಕೆಟ್ ಕೀಪರ್ ಬೌಷರ್ ಅಜೇಯ 11 ರನ್ ಗಳಿಸಿದರು.

ಒಟ್ಟಾರೆಯಾಗಿ ಒಂದು ಹಂತದಲ್ಲಿ ಬೆಂಗಳೂರು ತಂಡಕ್ಕೆ 150ರ ಗಡಿ ದಾಟುವುದು ಕಷ್ಟವೆನಿಸಿದ್ದರೂ ಉತ್ತಪ್ಪ ನಡೆದಿಸ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರುಗಳಲ್ಲಿ 171 ರನ್ನುಗಳ ಸವಾಲಿನ ಮೊತ್ತವನ್ನೇ ಪೇರಿಸಿತು.

ಆದರೆ ಆರಂಭದಲ್ಲೇ ಒತ್ತಡಕ್ಕೊಳಗಾದ ಚೆನ್ನೈಸೂಪರ್ ಕಿಂಗ್ಸ್ ತಂಡದ ಬೃಹತ್ ಮೊತ್ತವನ್ನು ಬೆನ್ನತ್ತುವಲ್ಲಿ ಎಡವಟ್ಟು ನಡೆಸಿತು. ಆರಂಭಿಕ ಪಾರ್ಥಿವ್ ಪಾಟೇಲ್ (1), ಮ್ಯಾಥ್ಯೂ ಹೇಡನ್ (32), ಜಾರ್ಜ್ ಬೈಲಿ (18), ನಾಯಕ ಸುರೇಶ್ ರೈನಾ (9) ಮ್ತತು ಮುರಳಿ ವಿಜಯ್ (3) ಅಲ್ಪದರಲ್ಲೇ ವಿಕೆಟ್ ಒಪ್ಪಿಸಿದರು.

ಅಂತಿಮ ಹಂತದಲ್ಲಿ ಎಸ್ ಬದ್ರೀನಾಥ್ (31) ಮತ್ತು ಆಲ್ಬಿ ಮೊರ್ಕೆಲ್ (19) ದಿಟ್ಟ ಹೋರಾಟ ನಡೆಸಲೂ ಪ್ರಯತ್ನಿಸಿದರೂ ಅದು ಸಹಕಾರಿಯಾಗಲಿಲ್ಲ. ಉಳಿದಂತೆ ಆರ್. ಆಶ್ವಿನ್ ಅಜೇಯ 11 ರನ್ ಗಳಿಸಿದರು.

ಅಂತಿಮವಾಗಿ ರೈನಾ ಪಡೆ 20 ಓವರುಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 135 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಮಾರಕ ದಾಳಿ ಸಂಘಟಿಸಿದ ವಿನಯ್ ಕುಮಾರ್ ನಾಲ್ಕು ಹಾಗೂ ಕರಾರುವಕ್ ದಾಳಿ ಸಂಘಟಿಸಿದ ಅನಿಲ್ ಕುಂಬ್ಳೆ ಮತ್ತು ಪ್ರವೀಣ್ ಕುಮಾರ್ ತಲಾ ಒಂದು ವಿಕೆಟ್ ಕಿತ್ತರು.

ಬಿರುಸಿನ ಬ್ಯಾಟಿಂಗ್ ನಡೆಸಿದ ಉತ್ತಪ್ಪ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
-wd

No comments: